ಇತ್ತೀಚಿನ ಸುದ್ದಿ
ಹೀಗೊಂದು ಹಾವಿನ ದ್ವೇಷ: 25 ವರ್ಷಗಳಲ್ಲಿ ಒಂದೇ ಕುಟುಂಬದ 11 ಮಂದಿಗೆ ಕಚ್ಚಿದ ವಿಷ ಸರ್ಪ; 5 ಮಂದಿ ಸಾವು
24/08/2022, 13:41
ತುಮಕೂರು(reporterkarnataka.com): ಇದು ವಿಚಿತ್ರವಾದರೂ ಸತ್ಯ. ಕಳೆದ 25 ವರ್ಷಗಳಲ್ಲಿ ಒಂದೇ ಕುಟುಂಬದ 11 ಮಂದಿಗೆ ಹಾವು ಕಚ್ಚಿದ್ದು,ಇದರಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಇದೆಲ್ಲ ನಡೆದಿರುವುದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೊಗರಿ ಘಟ್ಟ ಗ್ರಾಮದಲ್ಲಿ. ಕುಟುಂಬಸ್ಥರು ಇದೀಗ ತಮ್ಮ ಹೊಲಗದ್ದೆಗೆ ಹೋಗಲು ಭಯ ಪಡುತ್ತಿದ್ದಾರೆ.
ಮೊನ್ನೆ ಮೊನ್ನೆ ಈ ಕುಟುಂಬದ ಗೋವಿಂದ ರಾಜು ಎಂಬುವರು ಹೊಲದಲ್ಲಿ ನೀರು ಹಾಯಿಸಲು ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದರು.
ಹೊಲದಲ್ಲಿ ಮೆಣಸಿನ ಗಿಡ ಬೆಳೆದಿದ್ದರೂ ಅದರ ಸಮೀಪ ಸುಳಿಯದಂತಾಗಿದೆ. ಇನ್ನೊಂದೆಡೆ, ಮಾನಸಿಕವಾಗಿ ಇಡೀ ಕುಟುಂಬವೇ ಜರ್ಜರಿತವಾಗಿದೆ. ಕೂಲಿ ಕಾರ್ಮಿಕರು ಸಹ ಇವರ ಹೊಲಗದ್ದೆಯಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ.
ನಿರಂತರವಾಗಿ ಹಾವಿನ ಆಕ್ರೋಶ ಒಳಗಾಗುತ್ತಿರುವ ಈ ಕುಟುಂಬ, ರಾಹು ಕೇತು ಪೂಜೆಯನ್ನು ಸಹ ಮಾಡಿದೆ.ಆದರೆ, ಯಾವುದೂ ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ.