ಇತ್ತೀಚಿನ ಸುದ್ದಿ
ಅಕ್ರಮ ಮಾದಕ ವಸ್ತು ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್: 2 ಕೆಜಿಗೂ ಅಧಿಕ ಗಾಂಜಾ ವಶ
03/09/2025, 11:05

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ -ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿ ತಾಲ್ಲೂಕು ಕಬ್ಬಿನಕಾಡು – ಮರಂದೋಡ ಗ್ರಾಮದ ಹಾಗೂ ಅಸ್ಸಾಂ ರಾಜ್ಯ ಧರೋಂಗ್ ಜಿಲ್ಲೆ ಮೂಲದ ಅಮೀರ್ ಹುಸೈನ್ (34) ಮತ್ತು ಮುನಾವರ್ ಹುಸೈನ್ (34) ಎಂಬಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಮರಂದೋಡ ಗ್ರಾಮದ ಬಿದ್ದಂಡತಟ್ಟು ರಸ್ತೆಯಲ್ಲಿನ ಬಸ್ ನಿಲ್ದಾಣದ ಬಳಿ ಆರೋಪಿಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ – ಸರಬರಾಜು ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು 2 ಕೆಜಿ 288 ಗ್ರಾಂ ನಿಷೇಧಿತ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಡಿಕೇರಿ ಪೊಲೀಸ್ ಉಪ ವಿಭಾಗದ ಡಿ.ಎಸ್.ಪಿ. ಸೂರಜ್, ಮಡಿಕೇರಿ ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕರಾದ ಪಿ. ಅನೂಪ್ ಮಾದಪ್ಪ, ನಾಪೋಕ್ಲು ಸಬ್ ಇನ್ಸ್ ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.