2:10 PM Saturday27 - July 2024
ಬ್ರೇಕಿಂಗ್ ನ್ಯೂಸ್
ಧಾರಾಕಾರ ಮಳೆ: ತೀರ್ಥಹಳ್ಳಿ ರಥಬೀದಿಯಲ್ಲಿ ಮನೆ ಗೋಡೆ ಕುಸಿತ ಬಿರುಸಿನ ಗಾಳಿ ಮಳೆ: ಚಿಕ್ಕಮಗಳೂರು ಜಿಲ್ಲೆಯ 6 ತಾಲೂಕುಗಳ ಶಾಲೆಗಳಿಗೆ ಇಂದು ರಜೆ ಅವ್ಯಾಹತ ಬಿರುಸಿನ ಗಾಳಿ ಮಳೆ: ತೀರ್ಥಹಳ್ಳಿ ತಾಲೂಕಿನಾದ್ಯಂತ ನಾಳೆ ಶಾಲಾ- ಕಾಲೇಜುಗಳಿಗೆ ರಜೆ ವಾಹನಗಳಲ್ಲಿ ಪ್ರಖರ ಬೆಳಕಿನ ಬಲ್ಬ್ ಅಳವಡಿಕೆ: ಒಟ್ಟು 1170 ಪ್ರಕರಣ ದಾಖಲು; 5.86… ನಾಗಬೇನಾಳ: ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ: ಮರೋಳಿಯ ಡೇಂಜರ್ ಟ್ರೀ ತೆರವಿಗೆ ಮೀನಮೇಷ! ಸ್ಪೆಲ್ ಬೀ ರಾಜ್ಯಮಟ್ಟದ ಗ್ರ್ಯಾಂಡ್ ಫಿನಾಲೆ: ಮೇರಿಹಿಲ್ ಮೌಂಟ್ ಕಾರ್ ಮೆಲ್ ಸೆಂಟ್ರಲ್… 3 ಘಾಟ್ ಗಳಲ್ಲಿ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಸಮನ್ವಯತೆ ಕೊರತೆ ಬಗ್ಗೆ ಪಿಡಬ್ಲ್ಯೂಡಿ… ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಭಾರೀ ಹೆಚ್ಚಳ: ತಗ್ಗು ಪ್ರದೇಶ ಮುಳುಗಡೆ;… ಪ್ರವಾಹ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಜಲದಿಗ್ಬಂಧನ

ಇತ್ತೀಚಿನ ಸುದ್ದಿ

ಹೋಳಿ ಅಂದ್ರೆ ಕೇವಲ ಬಣ್ಣ ಹಚ್ಚಿ ಆಡೋ ಹಬ್ಬನಾ?: ಆಚರಣೆ ಹಿಂದಿನ ಪುರಾಣದ ನಂಟೇನು? ವೈಜ್ಞಾನಿಕ ಹಿನ್ನೆಲೆ ಏನು?

24/03/2024, 21:19

ವೈವಿಧ್ಯಗಳ ಆಗರ ನಮ್ಮ ಭಾರತ. ನಮ್ಮಲ್ಲಿ ಹಬ್ಬಗಳಿಗೇನು ಕೊರತೆ ಇಲ್ಲಾ , ಮಳೆಗಾಲ, ಚಳಿಗಾಲ ಅಥವಾ ಬೇಸಿಗೆ ಇರಲಿ, ಇಲ್ಲಾ ಹುಣ್ಣಿಮೆ ಅಥವಾ ಅಮಾವಾಸ್ಯೆ ಹೀಗೆ ಏನೇ ಬರಲಿ ಎಲ್ಲಾ ಸಂದರ್ಭದಲ್ಲೂ ನಾವು ಭಾರತೀಯರು ಹಬ್ಬಗಳನ್ನ ಆಚರಿಸುತ್ತೇವೆ. ಆದರೆ ಇಲ್ಲಿ , ಇಡೀ ದಿನ ಉಪವಾಸ ಮಾಡಿ ಮಾಡೋ ಏಕಾದಶಿ ಇರಬಹುದು, ಹೊಟ್ಟೆ ತುಂಬಾ ಒಬ್ಬಟ್ಟು ಪಾಯಸ ತಿನ್ನೋ ಯುಗಾದಿ ಇರ್ಬಹುದು , ಇಲ್ಲಾ ಇಡೀ ರಾತ್ರಿ ನಿದ್ದೆಯಿಲ್ಲದೆ ಮಾಡೋ ಶಿವರಾತ್ರಿ, ಕಷಾಯ ಕುಡಿಯೋ ಆಷಾಡ ಅಮಾವಾಸ್ಯೆ ಹೀಗೆ ಏನೇ ಇರ್ಲಿ ಹಬ್ಬಗಳಿವೆ. ಕೆಲವೊಂದು ಶಿಸ್ತಿನ ಕಟ್ಟುನಿಟ್ಟಿನ ಹಬ್ಬಗಳಾದ್ರೆ , ಇನ್ನೂ ಕೆಲವೊಂದು ಮನಸ್ಸನ್ನ ಮುದಗೊಳಿಸುವಂತೆ ಆಚರಿಸುವ ಹಬ್ಬ. ಪ್ರತಿ ಹಬ್ಬಕ್ಕೂ ಅದರದೇ ಆದ ಆಚಾರ ವಿಚಾರ ರೀತಿ ನೀತಿ ಇರುತ್ತದೆ ಅನ್ನೋದು ಅಷ್ಟೇ ಮುಖ್ಯ.
ಉತ್ತರಾಯಣ , ಶಿಶಿರ ಋತು , ಫಾಲ್ಗುಣ ಮಾಸ , ಶುಕ್ಲ ಪಕ್ಷದ , ಹುಣ್ಣಿಮೆಯನ್ನು “ಹೋಳಿ ಹುಣ್ಣಿಮೆ” ಅಂತ ಬಣ್ಣಗಳನ್ನ ಎರಚಿ ಹಬ್ಬ ಆಚರಿಸುತ್ತೇವೆ. ಅದರ ಹಿಂದಿನ ದಿನವನ್ನ ಹೋಳಿ ದಹನ ಅಂತ ಆಚರಿಸುತ್ತೇವೆ. ಹಾಗಾದರೆ ಹೋಳಿ ಹಬ್ಬ ಅಂದರೆ ಕೇವಲ ಬಣ್ಣ ಹಚ್ಚಿ ಆಡೋ ಹಬ್ಬ ಮಾತ್ರನಾ?
ಹೋಳಿ ಹಬ್ಬದ ಹಿನ್ನಲೆ
1. ಭಾಗವತ ಪುರಾಣದಲ್ಲಿ ಹೇಳಿರುವಂತೆ, ಹಿರಣ್ಯಕಶ್ಯಪು , ರಾಕ್ಷಸರ ರಾಜನಾಗಿದ್ದು ದುರಹಂಕಾರಿ ಆಗಿರುತ್ತಾನೆ. ಒಮ್ಮೆ ಬ್ರಹ್ಮ ದೇವನನ್ನು ಕುರಿತು ತಪಸ್ಸು ಮಾಡಿ ವರವನ್ನು ಕೇಳಿ ಪಡೆದು ಕೊಳ್ಳುತ್ತಾನೆ. ಅದರಂತೆ ಅವನಿಗೆ ಪ್ರಾಣಿಯಿಂದ, ಮನುಷ್ಯರಿಂದ, ಸಾವು ಬರಲು ಸಾದ್ಯವಿಲ್ಲ. ಜೊತೆಗೆ ಹಗಲು , ರಾತ್ರಿ , ಒಳಗೆ , ಹೊರಗೆ , ನೀರು , ಗಾಳಿ ಹೀಗೆ ಎಲ್ಲೂ ಸಾವು ಬರಲು ಸಾದ್ಯವಿಲ್ಲದಂತ ವರ ಪಡೆದು ಎಲ್ಲರನ್ನೂ ಹಿಂಸಿಸುತ್ತಾ ತಾನೇ ದೇವರು ಅಂತ ಮೆರೆಯುತ್ತಾ ಇರುತ್ತಾನೆ. ಇವನ ಕಿರುಕುಳ ತಡೆದುಕೊಳ್ಳೋದು ದೇವತೆಗಳಿಗೂ ಕಷ್ಟ ಆಗಿತ್ತು. ಹೀಗಿರೋ ರಾಜನಿಗೆ ಪ್ರಹ್ಲಾದ ಅನ್ನೋ ಮಗ ಇರುತ್ತಾನೆ, ಅವನು ವಿಷ್ಣುವಿನ ಪರಮ ಭಕ್ತ. ಎಲ್ಲೆಲ್ಲೂ ದೇವರಿದ್ದಾನೆ ಹಾಗೂ ಆ ದೇವರು ವಿಷ್ಣು ಅಂತ ನಂಬಿ ಬದುಕೊ ಅವನನ್ನ ಅವನ ತಂದೆಯೇ ದ್ವೇಷಿಸುವಷ್ಟು ಇತ್ತು ಅವನ ಭಕ್ತಿ. ಇದರಿಂದ ಕೆರಳಿದ ಹಿರಣ್ಯಕಶ್ಯಪನು ಮಗನನ್ನ ಸಾಯಿಸಲು, ಆನೆ ಕೈಲಿ ತುಳಿಸೋ ಜೊತೆಗೆ ಏನೇನೋ ಪ್ರಯತ್ನಪಟ್ಟು ವಿಫಲ ಆಗ್ತಾನೆ. ಕೊನೆಗ ತನ್ನ ತಂಗಿ “ಹೊಲಿಕಾ” ಳನ್ನು ಬರಹೇಳಿ ಮಗನನ್ನು ಸಾಯಿಸಲು ಹೇಳುತ್ತಾನೆ. ಆಕೆ ಗೆ ಒಂದು ವರವಿದ್ದು , ಅವರಂತೆ ಆಕೆಯ ಮಡಿಲಲ್ಲಿ ಕುಳಿತರೆ, ಕುಳಿತವರು ಭಸ್ಮ ಆಗಿ ಹೋಗುತ್ತಾರೆ. ಆದರೆ ಪ್ರಹ್ಲಾದ ನಿಗೆ ಬೆಂಕಿಯ ಕಿಡಿಯೂ ಸೋಕುವುದಿಲ್ಲ. ಬದಲಾಗಿ ತನ್ನದೇ ಬೆಂಕಿಯಲ್ಲಿ ಅವನ ಸೋದರತ್ತೆ ಹೊಲಿಕ ದಹಿಸಿ ಹೋಗುತ್ತಾಳೆ. ನಂತರದಲ್ಲಿ ವಿಷ್ಣು ನರಸಿಂಹನ ಅವತಾರ ತಾಳಿ, ಗೋದೂಳಿಯಲ್ಲಿ , ತನ್ನದೇ ಮಡಿಲಲ್ಲಿ ಹಿರಣ್ಯಕಶ್ಯಪ ನನ್ನು ಹಿಡಿದು, ಕೈ ಬೆರಳ ಉಗುರಿಂದ ಕರುಳು ಬಗೆದು ಅವನ ದುರಹಂಕಾರದ ಜನ್ಮಕ್ಕೆ ಮುಕ್ತಿ ಕೊಡುತ್ತಾನೆ. ಕೆಟ್ಟದರ ಮೇಲೆ ಒಳಿತಿನ ವಿಜಯವನ್ನ ಆಚರಿಸೋದಕ್ಕೆ ಈ ಹೋಳಿ ಹುಣ್ಣಿಮೆಯಲ್ಲಿ ದಹನ ಮಾಡಲಾಗುತ್ತದೆ ಎಂದು ನಂಬಲಾಗಿದೆ.
2. ಮತ್ತೊಂದು ಪುರಾಣ ಕಥೆ ಅಂತೆ, ಕೃಷ್ಣ ಮಗುವಾಗಿದ್ದಾಗ ವಿಷಪ್ರಾಶನ ಆಗಿ ಜನಿಸುವಾಗ ನೀಲಿ ಬಣ್ಣಕ್ಕೆ ತಿರುಗಿ ಜನಿಸಿರುತ್ತಾನೆ. ಕೃಷ್ಣ ತನ್ನ ನೀಲಿ ಮಿಶ್ರಿತ ಕಡು ಬಣ್ಣದಿಂದ ಬೇಸರಿಸಿ ಕೊಂಡು ತನ್ನ ತಾಯಿ ಯಶೋಧಳ ಬಳಿ ಹೋಗಿ, ರಾಧೆ ಕೋಮಲ , ತಿಳಿ ಬಣ್ಣದ ತ್ವಚೆ ಇರುವ ಹುಡುಗಿ ಆದರೆ ನಾನು ಅವಳಂತೆ ತಿಳಿ ಬಣ್ಣ ಹೊಂದಿಲ್ಲ, ಹಾಗಾಗಿ ಅವಳಿಗೆ ನನ್ನ ಮೇಲಿನ ಪ್ರೀತಿ ಕಡಿಮೆ ಆದರೆಯೆಂದು ಪದೇ ಪದೇ ಕೊರಗುತ್ತಾನೆ. ಆಗ ತಾಯಿ, ‘ರಾಧೆ ಬಳಿ ಹೋಗಿ ಅವಳಿಗೆ ಬೇಕಾದ ಬಣ್ಣವನ್ನು ನಿನ್ನ ಮುಖಕ್ಕೆ ಬಳಿಯಲು ಹೇಳು’ ಎಂದು ಹೇಳುತ್ತಾಳೆ. ಈ ರೀತಿಯಾಗಿ ಬಣ್ಣ ಹಚ್ಚಿವ ಕ್ರಮ ಶುರು ಆಯ್ತುಯೆಂದು ಹಾಗೂ ಈ ರೀತಿ ಸಮಾನತೆ ಸಾರಲು ಈ ಹಬ್ಬ ಪ್ರೇರಣೆ ಆಯಿತು ಎಂದು ನಂಬಲಾಗಿದೆ .
3. ಶಿವ ಪುರಾಣದಂತೆ , ಸತಿಯನ್ನು ಕಳೆದುಕೊಂಡ ಶಿವ ಎಲ್ಲದರಿಂದ ಪರಿತ್ಯಕ್ತನಾಗಿ ತಪಸ್ಸಿಗೆ ಕುಳಿತಾಗ, ಸತಿ ಪುನರ್ಜನ್ಮ ಪಡೆದು ಪಾರ್ವತಿ ಆಗಿ ಮತ್ತೆ ಶಿವನನ್ನು ವರಿಸಲು ಬಂದಾಗ ಶಿವ ನಿಶ್ಚಲನಾಗಿ ಕೈಲಾಸದಲ್ಲಿ ಧ್ಯಾನಕ್ಕೆ ಕುಳಿತಿರುತ್ತಾನೆ. ಆಗ ದೇವತೆಗಳು ಮತ್ತು ಪಾರ್ವತಿಯು, ಶಿವನನ್ನು ಏಳಿಸಲು ರತಿ ಮಮ್ಮಥ ರನ್ನು ಕೇಳಿಕೊಂಡಾಗ, ಅವರು ಒಪ್ಪಿ, ಎಲ್ಲಾ ರೀತಿ ಪ್ರಯತ್ನಿಸಿ ಕೊನೆಗೆ ಮನ್ಮಥ ನು ತನ್ನ ಹೂವಿನ ಬಾಣದಿಂದ ಶಿವನ ಧ್ಯಾನಕ್ಕೆ ಬಂಗ ತರುತ್ತಾನೆ. ಶಿವ ಮೂರನೇ ಕಣ್ಣು ಬಿಟ್ಟಾಗ ಭಸ್ಮ ಆಗುತ್ತಾನೆ. ಇದರಿಂದ ನೊಂದ ರತಿ ಶಿವನನ್ನೇ ತಪಸ್ಸು ಮಾಡಿ ಮತ್ತೆ ತನ್ನ ಪತಿಯನ್ನು ಕರುಣಿಸು ಎಂದು ಕೇಳಿಕೊಳ್ಳುತಾಳೆ . ಎಲ್ಲರಿಗೂ ತೊಂದರೆ ಕೊಡುತ್ತಿದ್ದ ರಾಕ್ಷಸ ‘ತಾರಕ’ನ ವಧೆಗೆ ಶಿವ ಪಾರ್ವತಿಯರ ಪುತ್ರ ಕಾರ್ತಿಕೇಯನ ಬರುವಿಕೆಗಾಗಿ ಈ ಪ್ರಯತ್ನ ಅನಿವಾರ್ಯ ಆಗಿತ್ತು, ಹಾಗೂ ಅದರಲ್ಲಿ ರತಿ ತನ್ನ ಗಂಡನನ್ನೇ ಕಳೆದುಕೊಂಡಳು ಎಂಬುದನ್ನು ಅರಿತ ಶಿವ, ಅವಳ ತಪಸ್ಸಿಗೆ ಮೆಚ್ಚಿ ‘ಅನಂಗ’ ನಾಗಿ ಅಂದರೆ ಯಾವುದೇ ಅಂಗ ಅಥವಾ ಅಣು ಇಲ್ಲದೆ (ದೇಹ ಇಲ್ಲದೆ ) ಮದನ/ಮನ್ಮಥ ಈ ಪ್ರಕೃತಿಯಲ್ಲಿ ಇರುತ್ತಾನೆ ಅಂತ ಫಾಲ್ಗುಣ ಮಾಸದ ಕೋಣೆ ಹುಣ್ಣಿಮೆ ದಿನ ವರ ನೀಡುತ್ತಾನೆ. (ಹಾಗೆಯೇ ಮತ್ಸ್ಯ ಪುರಾಣದಲ್ಲಿ ಇರುವಂತೆ, ಅದೇ ಮನ್ಮಥ ಮುಂದಿನ ಜನ್ಮದಲ್ಲಿ ಕೃಷ್ಣ ನ ಮಗನಾಗಿ ಮತ್ತೆ ಹುಟ್ಟಿ ಬರುತ್ತಾನೆ ಯೆಂದು ಪಾರ್ವತಿ ಆಶೀರ್ವದಿಸುತ್ತಾಳೆ.) ಅಂತೆಯೇ ಯಾವುದೇ ಆಕಾರ, ಬಣ್ಣ ಇಲ್ಲದೆ ಕಣ್ಣಿಗೆ ಕಾಣದೆ ಯೆಲ್ಲೆಡೆ ಇರುವುದೇ “ಪ್ರೀತಿ, ಅನುರಾಗ” ಅನ್ನೋದೆ ಎಲ್ಲರ ನಂಬಿಕೆ. ಇಂದಿನ ಕಾಲದ ಬಾಜಿರಾವ ಮಸ್ತಾನಿ, ರೋಮಿಯೊ ಜೂಲಿಯಟ್ , ಸಲೀಂ ಅನಾರ್ಕಲಿ ಇವರೆಲ್ಲರಿಗಿಂತ ಮೊದಲು ಪ್ರೀತಿ ಮುನ್ನುಡಿ ಬರೆದವರು ಪುರಾಣದ ರತಿ ಮನ್ಮಥರು. ಈ ರೀತಿ ಪ್ರೀತಿ ಹುಟ್ಟಿಗೆ ಕಾರಣರಾದ ರತಿ ಮನ್ಮಥರನ್ನು ನೆನೆದು, ಪರಸ್ಪರ ಪ್ರೀತಿ ಹಂಚಿ ಸಂಭ್ರಮಿಸುವ ಹಬ್ಬ ಹೋಳಿ ಹಬ್ಬ .
ಒಟ್ಟಾರೆಯಾಗಿ ನೋಡುವುದಾದರೆ ಈ ಹೋಳಿ ಹಬ್ಬದ ಆಚರಣೆಗೆ ಶೈವರು, ವೈಷ್ಣವರು, ಮೇಲೂ ಕೀಳು, ಬಡವ ಬಲ್ಲಿದ ಅನ್ನೋ ಯಾವುದೇ ಬೇಧ ಭಾವ ಇಲ್ಲಾ.. ಮಕ್ಕಳು ಮಹಿಳೆಯರು ಹಿರಿಯರು ಎಲ್ಲರೂ ಒಂದೆಡೆ ಸೇರಿ ಆಚರಿಸುವ ವಿಭಿನ್ನವಾದ ಹಬ್ಬ. ಇದರಲ್ಲಿ ಮಾವು ಬೇವು ಹಲಸು ಶ್ರೀಗಂಧ, ಹೂ ಹಣ್ಣು ಎಲ್ಲಾ ಸೇರಿಸಿ ದಹನ ಮಾಡಿ , ಬೆಂಕಿ ಕಾಯಿಸಿ, ಮರುದಿನ ಆ ಬೂದಿಯನ್ನ ಮೈಗೆ ಇಲ್ಲಾ ಹಣೆಗೆ ಬಳಿದು, ಒಬ್ಬರಿಗ್ವೊಬ್ಬರು ಬಣ್ಣ ಹಚ್ಚಿ , ನೀರು ಎರಚಿ , ಹಾಡಿ ಕುಣಿದು, ಪ್ರೀತಿಯ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸದಿಂದ ಆಚರಿಸುತ್ತಾರೆ. ಈ ಹಬ್ಬ ನೇಪಾಳದಲ್ಲೂ ಆಚರಿಸುತ್ತಾರೆ. ಇತ್ತೀಚೆಗೆ ಭಾರತೀಯರು ವಿಶ್ವದ ಎಲ್ಲೆಡೆ ನೆಲೆಸಿರುವುದರಿಂದ ನಮ್ಮ ಆಚರಣೆ ಕೇವಲ ನಮಗಷ್ಟೇ ಸೀಮಿತ ಆಗದೆ ವಸುದೈವ ಕುಟುಂಬಕಂ ಅನ್ನೋ ಹಾಗೆ ಎಲ್ಲೆಡೆ ಪಸರಿಸಿದೆ. ಜೊತೆಗೆ ನಮ್ಮ ಹಬ್ಬಗಳಲ್ಲಿ ಅದರದ್ದೇ ಆದ ಆಳವಾದ ಜ್ಞಾನ, ವಿಜ್ಞಾನ ಅಡಗಿರುವುದರಿಂದ ಹೆಚ್ಚಿನವರು ಇದನ್ನ ಅರಿತುಕೊಂಡು ಹಬ್ಬಗಳನ್ನ ಆಚರಿಸುವ ಕಡೆಗೆ ಮನಸ್ಸುಮಾಡುತಿದ್ದಾರೆ.
ವಿಜ್ಞಾನದಲ್ಲಿ ಹೋಳಿ ಅಥವಾ ಹೊಳಿಯಲ್ಲಿ ವಿಜ್ಞಾನ
ಫಾಲ್ಗುಣ ಮಾಸ ಕಳೆದು ಇನ್ನೇನು ಚೈತ್ರ ಅಥವಾ ವಸಂತ ಮಾಸ ಬರಬೇಕು. ಅದರ ಬಾಗಿಲಲ್ಲಿ ಅಂದರೆ ಫಾಲ್ಗುಣದ ಕೊನೆ ಹುಣ್ಣಿಮೆ ಈ ಹೋಳಿ ಹಬ್ಬ. ಈ ಸಂದರ್ಭದಲ್ಲಿ ಚಳಿಯೆಲ್ಲ ಮುಗಿದು ಬೇಸಿಗೆ ಶುರು ಆಗ್ತಾ ಇರುತ್ತೆ. ಪೈರನ್ನ ಕಟಾವು ಮಾಡಿ ಇಡುವ ಕಾಲ. ವರ್ಷದ ಹಲವು ಕಾಲಗಳಲ್ಲಿ ಹಲವು ಬೆಲೆ ಬೆಳೆಯಲಾಗುತ್ತದೆ. ಆ ಹವಾಮಾನಕ್ಕೆ ತೆರನಾಗಿ ಅಲ್ಲಿಯ ಬೆಳೆ ಬೆಳೆದು ಕಟಾವು ಮಾಡಿ ತೆಗೆದಿಟ್ಟು ಒಂದು ನಿಟ್ಟುಸಿರು ಬಿಡುವ ಕಾಲ. ಬಿಡುವಿಲ್ಲದೆ ಕೆಲಸ ಮಾಡಿ ಕೈ ಕಾಲು ಜಡ್ಡು ಬೆಳೆದು ಆರೈಕೆ ಕೇಳೋ ಕಾಲ.
ಹಾಗೆ ಹಿಂದಿನ ಕಾಲದವರನ್ನ ಕೇಳಿ ನೋಡಿ, ಅವರ ಮಾತಿನಂತೆ ಹೇಳೋದಾದರೆ ಹಳೆ ಕಾಲದವರು, ಈಗಿನವರಂತೆ ಶಾಂಪೂ ಸೋಪ್ ಬಳಸಿ ಪ್ರತಿದಿನ ಸ್ನಾನ ಮಾಡ್ತಾ ಇರ್ಲಿಲ್ಲ. ಬದಲಾಗಿ ಎರಡು ಮೂರು ದಿನಕೊಮ್ಮೆ ಸ್ನಾನ, ವಾರಕ್ಕೊಮ್ಮೆ ಹೊಳೆಯಲ್ಲಿ ಬಟ್ಟೆ ಒಗೆಯುವುದು ಮಾಡ್ತಾ ಇದ್ದದ್ದು. ಈಗಿನ ವಿಜ್ಞಾನನೂ ಅದನ್ನೇ ಹೇಳೋದು. ಪ್ರತಿ ದಿನ ಕತ್ತ ಬಳಸಿ ಸ್ನಾನ ಮಾಡಿದ್ರೆ ಚರ್ಮದ ಎಣ್ಣೆ ಅಂಶ ಹೋಗಿ ಬೇಗ ಸುಕ್ಕು ಆಗುತ್ತದೆ. ಹಾಗೆ ಅನಾರೋಗ್ಯಕ್ಕೆ ಬೇಗ ಬಲಿಯಾಗುತ್ತೇವೆ ಅಂತ. ಜೊತೆಗೆ ಈಗಿನ ಯುವ ಜನತೆ ಹೇಳೋ ಹಾಗೆ ಜೀನ್ಸ್ ಅನ್ನ 4 – 5 ಬಾರಿ ಹಾಕಿ ಒಗೆಯಬೇಕು, ಅದನ್ನೇ ನಮ್ಮ ಹಿರಿಯರು ಮಾಡ್ತಾ ಇದ್ದದ್ದು. ದೇಹದಲ್ಲಿ, ಬಟ್ಟೆಯಲ್ಲಿ ಕೊಳೆ, ಗಲೀಜು, ಅತಿಯಾದ ಬೆವರು ಇಲ್ಲದಿದ್ದರೆ ಅದನ್ನು ಪದೇಪದೇ ತೊಳೆಯುವ ಅವಶ್ಯಕತೆ ಇಲ್ಲಾ ಅನ್ನೋ ಸಣ್ಣ ಮಟ್ಟದ ತಿಳುವಳಿಕೆ ಅವರಿಗಿತ್ತು. ಈಗಿನ ವಾತಾವರಣ ಪೂರ್ತಿಯಾಗಿ ಬದಲಾಗಿ ಚಳಿಗಾಲವೂ ಸಹ ಬೇಸಿಗೆಯಂತಾಗಿದೆ. ಹಿಂದಿನ ಕಾಲದಲ್ಲಿ, ಚಳಿ ಅಂದರೆ ನಡುಕ ಹುಟ್ಟಿಸುವ ಹಾಗೆ ಇರುತಿತ್ತು. ಆಗಿನ ಕಾಲದಲ್ಲಿ ನಿತ್ಯ ಸ್ನಾನ ಮಾಡಲು ಖಂಡಿತಾ ಆಗ್ತಾ ಇರ್ಲಿಲ್ಲ. ಇದರಿಂದ ಕೈ ಕಾಲು ಗಳ ಚರ್ಮ ಜಡ್ಡು ಹಿಡಿದಿರುತ್ತಿತ್ತು. ಕೆಲವರಿಗೆ ಚರ್ಮದ ತುರಿಕೆಯಂತಹ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು. ಜೊತೆಗೆ ಒಂದು ತೆರನಾದ ಆಲಸ್ಯ ಜಡತ್ವ ಬಂದು ನಿದ್ದೆ ಮಂಪಸು ಸದಾ ಆವರಿಸಿದಂತ ಮನಸ್ಥಿತಿಯಲ್ಲಿ ನಾವು ಇರುತ್ತೇವೆ.
– ಈ ಎಲ್ಲಾ ಕಾರಣಗಳಿಂದ ಬೇಸಿಗೆಯ ಬಾಗಿಲಲ್ಲಿ ನಿಂತು, ವಸಂತ ನನ್ನು ಬರ ಮಾಡಿಕೊಳ್ಳುವಾಗ, ಎಲ್ಲರೂ ಒಂದೆಡೆ ಸೇರಿ, ನೆಲ್ಲಿ, ಹಲಸು, ಮಾವು, ಬೇವಿನಂತಹ ಔಷದಿಯ ಗುಣ ಇರುವ ಕಟ್ಟಿಗೆ, ಹೂ, ಹಣ್ಣು, ಎಲೆ ಇತ್ಯಾದಿ ಹಾಕಿ ದೊಡ್ಡ ಬೆಂಕಿ ಅನ್ನು ಹಚ್ಚಿ ಅದರ ಸುತ್ತ ಪ್ರದಕ್ಷಿಣೆ ಹಾಕಿ ಹಾಡುತ್ತಾ ಕುಣಿಯುತ್ತಾ ರಾತ್ರಿ ಕಳೆಯುತ್ತಾರೆ. ಹೀಗೆ ಮಾಡುವುದರಿಂದ ಆ ಔಷಧೀಯ ಶಾಖ ನಮ್ಮ ದೇಹಕ್ಕೆಲ್ಲ ತಾಗಿ ದೇಹವನ್ನು ಒಮ್ಮೆ ಚೈತನ್ಯಗೊಳಿಸುತ್ತದೆ. ಹುರುಪು ಬರುತ್ತದೆ, ಆಲಸ್ಯ ಹೋಗುತ್ತದೆ. ಜೊತೆಗೆ ಅಲರ್ಜಿ ಅಂತಹ ಸಮಸ್ಯೆ ಕಡಿಮೆ ಆಗುತ್ತದೆ. ವೈರಾಣುಗಳನ್ನ ಸಾಯಿಸಿ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗುತ್ತದೆ.
– ಮರುದಿನ ಬೆಳಿಗ್ಗೆ ಅದೇ ಬೂದಿಯನ್ನ ಹಚ್ಚಿ ದಿನ ಆರಂಭಿಸುತ್ತಾರೆ. ಇದರಿಂದ ಔಷಧಿಯ ಗುಣದ ಬೂದಿ ದೇಹ ಸೇರಿ ಆರೋಗ್ಯ ಕಾಪಾಡಲು, ಹಾಗೆ ಚರ್ಮದ ತೊಂದರೆ ಇದ್ದವರಿಗೆ ಔಷಧಿ ಅಂತೆ ಬಳಸಲು ಶೇಕರಿಸಿಡುತ್ತಾರೆ.
ಹಬ್ಬ ಇಲ್ಲಿಗೆ ಮುಗಿಯುವುದಿಲ್ಲ, ನಂತರದಲ್ಲಿ ಬೆಳಿಗ್ಗೆಯಿಂದ ಬಣ್ಣಗಳ ತಯಾರಿ ಮಾಡಿಕೊಳ್ಳಲಾಗುತಿತ್ತು. ಇವತ್ತಿನ ಜಗತ್ತು ಬಣ್ಣ ಎಂದರೆ ಕೆಮಿಕಲ್ ಇರೋ ಸಿಂಥೆಟಿಕ್ ಕಲರ್ ಪೌಡರ್ ಅನ್ನ ಬಳಸುತ್ತಿದೆ. ಇದರಲ್ಲಿ, ಲೆಡ್ ಆಕ್ಸೈಡ್ , ಕ್ರೋಮಿಯಂ ಅಯೋಡಿನ್, ಇತ್ಯಾದಿ ವಿಷಕಾರಿ ಅಂಶ ಇದ್ದು ಕಣ್ಣು , ಚರ್ಮಕ್ಕೆ ಒಳ್ಳೆಯದಲ್ಲ. ಆದರೆ ಅಂದಿನವರು ನೈಸರ್ಗಿಕ ಬಣ್ಣಗಳಾದ ಅರಿಶಿನ , ಅದಕ್ಕೆ ಸ್ವಲ್ಪ ನಿಂಬೆ ಬೆರಸಿ ಕುಂಕುಮ್ ಬಣ್ಣ , ಕೇಸರಿ ದಳಗಳ ಬಣ್ಣ , ನೇರಳೆ ಹಣ್ಣಿನ ಬಣ್ಣ, ಮದರಂಗಿ ಎಲೆಗಳ ಬಣ್ಣ, ದಾಸವಾಳ ಮೊದಲಾದ ಔಷಧಿಯ ಸಸ್ಯಗಳ ಹೂ ಗಳು, ಇಂಡಿಗೊ ಎಲೆಗಳು, ಜೊತೆಗೆ ಕೆಲ ಎಲೆಗಳ ಕಷಾಯಗಳು ಇತ್ಯಾದಿ ಬಳಸಿಕೊಂಡು ಬಣ್ಣಗಳನ್ನ, ಬಣ್ಣದ ನೀರನ್ನ ತಯಾರಿಸಿಕೊಳ್ಳುತ್ತಿದ್ದರು.
– ಹೀಗೆ ತಯಾರಿಸಿದ ಬಣ್ಣ ಕಣ್ಣಿಗೆ ಮುದ ನೀಡುತ್ತದೆ ಜೊತೆಗೆ ಮನಸ್ಸು ಆಹ್ಲಾದ ಗೊಳ್ಳುತ್ತದೆ. ಹೀಗೆ ನೀರಿನಲ್ಲಿ ಆಡುವಾಗ ಒಬ್ಬರು ಇಬ್ಬರು ಆಡಲು ಆಗುವುದಿಲ್ಲ. ಬದಲಾಗಿ ಇಡೀ ಊರು ಜನಾಂಗ ಸೇರಿ ಆಟ ಆಡುವುದರಿಂದ ಪರಸ್ಪರ ಪ್ರೀತಿ ನಂಬಿಕೆ ಬೆಳೆಯುತ್ತದೆ. ಎಲ್ಲಾರು ನಮ್ಮವರು ಅನ್ನೋ ಭಾವನೆ ಬೆಳೆಯುತ್ತದೆ. ಎಷ್ಟೊ ಸಂದರ್ಭದಲ್ಲಿ ಶತ್ರುಗಳೂ ಸಹ ಮಿತ್ರರಾಗುತ್ತಾರೆ. ಮನಸ್ಸು ಖುಷಿಯಲ್ಲಿ ತೇಲಾಡುತ್ತದೆ.
ಜೊತೆಗೆ, ಔಷಧಿಯ ಗುಣದ ನೀರಿನಲ್ಲಿ ಮುಳುಗಿ ಏಳೋದರಿಂದ ದೇಹದ ಒಳಗೆಲ್ಲ ಆ ಬಣ್ಣದ ನೀರು ಹಾಗೂ ಅದರ ಅಂಶ ಹೋಗಿ ಇಡೀ ದೇಹ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗುತ್ತದೆ. ಜೊತೆಗೆ ಹಲವು ಚರ್ಮದ ತೊದರೆಗಳು ಕಡಿಮೆ ಆಗುತ್ತವೆ. ಇದು ಒಂದು ರೀತಿ ಚರ್ಮಕ್ಕೆ ಮೊಯ್ಸ್ಚರೈಜರ್ ಹಾಕುವಂತೆ. ಅಲ್ಲದೆ ಅರಿಶಿನ ದಲ್ಲಿ ನಂಜನ್ನು ತೆಗೆಯುವ ಹಾಗೆ ಚರ್ಮದ ತೊಂದರೆ ಕಡಿಮೆ ಮಾಡೋ, ಜೊತೆಗೆ ಬಿಸಿಲಿನಲ್ಲಿ ಚರ್ಮ ಕಪ್ಪಾದಾಗ ಅದನ್ನು (sun tan) ತೆಗೆಯುವ ಎಲ್ಲಾ ಅಂಶಗಳಿದ್ದು, ಇದು ಚರ್ಮದ ರಕ್ಷಣೆ ಮಾಡಿ ಕಾಂತಿ ಹೆಚ್ಚಿಸುತ್ತದೆ. ನಂತರದಲ್ಲಿ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಜಿಡ್ಡುಗಟ್ಟಿದ ಚರ್ಮ ನೆನೆದು, ಹಳೆ ಚರ್ಮ ಹೋಗಿ ಹೊಸ ಚರ್ಮ ಬರಲು ಸಹಕಾರಿ ಆಗುತ್ತದೆ. ಹಾಗೆ ಮೆಹಂದಿ, ನೆಲ್ಲಿ ಹಾಗೂ ಇಂಡಿಗೊ ಅಂಶ ಕೂದಲಿಗೆ ಒಳ್ಳೆಯದು, ಇದರಿಂದ ಋತುಮಾನದ ಬದಲಾವಣೆ ಇಂದ ಆದ ತೊಂದರೆಗಳನ್ನ ಕಡಿಮೆ ಮಾಡಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತವೆ.
ಇನ್ನೂ ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದರೆ, ಹೆಚ್ಚಿನ ರೈತರು ಭೂಮಿಯ ಫಲವತ್ತತೆಯನ್ನ ಕಾಪಾಡಲು ಹೊಲ , ತೋಟ , ಗದ್ದೆಗಳಿಗೆ ಬೂದಿಯನ್ನ ಹಾಕುವುದನ್ನ ನೋಡಿರಬಹುದು. ಹಾಗೆಯೇ ಹೋಳಿ ದಹನದ ಬೂದಿಯನ್ನು ಸಹ ಭೂಮಿಯಲ್ಲಿ ಹಾಕಿ ಫಲವತ್ತತೆ ಕಾಪಾಡಿಕೊಳ್ಳಲು ನಮ್ಮ ಹಿರಿಯರು ಈ ಒಂದು ಆಚರಣೆಯನ್ನು ಮಾಡುತ್ತಿದ್ದರು, ಜೊತೆಗೆ ಹೋಳಿ ಆಡಲು ಬಳಸುತ್ತಿದ್ದ ನೀರು ಸಹ ಎಲ್ಲಾ ರೀತಿಯಿಂದಲೂ ಉತ್ತಮವಾಗಿದ್ದು, ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಾಯ ಮಾಡುತಿತ್ತು.
ಬದುಕೊಂದು ಹಬ್ಬ
ಕೆಲವರು ಕೇಳಬಹುದು, ಸಂಕ್ರಾಂತಿ ಕಿಚ್ಚು ಹಾಯಿಸಿ ಆಗಿರುತ್ತೆ ಮತ್ತೆ ಯಾಕೆ ಈ ದಹನ ಅಂತಾ. ಇದು ಒಂತರಾ ಭೂಮಿಗೆ ಒಮ್ಮೆ ಮಳೆ ಬಿದ್ದರೆ ಸಾಕಗಲ್ಲ. ಬೇರೆ ಬೇರೆ ನಕ್ಷತ್ರ ದಲ್ಲಿ ಬೇರೆ ಬೇರೆ ಮಳೆ ಆದಾಗಲೆ ಭೂಮಿ ಫಸಲು ತುಂಬಿ, ಬದುಕಲು ಯೋಗ್ಯ ಆಗಿರೋದು. ಹಾಗೆ ಆ ಆ ಋತುಗಳಿಗೆ ಸರಿಯಾಗಿ ನಮ್ಮ ದೇಹ ಜೊತೆಗೆ ಮನಸ್ಸು ರೀಛಾರ್ಜ್ ಆದ್ರೆ ಮಾತ್ರ ಮನುಷ್ಯ ಸುಖ ಸಂತೋಷ ನೆಮ್ಮದಿಲಿ ಬದುಕೋಕೆ ಸಾಧ್ಯ. ಹಾಗೆ ರೀಛಾರ್ಜ್ ಮಾಡೋಕೆ ಇರೋ ಒಂದು ವಿಧಾನ ಈ ಹಬ್ಬ ಹರಿದಿನಗಳು. ಹಾಗೆ ಎಲ್ಲಾ ಹಬ್ಬ ದೀಪಾವಳಿ ಆಗೋದಕ್ಕೆ ಆಗಲ್ಲ . ಸಮಯಕ್ಕೆ ಸಂದರ್ಭಕ್ಕೆ ಸರಿ ಆಗಿ ಒಂದೊಂದು ಆಚರಣೆ ಮಾಡಿ ಅದಕ್ಕೊಂದು ಹಬ್ಬದ ಹೆಸರಿಟ್ಟಿದ್ದಾರೆ. ಹಾಗೆ ಎಲ್ಲಾ ಆಚರಣೆ ಒಂದೇ ರೀತಿ ಆದರೆ, ನಂತರದಲ್ಲಿ ಅದೇ ಹಬ್ಬ ಆಚರಿಸುವ ಮನಸ್ಸು ಇಲ್ಲದಾಗುತ್ತದೆ. ಅದಕ್ಕಾಗಿ , ಋತುಗಳಿಗೆ ಹೊಂದುವಂತೆ ಬೇರೆ ಬೇರೆ ಆಚರಣೆ ಮಾಡಲಾಗುತ್ತದೆ. ಹಾಗೆ ನಮ್ಮ ಎಲ್ಲಾ ಆಚರಣೆ, ಪುರಾಣ – ಪರಂಪರೆಗಳಿಗೆ ತಳುಕು ಹಾಕಿಕೊಡಿರುವುದರಿಂದ ನಮ್ಮ ವೈಚಾರಿಕತೆ ಎಷ್ಟು ಸಮೃದ್ಧ ಆಗಿದೆ ಅಂತ ತಿಳಿದುಕೊಳ್ಳಬಹುದು. ಹಾಗೆ ಆ ಮೌಲ್ಯಗಳನ್ನ ಅಳವಡಿಸಿಕೊಳ್ಳಲು, ಬದುಕನ್ನ ಸರಿದಾರಿಗೆ ತರಲು ಹಿಡಿದ ದಾರಿದೀಪಗಳಾಗಿವೆ. ಒಟ್ಟಾರೆಯಾಗಿ ಮಾನವನ ಬದುಕೇ ಒಂದು ಹಬ್ಬ.
*ನೆನಪಿಡಿ*
*ಬಣ್ಣ ಹಚ್ಚುವ ಮುನ್ನ ಹಾಗೂ ನಂತರ ಕೊಬ್ಬರಿ ಎಣ್ಣೆ ಹಚ್ಚಿ.
*ಪೂರ್ತಿ ಮೈ ಮುಚ್ಚುವಂತೆ ಬಟ್ಟೆ ಹಾಕಿ ಬಣ್ಣದಿಂದ ರಕ್ಷಿಸಿಕೊಳ್ಳಿ.
*ಕಣ್ಣಿಗೆ ಬಣ್ಣ ಹೋಗದಂತೆ ಕಾಪಾಡಿಕೊಳ್ಳಿ, ಹೋದರೂ ತಕ್ಷಣ ತಣ್ಣೀರಿನಲ್ಲಿ ತೊಳೆಯಿರಿ.
*ನೀರಿನ ಅಭಾವ ಇದೆ, ಆದ್ದರಿಂದ ನೋಡಿ ಬಳಸಿ.
*ಆಡಲು ಇಷ್ಟ ಇಲ್ಲದವರನ್ನು ಹಿಂಸಿಸಿ ನೋಯಿಸಬೇಡಿ.

– ಹಿತೈಷಿ ಎಚ್.ಎನ್., ಬಿಐಎಂ ಎಂಜಿನಿಯರ್

ಇತ್ತೀಚಿನ ಸುದ್ದಿ

ಜಾಹೀರಾತು