ಇತ್ತೀಚಿನ ಸುದ್ದಿ
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ
05/09/2022, 12:37

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ” ಎಂಬ ದಾಸರ ಹಾಡಿನ ಸಾಲಿನಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಮಹತ್ತರವಾದದ್ದು. ಶಿಲೆಯಂತಿದ್ದ ಮಗುವನ್ನು ಸುಂದರ ಶಿಲ್ಪವನ್ನಾಗಿಸುವವನೇ ಶಿಕ್ಷಕ. “ವ್ಯಕ್ತಿಯ ಜೀವನದಲ್ಲಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು”, ಜೀವನದಲ್ಲಿ ಗುರಿಯನ್ನು ಸರಿಯಾದ ರೀತಿಯಲ್ಲಿ ತಲುಪಲು, ಸುಂದರವಾದ ಭವಿಷ್ಯವನ್ನು ರೂಪಿಸಲು ಗುರುವಿನ ಪಾತ್ರ ಪ್ರಮುಖವಾದದ್ದು.
ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ಬದುಕಿನಲ್ಲಿ ಶಿಕ್ಷಕರ ಪ್ರತಿಯೊಂದು ನಡೆ ನುಡಿ, ಕಾರ್ಯಗಳು ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶನೀಯವಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 5 ಬಂತೆಂದರೆ ಎಲ್ಲರೂ ಒಮ್ಮೆ ತಮ್ಮ ಜೀವನವನ್ನು ರೂಪಿಸಿದ ಶಿಕ್ಷಕರನ್ನು ನೆನೆಯುವಂತಹ ದಿನ .
ಸೆಪ್ಟೆಂಬರ್ 5 ನ್ನು ಭಾರತದ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ನೆನಪಿಗಾಗಿ ಆಚರಿಸುತ್ತೇವೆ. ರಾಧಾಕೃಷ್ಣನ್ ರವರು ಶಿಕ್ಷಕರಾಗಿದ್ದುಕೊಂಡು ಭಾರತ ದೇಶದ ರಾಷ್ಟ್ರಪತಿ ಹುದ್ದೆಯಲ್ಲಿ ವಿರಾಜಮಾನರಾದವರು . ಒಬ್ಬ ಶಿಕ್ಷಕ ಮನಸ್ಸು ಮಾಡಿದ್ದಲ್ಲಿ ರಾಷ್ಟ್ರದ ಉನ್ನತ ಹುದ್ದೆಗೆರಬಹುದು ಎಂಬುದಕ್ಕೆ ರಾಧಾಕೃಷ್ಣನ್ ರವರೇ ಸಾಕ್ಷಿ .
ಸರಳತೆ ,ಸಜ್ಜನಿಕೆ , ಕಾರ್ಯನಿಷ್ಠತೆ ವೃತ್ತಿ ಬದ್ಧತೆ, ಜ್ಞಾನದ ಗಣಿಯಂತಿರುವ ರಾಧಾಕೃಷ್ಣನ್ ರವರ ಜೀವನ ಇಂದಿನ ಎಲ್ಲರಿಗೂ ಆದರ್ಶ ಪ್ರಾಯವಾಗಿದೆ. ಶಿಕ್ಷಕ ವೃತ್ತಿಯನ್ನು ಕಾಯ, ವಾಚ, ಮನಸಾ ಶ್ರದ್ಧೆಯಿಂದ, ಸೇವಾ ಮನೋಭಾವನೆಯಿಂದ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸಿ,
ಭವ್ಯ ಭಾರತದ ನಿರ್ಮಾಣ ಮಾಡುವುದು ಎಲ್ಲಾ ಶಿಕ್ಷಕರ ಜವಾಬ್ದಾರಿಯಾಗಿದೆ..
ಎಲ್ಲರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು