ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ ಸಂಗಮದ ಉದ್ಯಾನವನ ಜಲಾವೃತ
27/07/2025, 14:41

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದೆರಡು ದಿನಗಳಿಂದ ನಿರಂತರವಾಗಿ ಉಂಟಾಗಿರುವ ಗಾಳಿ ಮಳೆಗೆ ಕೊಡಗು ಜಿಲ್ಲೆಯ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪಿದೆ. ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಹನ್ನೆರಡು ಗಂಟೆಗಳ ಅವಧಿಯಲ್ಲಿ 180 ಮಿಲಿಮೀಟರ್ ನಷ್ಟು ಮಳೆ ದಾಖಲಾಗಿದೆ. ಭಾಗಮಂಡಲದ ಕಾವೇರಿ, ಕನ್ನಿಕೆ ಮತ್ತು ಸುಜ್ಜ್ಯತಿ ನದಿಗಳು ಭರ್ತಿಯಾಗಿ ತ್ರಿವೇಣಿ ಸಂಗಮ ಮತ್ತು ಉದ್ಯಾನವನ ಜಲಾವೃತ ಗೊಂಡಿದೆ. ಬಲಮುರಿ, ಬೇತ್ರಿ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ, ನಾಪೋಕ್ಲು ಬಳಿ ನದಿ ನೀರು ರಸ್ತೆ, ತೋಟಗಳಿಗೆ ಆವರಿಸಿದೆ.
ಕರಡಿಗೋಡು ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಇತ್ತ ಕುಶಾಲನಗರ ಪಟ್ಟಣದ ನದಿ ಪಾತ್ರದಲ್ಲಿ ಅಪಾಯದ ಮುನ್ಸೂಚನೆ ನೀಡಿದೆ. ಹಾರಂಗಿ ಜಲಾಶಯ ದಿಂದ 25 ಸಾವಿರ ಕ್ಯೂಸಕ್ಸ್ ನೀರು ನದಿಗೆ ಹೊರ ಬಿಡಲಾಗಿರುವುದರಿಂದ ಕೂಡಿಗೆ ಹಾಗೂ ಕಣಿವೆ ತೂಗು ಸೇತುವೆ ಮುಟ್ಟುವ ಸ್ಥಿತಿಗೆ ತಲುಪಿದೆ. ಸೋಮವಾರಪೇಟೆ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮುಕ್ಕೋದ್ಲು,ಹಟ್ಟಿ ಹೊಲೆ, ಮಾದಾಪುರ ಹೊಳೆ, ಹರದೂರು ಹೊಳೆ ಭಾಗದಿಂದ ನೀರು ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿದೆ. ದಕ್ಷಿಣ ಕೊಡಗಿನ ಭಾಗದ ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು ಭತ್ತದ ಗದ್ದೆ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ, ಬಿರುನಾಣಿ, ಕಾನೂರು, ಭಾಗದಲ್ಲಿ ಸಣ್ಣ ಪುಟ್ಟ ತೊರೆಗಳು ನದಿ ಸ್ವರೋಪ ಪಡೆದುಕೊಂಡು ಹರಿಯುತ್ತಿದ್ದು ಕೆಲವೆಡೆ ಸಂಪರ್ಕ ಸೇತುವೆ ಕುಸಿಯುವ ಭೀತಿ ಎದುರಿಸುತ್ತಿದಲ್ಲದೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ.