ಇತ್ತೀಚಿನ ಸುದ್ದಿ
ಹೊರಗುತ್ತಿಗೆ ಸಿಬ್ಬಂದಿಗಳ ಮೇಲೆ ಮತ್ತೆ ಗದೆ ಎತ್ತಿದ ಪಾಲಿಕೆ: ನೀರು ಸರಬರಾಜು ವಿಭಾಗದ 39 ಮಂದಿ ನೌಕರರ ವಜಾಕ್ಕೆ ಪಟ್ಟಿ ಸಿದ್ಧ?
31/12/2021, 09:12
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಮಂಗಳೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಇಲ್ಲಿನ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅನಿಶ್ಚಿತತೆ ಎದುರಾಗುತ್ತದೆ. 2008ರ ಘಟನೆ ಮತ್ತೆ ಪುನರಾವರ್ತನೆಯ ಎಲ್ಲ ಲಕ್ಷಣ ಇದೀಗ ಕಾಣುತ್ತಿದೆ. ಪಾಲಿಕೆ ಆಡಳಿತ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಹೊಡೆಯಲು ಬಿಲ್ಲು ಎತ್ತಿ ನಿಂತಿದೆ. 39 ಮಂದಿ ಹೊರಗುತ್ತಿಗೆ ಸಿಬ್ಬಂದಿಗಳನ್ನು ವಜಾ ಮಾಡಲು ಪಟ್ಟಿ ಸಿದ್ಧವಾಗಿದೆ.
ಆಡಳಿತ ಸುಧಾರಣೆ ಹಾಗೂ ಆದಾಯ ಸೋರಿಕೆ ತಡೆಯುವಲ್ಲಿ ವಿಫಲವಾಗಿರುವ ಪಾಲಿಕೆ ಇದೀಗ ಹೊರಗುತ್ತಿಗೆ ಆಧಾರದಲ್ಲಿ ತಿಂಗಳಿಗೆ ಕೇವಲ 12 ಸಾವಿರ ರೂ. ಸಂಬಳಕ್ಕೆ ದುಡಿಯುವ
ನೀರು ಸರಬರಾಜು ವಿಭಾಗದ ಸುಮಾರು 39 ಮಂದಿ ನುರಿತ ಸಿಬ್ಬಂದಿಗಳಿಗೆ ಕೊರೊನಾದ ಕಷ್ಟಕಾಲದಲ್ಲಿ ಗೇಟ್ ಪಾಸ್ ನೀಡಲು ಸಿದ್ಧತೆ ನಡೆಸಿದೆ. ವಿಶೇಷವೆಂದರೆ ಈ ಸಿಬ್ಬಂದಿಗಳೆಲ್ಲ ಸುಮಾರು10- 15 ವರ್ಷಗಳಿಂದ ತಮ್ಮರಕ್ತವನ್ನು ಬೆವರಿನ ರೂಪದಲ್ಲಿ ಸುರಿದು ಇಲ್ಲಿ ದುಡಿಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು 45 ವರ್ಷ ಮೇಲ್ಪಟ್ಟವರಾಗಿದ್ದಾರೆ. ಕೆಲಸ ಕಳೆದುಕೊಂಡರೆ ಅವರಿಗೆ ಬೇರೆ ಕಡೆ ಕೆಲಸ ಸಿಗುವುದು ಕೂಡ ಇಂದಿನ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯವಾಗಿದೆ.
2008ರಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗಲೂ ಪಾಲಿಕೆಯಲ್ಲಿ ಇಂತಹದ್ದೇ ಪ್ರಯತ್ನ ನಡೆದಿತ್ತು. ಆಗ ಇಲ್ಲಿ ಕಮಿಷನರ್ ಆಗಿದ್ದ ಐಎಎಸ್ ಅಧಿಕಾರಿ ಸಮೀರ್ ಶುಕ್ಲಾ ಅವರು ಹೊರಗುತ್ತಿಗೆ ಸಿಬ್ಬಂದಿಗಳನ್ನು ಕೈಬಿಡಲು ಯತ್ನಿಸಿದ್ದರು. ನಂತರ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಈ ಪ್ರಸ್ತಾಪ ಬಿದ್ದು ಹೋಗಿತ್ತು. ಇದೀಗ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಅಕ್ಷಯ್ ಶ್ರೀಧರ್ ಎಂಬ ಐಎಎಸ್ ಅಧಿಕಾರಿ ಕಮಿಷನರ್ ಆಗಿ ಬಂದಿದ್ದಾರೆ. ಮತ್ತೆ ವಜಾ ಪ್ರಸ್ತಾಪ ಮುನ್ನಲೆಗೆ ಬಂದಿದೆ.
ಪಾಲಿಕೆಯಲ್ಲಿ ದಶಕಗಳಿಂದ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಮಂಗಳೂರು ಜನತೆಗೆ ಬಿಜೆಪಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿ ಭಾಗ್ಯದ ಬಾಗಿಲು ತೆರೆಯುವುದು ಬಿಡಿ, ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ 10% ಬ್ರೇಕ್ ಹಾಕಲು ಕೂಡ ಸಾಧ್ಯವಾಗಲಿಲ್ಲ ಎಂದು ನೊಂದ ನಾಗರಿಕರು ಹೇಳುತ್ತಾರೆ. ಇಲ್ಲಿನ ಭ್ರಷ್ಟಾಚಾರದ ಸ್ಯಾಂಪಲ್ ಇತ್ತೀಚೆಗೆ ವೀಡಿಯೊವೊಂದರ ಮೂಲಕ ಬಹಿರಂಗವಾಗಿದೆ.
ಆದಾಯ ಸೋರಿಕೆ ತಡೆಗಟ್ಟಲು, ನೌಕರರಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು, ಬ್ರೋಕರ್ ಹಾವಳಿ ತಪ್ಪಿಸಲು ಬಿಜೆಪಿ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಇದರೊಂದಿಗೆ ಹೊಸದಾಗಿ ಆಯ್ಕೆಗೊಂಡ ಕಾರ್ಪೊರೇಟರ್ ಗಳಲ್ಲಿ ಕೆಲವರು ತಾವು ಮಿನಿ ಎಮ್ಮೆಲ್ಲೆಗಳು ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ.
ಇವೆಲ್ಲದರ ನಡುವೆ ಪಾಲಿಕೆಯ ನೀರು ಸರಬರಾಜು ವಿಭಾಗದಲ್ಲಿ ಕಳೆದ 10-15 ವರ್ಷಗಳಿಂದ ದುಡಿದು ಇದೀಗ ಮಧ್ಯ ವಯಸ್ಸಿನ ಜೀವನ ನಡೆಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂ ಆಗಿ ಪಾಲಿಕೆಯಿಂದ ಹೊರ ಹಾಕಲು ಸ್ಕೆಚ್ ಹಾಕಲಾಗಿದೆ. ಇದಕ್ಕೆ ಪಾಲಿಕೆ ಅಧಿಕಾರಿಗಳು ಸಿ ಆಂಡ್ ಆರ್( ಕೇಡರ್ ಆಂಡ್ ರಿಕ್ರ್ಯೂಟ್ ಮೆಂಟ್) ಪ್ರಕಾರ ಸಿಬ್ಬಂದಿಗಳು ಇರಬೇಕು ಎನ್ನುವ ಸಾಬೂಬು ನೀಡುತ್ತಿದ್ದಾರೆ. ಪ್ರಸ್ತುತ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿ ಆಂಡ್ ಆರ್ ನಿಯಮಕ್ಕಿಂತ ಹೆಚ್ಚು ಸಿಬ್ಬಂದಿಗಳಿದ್ದಾರೆ ಎನ್ನುವ ನೆಪ ಮುಂದಿಟ್ಟುಕೊಂಡು 10- 15 ವರ್ಷಗಳಿಂದ ಪಾಲಿಕೆಯಲ್ಲಿ ಕತ್ತೆ ದುಡಿದ ಹಾಗೆ ದುಡಿದ ಸಿಬ್ಬಂದಿಗಳನ್ನು ಕೈಬಿಡಲು ತಂತ್ರಗಾರಿಕೆ ಹಣೆಯಲಾಗಿದೆ.
ಹಾಗಾದರೆ ಪಾಲಿಕೆಯಲ್ಲಿರುವ ಸಿ ಆಂಡ್ ಆರ್ ಆದರೂ ಯಾವಾಗದ್ದು? ಪಾಲಿಕೆ ಯಾವ ಇಸವಿಯ ಸಿ ಎಂಡ್ ಆರ್ ಪ್ರಕಾರ ಇದೀಗ ಲೆಕ್ಕಾಚಾರ ಹಾಕುತ್ತಿದೆ? ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ವಾಸ್ತವದಲ್ಲಿ ಪಾಲಿಕೆಯಲ್ಲಿ ಪ್ರಸ್ತುತವಿರುವುದು ಓಬಿರಾಯನ ಕಾಲದ ಸಿ ಎಂಡ್ ಆರ್ ಆಗಿದೆ. ಮಂಗಳೂರು ಮುನ್ಸಿಪಾಲಿಟಿ ಅಸ್ತಿತ್ವದಲ್ಲಿರುವಾಗ ಸಿದ್ಧಪಡಿಸಿದ ಸಿ ಎಂಡ್ ಆರ್ ಇದಾಗಿದೆ. ಆಗ ಮಂಗಳೂರಿನಲ್ಲಿ 1 ಲಕ್ಷ ಜನಸಂಖ್ಯೆ ಇತ್ತು. ಇದೀಗ ಮಹಾನಗರಪಾಲಿಕೆಯಾಗಿದೆ. ಸ್ಮಾರ್ಟ್ ಸಿಟಿ ಗರಿ ಬಂದಿದೆ. 5ರಿಂದ 6 ಲಕ್ಷ ಜನಸಂಖ್ಯೆ ಇದೆ. ಇಷ್ಟೆಲ್ಲ ಜನಸಂಖ್ಯೆ ಹೆಚ್ಚಾದ ಬಳಿಕವೂ ಸಿಬ್ಬಂದಿಗಳು ಹೆಚ್ಚಾಗುವುದಾದರೂ ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಈ ಕುರಿತು ಮೇಯರ್ ಪ್ರೇಮಾನಂದ ಶೆಟ್ಟಿ(9448300255) ಹಾಗೂ ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್(9945794353) ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಅವರು ಕರೆ ಸ್ವೀಕರಿಸಿಲ್ಲ. ಅದೇನೇ ಇರಲಿ, ದಶಕಗಳಿಂದ ಪಾಲಿಕೆಯಲ್ಲಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಈ ಸಿಬ್ಬಂದಿಗಳಲ್ಲಿ ಹೆಚ್ಚಿನವರು 40 ವರ್ಷ ಮೇಲ್ಪಟ್ಟವರಾಗಿದ್ದಾರೆ. ಪಾಲಿಕೆ ಇವರನ್ನು ಕೈಬಿಟ್ಟರೆ ಕೊರೊನಾದ ಈ ಕಷ್ಟಕಾಲದಲ್ಲಿ ಅವರಿಗೆ ಬೇರೆ ಎಲ್ಲೂ ಕೆಲಸ ಸಿಗುವ ಸಾಧ್ಯತೆ ಬಹಳ ಕಡಿಮೆ. ಇವರ ದುಡಿಮೆಯನ್ನೇ ನಂಬಿದ ಕುಟುಂಬಗಳು ಬೀದಿಗೆ ಬೀಳುತ್ತದೆ. ಇದರ ಹೊಣೆಗಾರಿಕೆಯನ್ನು ಇಲ್ಲಿನ ಮೇಯರ್, ಕಮಿಷನರ್ ಮಾತ್ರವಲ್ಲದೆ ಇಡೀ ಪಾಲಿಕೆ ಹೊರಬೇಕಾಗುತ್ತದೆ