ಇತ್ತೀಚಿನ ಸುದ್ದಿ
ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಯ ಬಂಧನ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಂತಕ ಕೊನೆಗೂ ಪೊಲೀಸ್ ಬಲೆಗೆ
17/05/2024, 12:34

ನೇಹಾ ಎಸ್. ಎನ್. ಪಾಟೀಲ್ ಹುಬ್ಬಳ್ಳಿ
info.reporterkarnataka@gmail.com
ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಗಿರೀಶ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ ರೈಲು ನಿಲ್ದಾಣದಲ್ಲಿ ಆರೋಪಿ ಗಿರೀಶನನ್ನು ಬಂಧಿಸಲಾಗಿದೆ.
ಗಿರೀಶ ರೈಲಿನಲ್ಲಿ ಮಹಿಳೆಯೊಬ್ಬರ ಜತೆ ಜಗಳವಾಡಿ ಆಕೆಗೆ ಚಾಕು ತೋರಿಸಿ ಬೆದರಿಸಿದ್ದ. ಇದರಿಂದ ರೊಚ್ಚಿಗೆದ್ದ ಸಹ ಪ್ರಯಾಣಿಕರು ಆತನ ಹಿಡಿದು ಥಳಿಸಿದ್ದರು. ನಂತರ ಆತ ರೈಲಿನಿಂದ ಜಿಗಿದು ಓಡಲಾರಂಭಿಸಿದ. ಅಷ್ಟರಲ್ಲಿ ಯಾರೋ ಒಬ್ಬರು ಆತ ಅಂಜಲಿ ಕೊಲೆ ಮಾಡಿದವ ಎಂದು ಗುರುತಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ದಾವಣಗೆರೆ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಮಾಯಕೊಂಡಕ್ಕೆ ಬಂದ ಹುಬ್ಬಳ್ಳಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಚ್ಚು ಪ್ರೇಮಿಯೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕೊಲೆಗೀಡಾದ ನತದೃಷ್ಟೆಯನ್ನು 21ರ ಹರೆಯದ ವೀರಾಪುರ ಓಣಿಯ ನಿವಾಸಿ ಅಂಜಲಿ ಮೋಹನ ಅಂಬಿಗೇರ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಆರೋಲಿ ಯಲ್ಲಾಪುರ ಓಣಿಯ ಗಿರೀಶ ಸಾವಂತ ಎಂದು ಗುರುತಿಸಲಾಗಿದೆ.
ಗಿರೀಶ್ ಸಾಮಂತ ಅಂಜಲಿಯನ್ನು ಏಕಮುಖ ಪ್ರೀತಿಸುತ್ತಿದ್ದ. ಆದರೆ ಅಂಜಲಿ ಪ್ರೀತಿ ನಿರಾಕರಿಸಿದ್ದಳು. ಇದರಿಂದ ಕ್ರೋಧಗೊಂಡ ಗೌರೀಶ ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಂಜಲಿಯ ಮನೆಗೆ ಹೋಗಿ ಬಾಗಿಲು ತಟ್ಟಿದ್ದಾನೆ. ಆಗ ಅಂಜಲಿಯೇ ಬಾಗಿಲು ತೆರೆದಾಗ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೃತ್ಯ ಎಸಗಿದ ಗಿರೀಶ ಪರಾರಿಯಾಗಿದ್ದಾನೆ. ಆತನ ತಾಯಿ ಮನೆ ಮನೆಯ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಬೆಂಡಿಗೇರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.