ಇತ್ತೀಚಿನ ಸುದ್ದಿ
ಹೊಸ ವರ್ಷಕ್ಕೆ ಸಿಹಿಸುದ್ದಿ; ವೈಜಾಗ್ ಸ್ಟೀಲ್ ಕಾರ್ಖಾನೆಗೆ ಮರುಜೀವ; ಪಿಎಂಒ ಜತೆ ಕೇಂದ್ರದ ಉಕ್ಕು ಸಚಿವ ಕುಮಾರಸ್ವಾಮಿ ಮಾತುಕತೆ
01/01/2025, 10:01
*ಹೊಸ ವರ್ಷದ ಆರಂಭದಲ್ಲಿಯೇ ವೈಜಾಗ್ ಸ್ಟೀಲ್ ಕಾರ್ಖಾನೆ ಪುನಶ್ಚೇತನ ಯೋಜನೆ*
*ವಿಕಸಿತ ಭಾರತ 2047; ಪ್ರಧಾನಿಗಳ ಗುರಿ ಮುಟ್ಟಲು ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕಾಯಕಲ್ಪ ಎಂದ ಕೇಂದ್ರ ಸಚಿವರು*
ಹೊಸದಿಲ್ಲಿ(reporterkarnataka.com): ಬಹುತೇಕ ಖಾಸಗೀಕರಣದ ಹೊಸ್ತಿಲಲ್ಲಿದ್ದ ಭಾರತೀಯ ರಾಷ್ಟ್ರೀಯ ಉಕ್ಕು ನಿಗಮ (RINL) ಅಥವಾ ವೈಜಾಗ್ ಸ್ಟೀಲ್ ಕಾರ್ಖಾನೆಯನ್ನು ಹೊಸ ವರ್ಷದಲ್ಲಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಯತ್ನ ಫಲಕಾರಿಯಾಗಿದೆ.
ಹೊಸ ವರ್ಷದ ಆರಂಭದಲ್ಲಿಯೇ ವೈಜಾಗ್ ಸ್ಟೀಲ್ ಕಾರ್ಖಾನೆ ಪುನಶ್ಚೇತನ ಯೋಜನೆ ಘೋಷಣೆ ಆಗುವ ಸಾಧ್ಯತೆ ಇದೆ. 2030ಕ್ಕೆ ದೇಶದ ಉಕ್ಕು ಉತ್ಪಾದನೆ ಪ್ರಮಾಣವನ್ನು 300 ದಶಲಕ್ಷ ಟನ್ ಗಳಿಗೆ ಹೆಚ್ಚಿಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಮಾಡಿರುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕೇಂದ್ರ ಉಕ್ಕು ಸಚಿವರು ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿದ್ದಾರೆ.
ಶೇ.100ರಷ್ಟು ಬಂಡವಾಳ ವಾಪಸಾತಿ ನಿರ್ಧಾರದಿಂದ ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣ ಆಗುವ ಹಂತದಲ್ಲಿದ್ದ ವೈಜಾಗ್ ಸ್ಟೀಲ್ ಗೆ ಕೊನೆಗೂ ಜೀವದಾನವಾಗುತ್ತಿದೆ. ಈ ಬಗ್ಗೆ ಕಾರ್ಖಾನೆಗೆ ಮರುಜೀವ ಕೊಡುವ ಪುನಶ್ಚೇತನ ಯೋಜನೆಯ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಜತೆ ಕೇಂದ್ರ ಸಚಿವರು ವಿಸ್ತೃತ ಸಮಾಲೋಚನೆ ನಡೆಸಿದ್ದಾರೆ.
ಪ್ರಧಾನಿಗಳ ಕನಸಿನ ‘ವಿಕಸಿತ ಭಾರತ 2047’ ಗುರಿ ತಲುಪಲು ಭಾರತೀಯ ಉಕ್ಕು ಕ್ಷೇತ್ರದ ಕೊಡುಗೆ ಮಹತ್ವವಾದದ್ದು. ಈ ದಿಸೆಯಲ್ಲಿ ಪ್ರಧಾನಿಗಳ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರ ಸರಕಾರ ಕಾಯಕಲ್ಪ ನೀಡುತ್ತಿದೆ ಎಂದು ಹೇಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ತಾವು ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ 2024 ಜುಲೈ 10-11ರಂದು ವೈಜಾಗ್ ಸ್ಟೀಲ್ ಕಾರ್ಖಾನೆಗೆ ಭೇಟಿ ನೀಡಿದ್ದರು.
ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ಹಣಕಾಸು ಸಚಿವಾಲಯವು ವೈಜಾಗ್ ಸ್ಟೀಲ್ ಕಾರ್ಖಾನೆ ಪುನಚ್ಚೇತನ ಯೋಜನೆ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮುಖ್ಯವಾಗಿ ವಿಶೇಷವಾಗಿ ಕಾರ್ಖಾನೆಯ ಸಾಲಗಳ ಪುನಾರಚನೆ ಮತ್ತು ಹಣಕಾಸಿನ ಬೆಂಬಲದ ಅಗತ್ಯಗಳನ್ನು ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕೂಡ ಕೇಂದ್ರ ಉಕ್ಕು ಸಚಿವರು ನಿರ್ಮಲಾ ಸೀತಾರಾಮನ್ ಅವರೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದ್ದಾರೆ.
*RINL ಭಾರತದ ಉಕ್ಕು ಉದ್ಯಮದ ಆಧಾರ ಸ್ತಂಭ:*
ವೈಜಾಗ್ ಸ್ಟೀಲ್ ಎಂದೇ ಹೆಸರಾಗಿರುವ RINL, ಪ್ರಾರಂಭದಿಂದಲೂ ಭಾರತದ ಉಕ್ಕು ಕ್ಷೇತ್ರದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿದೆ. ಅನೇಕ ವರ್ಷಗಳ ಕಾಲ ವೈಭವದಿಂದ ಕಾರ್ಯ ನಿರ್ವಹಿಸಿದ್ದ ಕಾರ್ಖಾನೆಯು, ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಸಾಲ, ಕಾರ್ಯಾಚರಣೆಯ ಅಸಮರ್ಥತೆ ಮತ್ತು ಜಾಗತಿಕ ಮಾರುಕಟ್ಟೆ ಒತ್ತಡಗಳಿಂದಾಗಿ ತೀವ್ರ ಹಣಕಾಸು ಬಿಕ್ಕಟ್ಟಿಗೆ ಸಿಕ್ಕಿತ್ತು. ಕಾರ್ಖಾನೆಯನ್ನು ಪುನಚ್ಚೇತನಗೊಳಿಸುವುದು ಎಂದರೆ ಕೇವಲ ಕಾರ್ಖಾನೆಯ ರಕ್ಷಣೆ ಮಾತ್ರವಲ್ಲ, ಸಾವಿರಾರು ಕಾರ್ಮಿಕರ ಜೀವನೋಪಾಯವನ್ನು ರಕ್ಷಣೆ ಮಾಡುವುದು ಹಾಗೂ ದೇಶದ ಉಕ್ಕು ಅಗತ್ಯಗಳಿಗಳಿಗೆ ಇದೇ ಕಾರ್ಖಾನೆಯಿಂದ ದೊಡ್ಡ ಕೊಡುಗೆ ನೀಡುವುದೇ ಆಗಿದೆ ಎಂದು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈಗಾಗಲೇ ವೈಜಾಗ್ ಸ್ಟೀಲ್ ಕಾರ್ಖಾನೆಯ ಪುನಚ್ಚೇತನಕ್ಕಾಗಿ ಸರಣಿ ಸಭೆಗಳನ್ನು ನಡೆಸಿರುವ ಸಚಿವರು; ಪ್ರಧಾನಿಗಳ ಕಾರ್ಯಾಲಯ, ಹಣಕಾಸು ಸಚಿವಾಲಯ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಕಾರ್ಮಿಕ ಸಂಘಟನೆಗಳ ಜತೆಯೂ ನಿರಂತರ ಮಾತುಕತೆ ನಡೆಸಿದ್ದರು.
ಕಾರ್ಖಾನೆ ಪುನಚ್ಚೇತನ ಎಂದರೆ ಕಾರ್ಖಾನೆ ಹೊಂದಿರುವ ಸಾಲ ಪುನಾರಚನೆ, ಸೌಲಭ್ಯಗಳ ಆಧುನೀಕರಣ, ತಾಂತ್ರಿಕ ಉನ್ನತೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ಸಚಿವರು; ಜಾಗತಿಕ ಮಾರುಕಟ್ಟೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಖಾನೆಯನ್ನು ಸಜ್ಜುಗೊಳಿಸಲು ಸಚಿವರು ಊದೇಶಿಸಿದ್ದಾರೆ. ಪುನಚ್ಚೇತನ ಯೋಜನೆಯಲ್ಲಿ ಇವೆಲ್ಲಾ ಅಂಶಗಳು ಸೇರಿವೆ.
*RINL ಪುನಶ್ಚೇತನ ರಾಷ್ಟ್ರೀಯ ಆದ್ಯತೆ:*
RINL ಕಾರ್ಖಾನೆಗೆ ಮರುಜೀವ ನೀಡುವ ಯೋಜನೆ ರಾಷ್ಟ್ರೀಯ ಆದ್ಯತೆ ಎಂದು ಬಣ್ಣಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಭಾರತದ ಕೈಗಾರಿಕಾ ಪರಂಪರೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಸರಕಾರ ಇಟ್ಟಿರುವ ದಿಟ್ಟ ಹೆಜ್ಜೆ ಇದಾಗಿದೆ ಇಂದು ಹೇಳಿದ್ದಾರೆ.
ಪ್ರಧಾನಿಗಳ ಕಾರ್ಯಾಲಯದ ಸ್ಪಷ್ಟ ಭರವಸೆ ಹಾಗೂ ಹಣಕಾಸು ಸಚಿವಾಲಯದ ಸಹಕಾರ ಕಾರ್ಖಾನೆಯನ್ನು ಉಳಿಸುವ ಪಯತ್ನಕ್ಕೆ ಕಾರಣವಾಗಿದೆ. ಇದು ಕೇವಲ ಉಕ್ಕಿನ ಸ್ಥಾವರವನ್ನು ಪುನರುಜ್ಜೀವನಗೊಳಿಸುವುದಷ್ಟೇ ಅಲ್ಲ, ಸಾವಿರಾರು ಕಾರ್ಮಿಕರ ಕುಟುಂಬಗಳ ಜೀವನೋಪಾಯ ಕಾಪಾಡುವುದೇ ಆಗಿದೆ. ಅಲ್ಲದೆ; ದೇಶೀಯ ಉಕ್ಕು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಆಮದು ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ. ವೈಜಾಗ್ ಸ್ಟೀಲ್ ಭಾರತದ ಕೈಗಾರಿಕೆ ಕ್ಷೇತ್ರದ ಶಕ್ತಿ ಮತ್ತು ಹೆಮ್ಮೆಯ ಸಂಕೇತ, ಮತ್ತು ಅದರ ಯಶಸ್ಸು ಯಾವುದೇ ಸವಾಲನ್ನು ಜಯಿಸುವ ಭಾರತದ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದ ಭವಿಷ್ಯದ ಅಗತ್ಯಗಳಿಗೆ, ಬೇಡಿಕೆಗಳಿಗೆ ಈ ಕಾರ್ಖಾನೆ ಬಹುದೊಡ್ಡ ಕೊಡುಗೆ ನೀಡಲಿದೆ. ಪ್ರಧಾನಿ ಅವರ ಗುರಿಯಾದ ‘ವಿಕಸಿತ ಭಾರತ 2047’ ಗುರಿ ಸಾಧಿಸಲು ವೈಜಾಗ್ ಸ್ಟೀಲ್ ಕಾರ್ಖಾನೆಗೆ ಮರುಜೀವ ಕೊಡುವ ಯೋಜನೆ ಮಹತ್ವದ ಉಪಕ್ರಮವಾಗಿದೆ. ರಾಷ್ಟ್ರದ ಹಿತಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಭಾರತದ ಗುರಿಗೆ ಈ ಕಾರ್ಖಾನೆ ಗಣನೀಯ ಕೊಡುಗೆ ನೀಡುತ್ತದೆ ಎನ್ನುವ ವಿಶ್ವಾಸ ಸರ್ಕಾರಕ್ಕೆ ಇದೆ ಎಂದು ಅವರು ಸಚಿವರು ತಿಳಿಸಿದ್ದಾರೆ.
ನಮ್ಮ ಪ್ರಯತ್ನ ಉಕ್ಕಿನ ಸ್ಥಾವರವನ್ನು ಪುನರುಜ್ಜೀವನಗೊಳಿಸುವುದಷ್ಟೇ ಅಲ್ಲ, ಸಾವಿರಾರು ಕಾರ್ಮಿಕರ ಕುಟುಂಬಗಳ ಜೀವನೋಪಾಯ ಕಾಪಾಡುವುದೇ ಆಗಿದೆ. ದೇಶೀಯ ಉಕ್ಕು ಉತ್ಪಾದನೆಯನ್ನು ಹೆಚ್ಚಿಸುವುದು, ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವುದು ನಮ್ಮ ಗುರಿ. ವೈಜಾಗ್ ಸ್ಟೀಲ್ ಭಾರತದ ಕೈಗಾರಿಕೆ ಕ್ಷೇತ್ರದ ಶಕ್ತಿ ಮತ್ತು ಹೆಮ್ಮೆಯ ಸಂಕೇತ, ಮತ್ತು ಅದರ ಯಶಸ್ಸು ಯಾವುದೇ ಸವಾಲನ್ನು ಜಯಿಸುವ ಭಾರತದ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ನೀಡುತ್ತದೆ.
– ಎಚ್.ಡಿ.ಕುಮಾರಸ್ವಾಮಿ
(ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು)