ಇತ್ತೀಚಿನ ಸುದ್ದಿ
ಹೆಬ್ರಿ: ಜಾಗದ ತಕರಾರು; ಇತ್ತಂಡಗಳ ಮಧ್ಯೆ ಗಲಾಟೆ: ಎರಡು ಪ್ರತ್ಯೇಕ ಪ್ರಕರಣಗಳು ದಾಖಲು
06/11/2022, 21:55

ಕಾರ್ಕಳ(reporterkarnataka.com): ಇತ್ತಂಡಗಳ ನಡುವೆ ನಡೆದ ಗಲಾಟೆಯಲ್ಲಿ ಹೆಬ್ರಿ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಗಲಾಟೆಗೆ ಸಂಬಂಧಿಸಿದಂತೆ ಸುಕುಮಾರ ಶೆಟ್ಟಿ ಎಂಬವರು ನೀಡಿದ ದೂರಿನಲ್ಲಿ, ಗದಗ ಜಿಲ್ಲೆಯಲ್ಲಿ ಇರುವ ಇವರು ಹೆಬ್ರಿಯ ಬೇಳಂಜೆ ಗ್ರಾಮದಲ್ಲಿ ಕುಟುಂಬದ ಜಾಗ ಹೊಂದಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿ ವಿಭಾಗ ಪತ್ರವು ಅಗಿರುತ್ತದೆ. ಸುಕುಮಾರ ಶೆಟ್ಟಿ ಅಗಾಗ ಬೇಳಂಜೆಗೆ ಬಂದು ಹೋಗುತ್ತಿದ್ದು, ಅದರಂತೆ ನ.4 ರಂದು ಸುಕುಮಾರ ಶೆಟ್ಟಿ ರವರು ತನ್ನ ತಾಯಿಯೊಂದಿಗೆ ಬೇಳಂಜೆಗೆ ಬಂದು ತಮ್ಮ ಜಾಗದಲ್ಲಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿರುವಾಗ ಸುಕುಮಾರ ಶೆಟ್ಟಿ ರವರ ಚಿಕ್ಕಮ್ಮಅರುಣ ಬಿ.ಶೆಟ್ಟಿ ಅಲ್ಲಿಗೆ ಬಂದು ಜೆಸಿಬಿಯ ಮುಂದೆ ಅಡ್ಡ ಮಲಗಿದ್ದರು. ಈ ವೇಳೆ ಅವರನ್ನು ಸುಕುಮಾರ ಶೆಟ್ಟಿ ರವರು ತಡೆಯಲು ಹೋದಾಗ
ಅರುಣ ಬಿ ಶೆಟ್ಟಿ ಅವರು ಏಕಾಏಕಿ ಇವರ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿ ಓಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ವಿಚಾರವಾಗಿ ಅರುಣ.ಬಿ.ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಬೇಳಂಜೆ ಗ್ರಾಮದ ನಡುಗುಡ್ಡೆ ಇವರು ತನ್ನ ಗಂಡನೊಂದಿಗೆ ವಾಸವಾಗಿದ್ದಾರೆ. ಅವರಿಗೆ ತಾಯಿಯ ಹೆಸರಿನಲ್ಲಿದ್ದ ಜಾಗದ ಪಾಲಿನ ವಿಚಾರದಲ್ಲಿ ತಕರಾರು ಇದ್ದು, ನ.4 ರಂದು ಮದ್ಯಾಹ್ನ 12:00 ಗಂಟೆಗೆ ತಮ್ಮ ಅಕ್ಕ ಗುಲಾಬಿ ಮತ್ತು ಅವರ ಮಗ ಸುಕುಮಾರ ಇವರು ಜೆ.ಸಿ.ಬಿ ಯಲ್ಲಿ ಅರುಣ.ಬಿ.ಶೇಡ್ತಿ ರವರ ತಾಯಿಯವರಿಗೆ ಸೇರಿದ ಜಾಗದಲ್ಲಿ ಕೆಲಸ ಮಾಡಿಸುವಾಗ ಅಲ್ಲಿಗೆ ಹೋಗಿ ಈ ಜಾಗವು ತಾಯಿಯ ಹೆಸರಿನಲ್ಲಿದೆ. ಇಲ್ಲಿ ಕೆಲಸ ಮಾಡಬೇಡಿ ಎಂದು ಹೇಳಿ ತಡೆಯಲು ಹೋದಾಗ ಆರೋಪಿತರು ಅವಾಚ್ಯಶಬ್ದದಿಂದ ಬೈದು ಹೊಡೆದು ಹಲ್ಲೆ ಮಾಡಿ ಅಲ್ಲಿಯೇ ಇದ್ದ ಅವರಣ ಇರದ ಬಾವಿಗೆ ದೂಡಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.