ಇತ್ತೀಚಿನ ಸುದ್ದಿ
Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ ಸಹಾಯಧನ: ಕೃಷಿ ಇಲಾಖೆ ಮಹತ್ವದ ಆದೇಶ
03/04/2025, 22:49

ಬೆಂಗಳೂರು(reporterkarnataka.com): ಸೂಕ್ಷ್ಮ ನೀರಾವರಿ ಪರಿಕರಗಳನ್ನು ಪಡೆಯಲು ಇದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಿದ್ದು ಎಲ್ಲಾ ವರ್ಗದ ರೈತ ಫಲಾನುಭವಿಗಳು 7 ವರ್ಷಗಳ ನಂತರ ಅದೇ ಜಮೀನಿಗೆ ಮರು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳನ್ನು ಹೊರತುಪಡಿಸಿ ಇತರೆ ವರ್ಗದವರಿಗೆ ಒಮ್ಮೆ ಮಾತ್ರ ಒಂದು ನಿರ್ದಿಷ್ಟ ಜಮೀನಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳು 7 ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯಲು ಇದ್ದ ಅವಕಾಶವನ್ನು ಇತರೆ ವರ್ಗಗಳಿಗೂ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಆದೇಶ ಹೊರಬಿದ್ದಿದ್ದು, ಲಕ್ಷಾಂತರ ರೈತ ಕುಟುಂಬಗಳಿಗೆ ಅನುಕೂಲವಾಗಲಿವೆ.
ಕೃಷಿ ಸಚಿವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ರೈತರು ಇತರೆ ವರ್ಗಗಳಿಗೆ ಇರುವ ನಿರ್ಬಂಧ ಸಡಿಲಿಸುವಂತೆ ಮನವಿ ಮಾಡುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿ ನಿಯಮ ಸಡಿಲಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಇದ್ದ 9 ಘಟಕಗಳನ್ನು ಸೇರ್ಪಡೆಗೊಳಿಸಿ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ-ಆರ್ಕೆವಿವೈ) ಎಂದು ಮರು ನಾಮಕರಣಗೊಳಿಸಿ ಅನುಷ್ಠಾನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ವ್ಯಾಪ್ತಿಗೆ ಒಳಪಡುವಂತೆ ರೈತರಿಗೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಪಿಎಂಕೆಎಸ್ವೈ ಮತ್ತು ಪಿಎಂಎಂಎಸ್ ಯೋಜನೆಯಡಿ ಸೂಕ್ಷ್ಮ ನೀರಾವರಿ ಯೋಜನೆಗೆ ರೂ.274 ಕೋಟಿ ಮೀಸಲಿರಿಸಲಾಗಿತ್ತು. ಇದರಿಂದ 2.60 ಲಕ್ಷ ರೈತರಿಗೆ ಇದರ ಅನುಕೂಲ ತಲುಪಲಿದೆ ಹಾಗೆಯೇ ಟಾಪ್ಅಪ್ ಯೋಜನೆಯಡಿ ರೂ.252 ಕೋಟಿಗಳ ಅನುದಾನವನ್ನು ಸೂಕ್ಷ್ಮ ನೀರಾವರಿ ಸಾಧನ ಸಲಕರಣೆಗಳ ಆರ್ಥಿಕ ನೆರವಿಗಾಗಿ ನೀಡಲಾಗಿದೆ.