ಇತ್ತೀಚಿನ ಸುದ್ದಿ
ಹಾಡಹಗಲೇ ಮನೆ ಕಳ್ಳತನ: ಇಬ್ಬರು ಖತರ್ನಾಕ್ ಕಳ್ಳರ ಬಂಧನ; 78 ಗ್ರಾಂ ಚಿನ್ನಾಭರಣ ವಶ
24/08/2023, 13:37

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಕಣಚೂರು ಗ್ರಾಮದಲ್ಲಿ ಹಾಡಹಗಲೇ ನಡೆದ ಮನೆ ದರೋಡೆ ಪ್ರಕರಣ ದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸ್ವಾಮಿ ಮತ್ತು ಸಂಜಯ್ ಎಂದು ಗುರುತಿಸಲಾಗಿದೆ. ಸ್ವಾಮಿ ಎಂಬಾತ ಮೂಡಿಗೆರೆ ಸಮೀಪದ ಕೃಷ್ಣಾಪುರದವನು. ಲಾರಿ ಕ್ಲೀನರ್, ಗಾರೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಸಂಜಯ್ ಚನ್ನಗಿರಿ ಮೂಲದವನು. ಅವನ ಹೆಂಡತಿಯ ಮನೆ ಮೂಡಿಗೆರೆ ಸಮೀಪದ ಹಂಡುಗುಳಿ ನವಗ್ರಾಮದವರು.
ಪ್ರಕರಣದ ಹಿನ್ನೆಲೆ: ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣಚೂರು ಗ್ರಾಮದಲ್ಲಿ ಹಾಡಹಗಲೇ ವೇದಾವತಿ ಎಂಬುವರ ಮನೆಯ ಹೆಂಚುಗಳನ್ನ ತೆಗೆದು ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಮನೆಯೊಡತಿ ವೇದಾವತಿ ಬೆಳಗ್ಗೆ ತಮ್ಮ ಕಾಫಿತೋಟಕ್ಕೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಮನೆಗೆ ಬರುವಷ್ಟರಲ್ಲಿ ಮನೆ ಹೆಂಚು ತೆಗೆದು ಕಳ್ಳತನ ಮಾಡಿದ್ದು ಕಂಡುಬಂದಿತ್ತು.
ಹಾಡಹಗಲೇ ಕಳ್ಳತನ ನಡೆದಿದ್ದು ಕಂಡು ಗ್ರಾಮದ ಜನರು ಆತಂಕಕ್ಕೆ ಈಡಾಗಿದ್ದರು.
ಇವರಿಬ್ಬರು ಕಳ್ಳತನ, ದರೋಡೆಯನ್ನು ವೃತ್ತಿಯಾಗಿಸಿಕೊಂಡಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇವರು ಆರೋಪಿಗಳಾಗಿದ್ದು, ಜೈಲು ವಾಸ ಅನುಭವಿಸಿ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ. ಕಣಚೂರು ಅಲ್ಲದೇ ಇತ್ತೀಚೆಗೆ ಇವರು ಶನಿವಾರಸಂತೆ ಎಂಬಲ್ಲಿಯೂ ದರೋಡೆ ಕೃತ್ಯ ನಡೆಸಿದ್ದರು ಎನ್ನಲಾಗಿದೆ.
ಇವರು ಬೈಕಿನಲ್ಲಿ ತಮಗೆ ಪರಿಚಿತವಿರುವ ಊರುಗಳಿಗಳಲ್ಲಿ ಸುತ್ತುತ್ತಿದ್ದರು ಎನ್ನಲಾಗಿದೆ. ಮನೆಗಳನ್ನು ಗಮನಿಸುತ್ತಾ ಯಾವ ಮನೆಗಳಿಗೆ ಬೀಗ ಹಾಕಿರುತ್ತಾರೆ ಎಂದು ಗಮನಿಸಿ ಕಿಟಕಿ ಬಾಗಿಲು ಒಡೆದು, ಹೆಂಚು ತೆಗೆದು ಮನೆ ದರೋಡೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಬಂಧಿಸಿ ಅವರಿಂದ 78 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳ ಮಹಜರು ನಡೆಸಿ ವಿಚಾರಣೆ ಒಳಪಡಿಸಲಾಗಿದೆ. ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ, ಗೋಣಿಬೀಡು ಠಾಣಾಧಿಕಾರಿ ಹರ್ಷಗೌಡ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ವೇಗವಾಗಿ ಕಳ್ಳರನ್ನು ಬಂಧಿಸಿದ ಪೊಲೀಸರ ಶ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.