ಇತ್ತೀಚಿನ ಸುದ್ದಿ
“ಸ್ವಸ್ಥ ಮೈಸೂರು” ಅಭಿಯಾನ ಒಪ್ಪಂದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹಿ
05/12/2025, 18:45
ಮೈಸೂರು(reporterkarnataka.com): ಸಾಂಕ್ರಮಿಕವಲ್ಲದ ರೋಗ(ಎನ್‌ಸಿಡಿ)ಗಳನ್ನು ತಡೆಗಟ್ಟುವ ಹಾಗೂ ಮೈಸೂರು ನಿವಾಸಿಗಳ ಆರೋಗ್ಯಕರ ಜೀವನ ಉತ್ತೇಜಿಸಲು “ಸ್ವಸ್ಥ ಮೈಸೂರು” ಅಭಿಯಾನ ಪ್ರಾಂಭಿಸಿದ್ದು, ಆರೋಗ್ಯ ಇಲಾಖೆಯೂ ಈ ಅಭಿಯಾನದ ಒಪ್ಪಂದಕ್ಕೆ ಸಹಿ ಹಾಕಿತು.
ಎಚ್‌ಎಚ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ಮತ್ತು ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸಹಭಾಗಿತ್ವದಲ್ಲಿ ಪ್ರಾರಂಭಿಸಿರುವ “ಸ್ವಸ್ಥ ಮೈಸೂರು” ಅಭಿಯಾನಕ್ಕೆ ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ “ಸ್ವಸ್ಥ ಮೈಸೂರು” ಅಭಿಯಾನ ಉದ್ಘಾಟಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ಆರೋಗ್ಯ ವರ್ಲ್ಡ್ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಸಾಂಕ್ರಮಿಕವಲ್ಲದ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡು, ಅದರ ಯಶಸ್ಸಿನ ಬಳಿಕ ಎರಡನೇ ಅಭಿಯಾನವನ್ನು ಮೈಸೂರಿನಲ್ಲಿ ಸ್ವಸ್ಥ ಮೈಸೂರು ಶೀರ್ಷಿಕೆಯಡಿ ಮುಂದುವರೆಸುತ್ತಿರುವುದು ಶ್ವಾಘನೀಯ. ಈ ಅಭಿಯಾನವನ್ನು ಇನ್ನಷ್ಟು ಯಶಸ್ವಿಗೊಳಿಸಲು ನಮ್ಮ ಇಲಾಖೆಯ ಸಹಕಾರವನ್ನೂ ಸಹ ನೀಡಲು ಮುಂದಾಗಿದ್ದು, ಒಪ್ಪಂದ ಮಾಡಿಕೊಂಡಿದ್ದೇವೆ, ಮುಂದಿನ ಎರಡು ವರ್ಷದಲ್ಲಿ ಮೈಸೂರಿನ ಜನರ ಆರೋಗ್ಯಕರ ಜೀವನ ಉತ್ತೇಜಿಸುವ ಕೆಲಸ ಈ ಮೂಲಕ ಆಗಲಿದೆ ಎಂದರು. ಆರೋಗ್ಯ ಇಲಾಖೆಯು ಈಗಾಗಲೇ ರಾಜ್ಯಾದ್ಯಂತ “ಗೃಹ ಆರೋಗ್ಯ” ಜಾರಿ ಮಾಡಿದ್ದು, 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಧುಮೇಹ, ಅಧಿಕ ರಕ್ತದೊತ್ತಡ, ಕೆಲವು ಕ್ಯಾನ್ಸರ್ ಸೇರಿದಂತೆ 14 ಅಸಾಂಕ್ರಮಿಕ ರೋಗಿಗಳ ತಪಾಸಣೆ ನಡೆಸಿ, ಉಚಿತ ಔಷಧ ನೀಡುವ ಕೆಲಸ ಮಾಡಲಾಗುತ್ತಿದೆ, ಈಗಾಗಲೇ 1 ಕೋಟಿ ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಹೇಳಿದರು.
ಈ ದೇಶದ ಬೆನ್ನೆಲುಬು ಶಿಕ್ಷಣ ಹಾಗೂ ಆರೋಗ್ಯ, ಈ ಎರಡೂ ಉತ್ತಮವಾಗಿದ್ದರೆ ಮಾತ್ರ ಆ ದೇಶ ಸುಭೀಕ್ಷವಾಗಿರಲು ಸಾಧ್ಯ. ಕೇವಲ ಸರ್ಕಾರದಿಂದ ಮಾತ್ರ ಆರೋಗ್ಯ ಸಂಬಂಧಿಸಿದ ಚಟುವಟಿಕೆ ನಡೆಸುವುದು ಕಷ್ಟ, ಸಮಾಜಮುಖಿ ಸಂಸ್ಥೆಗಳೂ ಸ್ವಯಂಪ್ರೇರಿತವಾಗಿ ಇಂತಹ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.
ಇನ್ನು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಆರೋಗ್ಯಕರ ಆಹಾರ ಸೇವಿಸಿ, ಜಂಕ್‌ಫುಡ್ ಸೇವನೆ ತ್ಯಜಿಸುವ ಮನಸ್ಥೈರ್ಯ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ಎಚ್.ಎಚ್. ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ಅಧ್ಯಕ್ಷರಾದ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ಆರೋಗ್ಯ ಸಿಟಿ ಬೆಂಗಳೂರು ಅಭಿಯಾನದ ಯಶಸ್ಸಿನ ಬಳಿಕ ಮೈಸೂರಿನಲ್ಲಿ ಈ ಅಭಿಯಾನವನ್ನು ಸ್ವಸ್ಥ ಮೈಸೂರು ಶೀರ್ಷಿಕೆಯಡಿ ಮುಂದುವರೆಸುತ್ತಿದ್ದೇವೆ. ಅಸಾಂಕ್ರಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಅಭಿಯಾನ ಮೂಲಕ ಮಾಡಲಿದ್ದೇವೆ, ಇದಕ್ಕೆ ಆರೋಗ್ಯ ಇಲಾಖೆಯವರ ಸಹಕಾರ ದೊರೆತಿರುವುದು ಶ್ವಾಘನೀಯ ಎಂದರು.
ಆರೋಗ್ಯ ವರ್ಲ್ಡ್ ಸಂಸ್ಥಾಪಕಿ ನಳಿನಿ ಸಾಲಿಗ್ರಾಮ ಮಾತನಾಡಿ, ನಮ್ಮಲ್ಲಿ ಶೇ.80ರಷ್ಟು ಜನರು ಡಯಾಬಿಟಿಸಿ ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಶೇ.40ರಷ್ಟು ಜನರು ಅನೇಕ ಕ್ಯಾನ್ಸರ್‌ಗಳಿಗೆ ತುತ್ತಾಗಿದ್ದಾರೆ. ಸಾಂಕ್ರಮಿಕವಲ್ಲದ ಈ ರೋಗಗಳ ಬಗ್ಗೆ ಈಗಲೂ ಎಚ್ಚೆತ್ತುಕೊಳ್ಳದೇ ಹೋದರೆ, ಭವಿಷ್ಯದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂದರು.
*ಏನಿದು ಸ್ವಸ್ಥ ಮೈಸೂರು ಅಭಿಯಾನ*:
15 ಕಂಪನಿಗಳು, ಆಸ್ಪತ್ರೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳನ್ನು ಒಳಗೊಂಡು ಪ್ರತಿಜ್ಞೆ ತೆಗೆದುಕೊಳ್ಳಲಾಯಿತು. ಮುಂದಿನ ಎರಡು ವರ್ಷಗಳಲ್ಲಿ ಆರೋಗ್ಯಕರ ಜೀವನವನ್ನು ಉತ್ತೇಜಿಸುವ ಸಾರ್ವಜನಿಕ ಪ್ರತಿಜ್ಞೆಗಳನ್ನು ಪ್ರತಿಯೊಬ್ಬರೂ ಇದೇವೇಳೆ ಪುನರುಚ್ಚರಿಸಿದರು, ಇದರಲ್ಲಿ NCD ಗಳ ತಪಾಸಣೆ, ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು, ಆರೋಗ್ಯಕರ ಆಹಾರ ಸೇವನೆಯನ್ನು ಸುಧಾರಿಸುವುದು, ಮಾನಸಿಕ ಆರೋಗ್ಯವನ್ನು ಹೆಚ್ಚಿಸುವುದು, ಹದಿಹರೆಯದವರ ಆರೋಗ್ಯವನ್ನು ಸುಧಾರಿಸುವುದು ಇತ್ಯಾದಿ ಅಂಶಗಳು ಸೇರಿವೆ.
ಎರಡು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಆರೋಗ್ಯ ಅಭಿಯಾನವು (2022-2024) ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ತಲುಪಿದೆ.










