ಇತ್ತೀಚಿನ ಸುದ್ದಿ
ಚೌತಿಗೂ ಇಲ್ಲ, ದಸರಾಕ್ಕೂ ಇಲ್ಲ: ರಾಜ್ಯದ 13 ಸಾವಿರ ಆರೋಗ್ಯ ಸಿಬ್ಬಂದಿಗಳಿಗೆ 3 ತಿಂಗಳಿಗೊಮ್ಮೆ ಸಂಬಳ!!
17/10/2021, 16:20
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಇಡೀ ರಾಜ್ಯ ಆರೋಗ್ಯಕರವಾಗಿರಬೇಕಾದರೆ ಮೊದಲಿಗೆ ಆರೋಗ್ಯ ಇಲಾಖೆ ಸ್ವಸ್ಥವಾಗಿರಬೇಕು. ಆದರೆ ರಾಜ್ಯದ 13 ಸಾವಿರ ಮಂದಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಿಗೆ 3 ತಿಂಗಳಿಗೊಮ್ಮೆ ಸಂಬಳವಾಗುತ್ತದೆ. ಇದರಲ್ಲಿ ಕೂಡ 2 ತಿಂಗಳ ಸಂಬಳ ಮಾತ್ರ ಕೊಟ್ಟು ಒಂದು ತಿಂಗಳದ್ದು ಪೆಂಡಿಂಗ್ ಇಡಲಾಗುತ್ತದೆ.!
ಇದು ರಾಜ್ಯ ಆರೋಗ್ಯ ಇಲಾಖೆಯಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದ ಪರಂಪರೆ. ಕಾಂಗ್ರೆಸ್, ಜನತಾ ಪರಿವಾರ, ಬಿಜೆಪಿ- ದಳ, ದಳ-ಕಾಂಗ್ರೆಸ್, ಬಿಜೆಪಿ ಈ ಎಲ್ಲ ಸರಕಾರದ ಆಡಳಿತದಲ್ಲಿಯೂ ಇದೇ ಪರಂಪರೆ ಮುಂದುವರಿದುಕೊಂಡು ಬಂದಿದೆ. ಆರೋಗ್ಯ ಸಚಿವರಿಗೂ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕೆಂದು ಅನಿಸಿಲ್ಲ. ಆರೋಗ್ಯ ಸುರಕ್ಷಾ ಅಧಿಕಾರಿಗಳು ಕೂಡ ಗಟ್ಟಿ ಧ್ವನಿಯಲ್ಲಿ ಇದನ್ನು ಪ್ರತಿಭಟಿಸಿಲ್ಲ.
ರಾಜ್ಯದಲ್ಲಿರುವ ಸುಮಾರು 13 ಸಾವಿರ ಮಂದಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 400 ಮಂದಿ ಇದ್ದಾರೆ. ನೆರೆಯ ಉಡುಪಿಯಲ್ಲಿ ಸುಮಾರು 300
ಮಂದಿ ಆರೋಗ್ಯ ಸುರಕ್ಷಾ ಅಧಿಕಾರಿಗಳಿದ್ದಾರೆ. ಇವರೆಲ್ಲ ದಶಕಗಳಿಂದ 3 ತಿಂಗಳಿಗೊಮ್ಮೆ ಸಂಬಳ ಪಡೆಯುತ್ತಾರೆ.
ಆರೋಗ್ಯ ಇಲಾಖೆಯಲ್ಲಿರುವ ಸಿಬ್ಬಂದಿಗಳ ಪೈಕಿ ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ, ಫಾರ್ಮಸಿಸ್ಟ್, ಕ್ಲರ್ಕ್ ಹಾಗೂ ಗ್ರೂಪ್ ಡಿ ನೌಕರರಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳನ್ನು ಹೊರತುಪಡಿಸಿ ಮಿಕ್ಕವರೆಲ್ಲ ಕಚೇರಿಯಲ್ಲೇ ದುಡಿಯುತ್ತಾರೆ. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಮಾತ್ರ ಫೀಲ್ಡ್ ನಲ್ಲಿ ಜನರೊಂದಿಗೆ ಕೆಲಸ ಮಾಡುತ್ತಾರೆ. ಮಲೇರಿಯಾ, ಡೆಂಗೆ, ಕೊರೊನಾ ಏನೇ ಬರಲಿ ಇವರು ತಮ್ಮ ಸೇವೆಯನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗುತ್ತಾರೆ.
ಈ ಹಿಂದೆ ಇವರನ್ನು ವಿಲೇಜ್ ನರ್ಸ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಒಂದು ಗ್ರಾಮಕ್ಕೆ ಒಬ್ಬರು ವಿಲೇಜ್ ನರ್ಸ್ ಇರುತ್ತಾರೆ. ಇದೇ ವಿಲೇಜ್ ನರ್ಸ್ ಗಳಿಗೆ ಪ್ರಸ್ತುತ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎಂಬ ಡೆಸಿಗ್ನೇಶನ್ ಸರಕಾರ ನೀಡಿದೆ. 3 ಸಾವಿರದಿಂದ 5 ಸಾವಿರ ಜನರ ಹೊಣೆಗಾರಿಕೆಯನ್ನು ಇವರಿಗೆ ನೀಡಲಾಗುತ್ತದೆ.
ಮುಂಚೆ ವಿಲೇಜ್ ನರ್ಸ್ ಗಳಲ್ಲಿ ಪುರುಷ ಸಿಬ್ಬಂದಿಗಳು ಕೂಡ ಇದ್ದರು. ಆದರೆ ಸರಕಾರ ಪುರುಷ ಸಿಬ್ಬಂದಿಗಳನ್ನು ಪ್ರತ್ಯೇಕಿಸಿ ಅವರಿಗೆ ಹೆಲ್ತ್ ಇನ್ಸ್‌ಪೆಕ್ಟಿಂಗ್ ಆಫೀಸರ್ ಎಂಬ ಪದನಾಮ ನೀಡಿದೆ. ಮಹಿಳಾ ಸಿಬ್ಬಂದಿಗಳನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎಂಬ ಡೆಸಿಗ್ನೇಶನೊಂದಿಗೆ ಫೀಲ್ಡ್ ಕೆಲಸಕ್ಕೆ ಬಿಡಲಾಗಿದೆ. ಗ್ರಾಮದಲ್ಲಿ ಯಾವುದೇ ರೋಗ ರುಜಿನ ಬಂದರೂ ಇವರು ಬೇಕು. ಕೊರೊನಾದ ಈ ಕಷ್ಟ ಕಾಲದಲ್ಲಿ ಇವರ ಪಾಡು ಹೇಳಿ ತೀರದು. ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಹಬ್ಬದ ರಜೆ ಇದ್ದರೆ ಇವರಿಗೆ ಮಾತ್ರ ಇಲ್ಲ. ಜತೆಗೆ ಸಂಬಳ ಕೂಡ ಪ್ರತಿ ತಿಂಗಳು ಸಿಗುತ್ತಿಲ್ಲ.