8:40 PM Monday16 - September 2024
ಬ್ರೇಕಿಂಗ್ ನ್ಯೂಸ್
ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ಮಂಗಳೂರು: ಸಾಕು ನಾಯಿಯ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಿದ ಪಾಪಿಗಳು; ವೀಡಿಯೊ ವೈರಲ್… ವೈದ್ಯರ ಮೇಲೆ ಹಲ್ಲೆ ಪ್ರಕರಣ: ಚಿಕ್ಕಮಗಳೂರು ನಗರ ಠಾಣೆ ಎದುರು ಆರೋಗ್ಯ ಸಿಬ್ಬಂದಿಗಳ… ರಸ್ತೆ ಆಳುವ ಬೀದಿ ನಾಯಿಗಳು: ಶ್ರೀನಿವಾಸಪುರದಲ್ಲಿ ಶ್ವಾನಗಳದ್ದೇ ಕಾಟ; ಕಣ್ಮುಚ್ಚಿ ಕುಳಿತ ಪುರಸಭೆ… ನಂಜನಗೂಡು: 1 ಕೋಟಿ ವೆಚ್ಚದಲ್ಲಿ ಒಣ ತ್ಯಾಜ್ಯ ವಿಂಗಡಣೆ ಹಾಗೂ ನಿರ್ವಹಣಾ ಘಟಕಕ್ಕೆ…

ಇತ್ತೀಚಿನ ಸುದ್ದಿ

ಹೆಣ್ಣು ಹೆಣ್ಣೇ.. ಕ್ಷಮಯಾಧರಿತ್ರಿ, ಸೋತು ಗೆಲ್ಲುವವಳು….!

07/09/2024, 20:21

ರಾಜೇಶ್ವರಿ ಕುಮಾರ್ ರಾವ್

info.reporterkarnataka@gmail.com

ಆಧುನಿಕ ಮಹಿಳೆ ಎಂದ ತಕ್ಷಣ ಮನಸಿಗೆ ಬರುವ ಚಿತ್ರಣ, ಅತ್ಯಂತ ಕಡಿಮೆ ಬಟ್ಟೆತೊಟ್ಟು, ಸ್ನೇಹಿತೆ/ಸ್ನೇಹಿತರ ಜೊತೆಗೆ ನಡುರಾತ್ರಿಯವರೆಗೂ ಹೊರಗೆ ಇದ್ದು,ಮೋಜು ಮಸ್ತಿ ಮಾಡುತ್ತಾಳೆ, ಆಕೆ ಯಾವ ಸಂಪ್ರದಾಯವನ್ನೂ ಪಾಲಿಸುವುದಿಲ್ಲ. ಪುರುಷರ ಜೊತೆಗೆ ಬಿಂದಾಸ್ ಆಗಿ, ಆಫೀಸ್ ಟೂರಿಗೆ ಹೋಗುತ್ತಾಳೆ. ಮದುವೆಯ ಕಟ್ಟುಪಾಡುಗಳಿಗೆ ಬದ್ಧಳಾಗಿರುವುದಿಲ್ಲ, ವ್ಯವಹಾರಿಕವಾಗಿ ಗಂಡಿಗೆ ಸರಿ ಸಮವಾಗಿ ಮಾತು, ವ್ಯವಹಾರ, ಒಂಟಿಯಾಗಿ ದೇಶ-ವಿದೇಶ ಗಳಿಗೆ ಪ್ರಯಾಣ ಮಾಡುವುದು, ತನ್ನ ಜೀವನ ಸಂಗಾತಿಯನ್ನು ತಾನೇ ಆರಿಸಿಕೊಳ್ಳುವುದು, ಮಕ್ಕಳೇ ಬೇಡ ಅನ್ನುವುದು, ಮಕ್ಕಳನ್ನು ಆಯಾಳ‌ ಸುಪರ್ದಿಗೆ ಒಪ್ಪಿಸಿ ತನ್ನ ಕೆಲಸಕ್ಕೆ ಹೆಚ್ಚು ಸಮಯ ನೀಡುವುದು, ಅತ್ತೆ ಮಾವರ ಸೇವೆ ಮಾಡದಿರುವುದು., ಪತಿಯೆಂದರೆ ಭಯಭಕ್ತಿ ಇಲ್ಲದಿರುವುದು, ದೇವರಪೂಜೆ ಪುನಸ್ಕಾರಗಳ ಬಗ್ಗೆ ಅಸಡ್ಡೆ, ಇತ್ಯಾದಿ ಪಟ್ಟಿ ಮಾಡಿದರೆ ಮುಗಿಯದ ಅಪವಾದಗಳು. ಇಷ್ಟೆಲ್ಲಾ ಆರೋಪಗಳನ್ನು ಸಾರಾಸಗಟಾಗಿ ಆಧುನಿಕ ಮಹಿಳೆಯ ಮೇಲೆ ಹೊರಿಸಿಬಿಡುತ್ತದೆ ಸಮಾಜ.
ಇದನ್ನೇ ಅನೇಕ ವರ್ಷಗಳ ಹಿಂದಿನ ಆಧುನಿಕಳಲ್ಲದ  ಮಹಿಳೆಗೆ ಬಿಡಿ ಬಿಡಿಯಾಗಿ ಹೋಲಿಸೋಣ. ಕೂಲಿ ಕೆಲಸ, ಶಿಕ್ಷಕಿ, ನರ್ಸ್ ಆಗಿ ಹೆಣ್ಣು ಹಿಂದಿನ ಕಾಲದಲ್ಲೂ, ಗಂಡಸರೊಂದಿಗೆ ಕೆಲಸ ಮಾಡುತ್ತಿದ್ದಳು, ಮಕ್ಕಳನ್ನು ಹಿರಿಯರು ಅಥವಾ ಅಕ್ಕಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು. ಗದ್ದೆಗಳಲ್ಲಿ ಕೆಲಸಮಾಡುವ ಹೆಂಗಳೆಯರು ಸೀರೆಯನ್ನು ಮೇಲೆತ್ತಿ ಕಟ್ಟಿ ಹೊಲದಲ್ಲಿ ಬತ್ತದ ಪೈರು ನೆಡುತ್ತಿದ್ದರು. ಆಗಲೂ ಅನೈತಿಕ ಸಂಬಂಧ ಮನೆಯೊಳಗೂ,ಹೊರಗೂ ಕದ್ದುಮುಚ್ಚಿ ನಡೆಯುತ್ತಾ ಇತ್ತು. ಧರಿಸುವ ಬಟ್ಟೆ ಬರೆ ಕಾಲಕಾಲಕ್ಕೆ ಬದಲಾಗುತ್ತಾ ಹೋಗಿದೆ.
ಆ ಕಾಲದಲ್ಲಿ ಮದುವೆಯಾದ ತಕ್ಷಣ, ಮಕ್ಕಳುಬೇಕು ಅಥವಾ ಬೇಡ ಎನ್ನುವ ನಿರ್ಧಾರ ಗಂಡ, ಅತ್ತೆ ಮಾವನವರದಾಗಿರುತ್ತಿತ್ತು. ಡಜನ್ ಕಟ್ಟಲೆ ಮಕ್ಕಳಿಗೆ ಜನ್ಮಕೊಟ್ಟು ಅವರಿಗೆ ಸರಿಯಾಗಿ ಹೊಟ್ಟೆ ಬಟ್ಟೆಗೆ ಹಾಕಲು ಸಾದ್ಯವಾಗದೆ ಬೇರೆಯವರ ಮನೆಯಲ್ಲಿ ಬಿಟ್ಟ ಪ್ರಕರಣಗಳೂ ಇವೆ. ಮದುವೆಗೆ ಸಾಲುಗಟ್ಟಿ ನಿಂತ ಹೆಣ್ಣು ಮಕ್ಕಳನ್ನು ಹೆತ್ತವರೇ ಎರಡನೇ ಮದುವೆಗೋ, ರೋಗಿಷ್ಟನಿಗೋ, ಊಟಕ್ಕೂ ಗತಿಯಿಲ್ಲದವನಿಗೋ ಕಟ್ಟಿದ ಉದಾಹರಣೆ ಗಳು ಬೇಕಾದಷ್ಟಿವೆ.
ಇಂದಿನ ಆಧುನಿಕ ಮಹಿಳೆ ಮದುವೆಯ ವಿಚಾರದಲ್ಲಿ ತನ್ನ ಸಂಗಾತಿಯನ್ನು ತಾನೇ ಆಯ್ದುಕೊಳ್ಳಲು ಬಯಸುತ್ತಾಳೆ ಎಂಬ ಆರೋಪ. ಹೆತ್ತವರೇ ಮುಂದೆ  ನಿಂತು ಮಾಡಿಸಿದ ಅರೇಂಜ್ಡ್ ಮ್ಯಾರೇಜ್ ಕೂಡಾ ಸಫಲ ವಾಗುತ್ತದೆ ಎಂಬ ಭರವಸೆ ಇಲ್ಲ. ಇನ್ನು ಡೈವರ್ಸ್ ಎಂಬ ಕೆಟ್ಟಪದ್ದತಿ.. ಸರಿ ಹೊಂದದ ದಾಂಪತ್ಯದಲ್ಲಿ ಜನ್ಮಪೂರ್ತಿ ನರಳುತ್ತಾ, ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಕಿತ್ತಾಡಿಕೊಂಡು ಬದುಕುವುದರ ಬದಲಾಗಿ, ದೂರಾಗುವುದೇ ಒಳಿತೇನೋ. ಈ ನಿರ್ಧಾರ ಇಬ್ಬರದೂ ಆಗಿರುತ್ತದೆ. ಪ್ರೀತಿಸಿ ಮದುವೆಯಾದ ವರೆಷ್ಟೋ ಮಂದಿ ಸುಖವಾಗಿಯೂ ಬದುಕುತ್ತಿದ್ದಾರೆ. ಆಧುನಿಕ ಮಹಿಳೆಗೆ ಮದುವೆಯೆನ್ನುವುದು ಅನಿವಾರ್ಯವಲ್ಲ. ಆಕೆಯವಿದ್ಯೆ, ನೌಕರಿ, ಭವಿಷ್ಯದ ಬಗ್ಗೆ ಕನಸು ಎಲ್ಲವನ್ನೂ ಅಳೆದುತೂಗಿ ಯಾವಾಗ ಮದುವೆಯಾಗಬೇಕೆಂದು ನಿರ್ಧರಿಸುತ್ತಾಳೆ. ಹಳೆಯಕಾಲದ ಹೆತ್ತವರು ಮಗಳ ಮದುವೆ ಮಾಡಿಸು ವುದು ತಮ್ಮ ಕರ್ತವ್ಯ ಎಂದು ಭಾವಿಸಿರುವುದುರಿಂದ ಅವರಿಗೆ ಹಿಂಸೆಯಾಗುವುದು ಸಹಜ. ಅದು ಅವಳ ವೈಯಕ್ತಿಕ  ವಿಚಾರ ಎಂದು ತಿಳಿದು ಸುಮ್ಮನಿರುವುದು ಜಾಣತನ. ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಬಂದಾಗ, ಅವರು ಆರೋಗ್ಯವಂತರಾಗಿದ್ದರೆ ‘ಸೇವೆ’ ಮಾಡುವುದು ಸೊಸೆಯ ಕರ್ತವ್ಯ ಎಂಬ ಹಕ್ಕು ಸ್ಥಾಪನೆ ಸರಿಯೇ? ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಕೆಲಸವನ್ನು ತಾವೇ ಮಾಡಿದರೆ ಉತ್ತಮವಲ್ಲವೇ? ತಾವೇ ಉತ್ತಮ ಸಂಸ್ಕಾರವಿತ್ತು ಸಾಕಿದ ಮಗ ಎಷ್ಟರಮಟ್ಟಿಗೆ ಸೇವೆ ಮಾಡುತ್ತಾನೆ? ಸಾಮಾನ್ಯವಾಗಿ, ಸೊಸೆ ಬಂದ ಮೇಲೆ ಮಗ ಬದಲಾಗಿದ್ದಾನೆ ಅನ್ನುತ್ತಾರೆ. ಯಾಕೆ!ಅವನಿಗೆ ಸ್ವಂತ ಬುದ್ಧಿ ಇಲ್ಲವೇ?ಪ್ರೀತಿ ವಿಶ್ವಾಸ ಕೊಡುಕೊಳ್ಳುವ  ವ್ಯವಹಾರ. ಮಗಳನ್ನೂ ಸೊಸೆ ಯನ್ನೂ ಒಂದೇ ತಕ್ಕಡಿಯಲ್ಲಿ ಇರಿಸಿ ವಿಮರ್ಶೆ ಮಾಡು ತ್ತೇವೆಯೇ?
ತಾವೇ ಸಾಕಿದ ಸ್ವಂತ ಮಗಳು ಅಪ್ಪಅಮ್ಮನನ್ನು ಶಾಶ್ವತವಾಗಿ ನೋಡಿಕೊಳ್ಳಲು ಸಿದ್ಧಳಾಗಿರುತ್ತಾಳೆ ಎಂಬ ನಂಬಿಕೆ ಇದೆಯೇ.?
ಹೊರನೋಟದಿಂದ ವ್ಯಕ್ತಿಯನ್ನು ಅಳೆಯುವುದು ಸೂಕ್ತವಲ್ಲ. ಆಧುನಿಕ ಮಹಿಳೆ ಗಂಡಿಗೆ ಸಮನಾಗಿ  ದುಡಿಯುತ್ತಾಳೆ, ಸಂಸಾರದ ಎಲ್ಲಾ ಜವಾಬ್ದಾರಿ ಹೊರುತ್ತಾಳೆ, ಕೆಲಸದ ನಿಮಿತ್ತ ಪತಿ ವರ್ಷಾನುಗಟ್ಟಲೆ ಪರವೂರು, ದೇಶದಲ್ಲಿದ್ದರೂ ಸಂಸಾರ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಅವಳು ಧರಿಸುವ ಉಡುಪು, ಪ್ರಯಾಣ, ತಡರಾತ್ರಿಯ ಡಿನ್ನರ್, ಕೆಲಸದ ನಿಮಿತ್ತ ಅನಿವಾರ್ಯವೂ ಆಗಿರಬಹುದು. ಅಷ್ಟಕ್ಕೇ ಅವಳು ಕೆಟ್ಟವಳು ಎಂದು ಹಣೆಪಟ್ಟಿ ಕಟ್ಟುವ ಅಗತ್ಯವಿದೆಯೇ? ಅದೇ ಕೆಲಸ ಗಂಡು ಮಾಡಿದಾಗ ಸಹಜವೆಂಬಂತೆ ಸಮಾಜ ಸ್ವೀಕರಿಸುತ್ತದೆ.
ಆಧುನಿಕ ಮಹಿಳೆ ಬುದ್ಧಿವಂತಳು, ಸಾಧಿಸುವ ಛಲಗಾರ್ತಿ. ಸಮರ್ಥಳು, ಕಷ್ಟಸಹಿಷ್ಣು. ಉದಾಹರಣೆಗೆ ನೋಡಿ, ಸಾಧಕಿ ಹೆಂಗಳೆಯರು.. ಸುಧಾಮೂರ್ತಿ, ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಂ, ಕಿರಣ್ ಬೇಡಿ…ಇನ್ನೂ ಅನೇಕರು.. ಬದಲಾವಣೆಯನ್ನು ಸ್ವೀಕರಿಸೋಣ, ಅಸಭ್ಯತೆಯನ್ನು ವಿರೋಧಿಸೋಣ. ಆಧುನಿಕತೆ ಹೆಣ್ಣಿನ ಹೊರರೂಪ.ಆಂತರಿಕವಾಗಿ ಯಾವಾಗಲೂ ಹೆಣ್ಣು ಹೆಣ್ಣೇ. ಕ್ಷಮಯಾ ಧರಿತ್ರಿ. ಸೋತು ಗೆಲ್ಲುವವಳು.

.

ಇತ್ತೀಚಿನ ಸುದ್ದಿ

ಜಾಹೀರಾತು