ಇತ್ತೀಚಿನ ಸುದ್ದಿ
ಹತ್ತಿ ಬಟ್ಟೆ ಸೀರೆ ನೇಯ್ಗೆ: ಸಂಜೀವ ಶೆಟ್ಟಿಗಾರ್ ಅವರಿಗೆ ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ; ಆಗಸ್ಟ್ 7ರಂದು ಪ್ರದಾನ
06/08/2023, 11:28
ಮಂಗಳೂರು(reporterkarnataka.com): ಪರಿಣಿತ ಉಡುಪಿ ಸೀರೆ ನೇಕಾರರು ಆಗಿರುವ ಸಂಜೀವ ಶೆಟ್ಟಿಗಾರ್ ರವರಿಗೆ ಹತ್ತಿ ಬಟ್ಟೆ ಸೀರೆ ನೇಯ್ಗೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ.
ಅವರು ತಾಳಿಪಾಡಿ ನೇಕಾರರ ಸಂಘದ ಸದಸ್ಯರು..
ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ದಿನದಂದು ಬೆಂಗಳೂರಿನಲ್ಲಿ ಅವರು ರಾಜ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
74 ವಯಸ್ಸಿನ ಸಂಜೀವ ಶೆಟ್ಟಿಗಾರ್ ಈಗ ಇರುವ ಕೇವಲ ಹತ್ತು 80 ಕೌಂಟ್ ನೇಕಾರರಲ್ಲಿ ಒಬ್ಬರು. ಕೈಯಿಂದ ಚಂದದ ಬುಟ್ಟಾ ನೇಯುವಲ್ಲಿ ಪರಿಣಿತರು. 80 ಕೌಂಟ್ ನ ಸಹಜ ಸೀರೆ ನೇಯ್ದ ಮೊದಲಿಗರು. ಕದಿಕೆ ಟ್ರಸ್ಟ್ ಇಪ್ಪತ್ತು ವರುಷದ ನಂತರ ಗೋಪಿನಾಥ್ ಶೆಟ್ಟಿಗಾರ್ ಅವರ ನೆರವಿನಲ್ಲಿ ಪರಿಚಯಿಸಿದ ಇಕತ್ ಸೀರೆಯನ್ನು ಯಾವುದೇ ಹಿಂಜರಿಕೆ ತೋರಿಸದೆ ಮೊದಲು ನೇಯ್ದವರು. ನೇಕಾರಿಕೆ ಮತ್ತು ಅದರ ಪೂರ್ವ ತಯಾರಿಕೆಯ ಕೆಲಸದಲ್ಲಿ ಅತ್ಯಾಪೂರ್ವ ಪರಿಣತಿ ಹೊಂದಿರುವ ಸಂಜೀವ ಶೆಟ್ಟಿಗಾರ್, ಎರಡು ಹಾಸುಗಳನ್ನು ಒಂದೇ ಕೈಯಿಂದ ಜೋಡಿಸುವ ಅಪರೂಪದ ಕುಶಲತೆ ಹೊಂದಿದ್ದಾರೆ. ಇವರ ಸಂದು ಹಾಕುವ ಈ ಕೆಲಸ ನೋಡುವುದೇ ಕಣ್ಣಿಗೆ ಒಂದು ಹಬ್ಬ. ಸಾಂಪ್ರದಾಯಿಕ ಮತ್ತು ಆಧುನಿಕ ಎರಡೂ ಶೈಲಿಯ ಸೀರೆಗಳನ್ನು ಬಣ್ಣಗಳನ್ನು ಸರಿಯಾಗಿ ಹೊಂದಿಸಿ ಬೇಡಿಕೆಗೆ ಸರಿಯಾಗಿ ಈ 72ರ ವಯಸ್ಸಿನಲ್ಲೂ ನೇಯಬಲ್ಲ ಪ್ರಯೋಗಶೀಲ ಮನಸ್ಸು ಹೊಂದಿದ್ದಾರೆ. ಒಂದೇ ಹಾಸಿನಲ್ಲಿ ವಿವಿಧ ವಿನ್ಯಾಸದ ಸೀರೆ ನೆಯಬಲ್ಲರು. ಸದಾ ಹಸನ್ಮುಖರಾಗಿ ತಮ್ಮ ಕುಶಲತೆಯನ್ನು ಕಿರಿಯರಿಗೆ ಕಲಿಸುವ ಸಂಜೀವ ಶೆಟ್ಟಿಗಾರ್ ಎಲ್ಲರಿಗೂ ಅಚ್ಚುಮೆಚ್ಚು.
ಕದಿಕೆ ಟ್ರಸ್ಟ್ ಆರಂಭಿಸಿದ ಉಡುಪಿ ಸೀರೆ ಉಳಿಸಿ ಅಭಿಯಾನದ ನಂತರ ತಾಳಿಪಾಡಿ ನೇಕಾರರ ಸಂಘವನ್ನು ಸೇರಿದ ಶ್ರೀ ಸಂಜೀವ ಶೆಟ್ಟಿಗಾರ್ ಅನೇಕ ವರುಷಗಳ ಕಾಲ ಉಡುಪಿ ನೇಕಾರರ ಸಂಘದಲ್ಲಿ ಸೇವೆ ಸಲ್ಲಿಸಿದ್ದರು.
ಸಂಜೀವ ಶೆಟ್ಟಿಗಾರ್ ಅವರಿಗೆ ಅಭಿನಂದನೆಗಳು. ಅವರು ಇನ್ನೂ ಹಲವು ವರುಷಗಳ ಕಾಲ ಕಿರಿಯರನ್ನು ಪ್ರೋತ್ಸಾಹಿಸುತ್ತಾ ನೇಕಾರಿಕಾ ಕಾಯಕದಲ್ಲಿ ತೊಡಗಲಿ ಎನ್ನುವುದು ಕದಿಕೆ ಟ್ರಸ್ಟ್ ನ ಹಾರೈಕೆ.