ಇತ್ತೀಚಿನ ಸುದ್ದಿ
ಗೃಹ ಸಚಿವರ ಸೂಚನೆ: ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ 518 ವಿದೇಶಿ ಪ್ರಜೆಗಳು ಪೊಲೀಸ್ ವಶಕ್ಕೆ
05/07/2022, 09:12
ಮಂಗಳೂರು(reporterkarnataka.com): ನಗರದಲ್ಲಿ ಅಕ್ರಮವಾಗಿ ನೆಲೆಸಿರುವ 518 ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಡಲನಗರಿಯಲ್ಲಿ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ನಡೆದಿದ್ದು,ಕಳೆದ ಒಂದು ವಾರದಲ್ಲಿ 4 ಸಾವಿರ ಮಂದಿಯ ದಾಖಲೆ ಪರಿಶೀಲಿಸಲಾಗಿದೆ. ಈ ಪೈಕಿ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ 518 ಮಂದಿ ವಲಸೆ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ನಗರದ ರೊಸಾರಿಯೊ ಶಾಲೆಯ ಸಭಾಂಗಣದಲ್ಲಿ ಪೊಲೀಸರು ಬೆಳಗ್ಗಿನಿಂದಲೇ ಪ್ರತಿಯೊಬ್ಬ ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ.
ನಗರದಲ್ಲಿ ಬಾಂಗ್ಲಾ ಮತ್ತಿತರ ದೇಶಗಳ ಕಾರ್ಮಿಕರು ಅಕ್ರಮವಾಗಿ ನೆಲೆಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ದಾಖಲೆ ಪರಿಶೀಲನೆ ಕಾರ್ಯ ನಡೆದಿದೆ.
ಈ ಸಂದರ್ಭ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನಗರದ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಲಾದ ಕಾರ್ಯಾಚರಣೆಯ ವೇಳೆ 4000 ಮಂದಿಯ ದಾಖಲೆ ಪರಿಶೀಲನೆ ನಡೆಸಲಾಗಿದೆ. ಅವರಲ್ಲಿ ಸರಿಯಾದ ದಾಖಲೆಗಳಿಲ್ಲದೆ, ಅನುಮಾನಸ್ಪದ ರೀತಿಯಲ್ಲಿ ಕಂಡು ಬಂದವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದರು.
ಗೃಹ ಸಚಿವರು ಇತ್ತೀಚೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪರಿಶೀಲನಾ ಸಭೆಯ ಸಂದರ್ಭ ನೀಡಿದ ಆದೇಶದಂತೆ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ಸಾಗಿದೆ. ಪ್ರತಿಯೊಬ್ಬ ವಲಸೆ ಕಾರ್ಮಿಕರ ಮೇಲೂ ವಿಶೇಷ ನಿಗಾ ಇಡಲಾಗಿದೆ ಎಂದರು.
ಮುಖ್ಯವಾಗಿ ಚುನಾವಣಾ ಗುರುತಿನ ಚೀಟಿ, ಆಧಾರ್‌ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದೆ. ಆದರೆ ಅವುಗಳನ್ನು ಕೂಡಾ ನಕಲಿಯಾಗಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅದನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿಯೂ ಮೊಬೈಲ್ ನಂಬರಗಳ ಮೂಲಕ ಅವರ ಪರಿಶೀಲನೆ ನಡೆಸಲಾಗುತ್ತಿದೆ. 20ಕ್ಕೂ ಅಧಿಕ ವಿಷಯಗಳ ಮೇಲೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.