ಇತ್ತೀಚಿನ ಸುದ್ದಿ
ಗೆಟ್ಸೋ ಬಹುಕೋಟಿ ಹಗರಣ: 100 ಕೋಟಿಗೂ ಅಧಿಕ ಪಂಗನಾಮ?; ಸ್ಥಳೀಯ ಕೆಲವು ವ್ಯಕ್ತಿಗಳು ಶಾಮೀಲು ಶಂಕೆ
02/01/2023, 10:44

ಮಂಗಳೂರು(reporterkarnataka.com): ಆನ್ ಲೈನ್ ಟ್ರೇಡಿಂಗ್ ಕಂಪನಿಯೊಂದು ಡಾಲರ್ ಮೇಲೆ ಹಣ ಹೂಡಿಕೆಯ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದು, ಇದರಲ್ಲಿ ಕೆಲವು ಸ್ಥಳೀಯ ವ್ಯಕ್ತಿಗಳು ಕೂಡ ಶಾಮೀಲಾಗಿರುವ ಕುರಿತು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಗೆಟ್ಸೋ(Getso) ಎಂಬ ಅಮೆರಿಕನ್ ಆನ್ ಲೈನ್ ಟ್ರೇಡಿಂಗ್ ನಕಲಿ ಕಂಪನಿಯು ನಾನಾ ಸ್ಕೀಮ್ ಗಳ ಮೂಲಕ ಡಾಲರ್ ಮೇಲೆ ಹಣ ಹೂಡಿದರೆ ತಿಂಗಳಲ್ಲಿ ಹಣ ದ್ವಿಗುಣಗೊಳಿಸುವ ಆಸೆ ತೋರಿಸಿತ್ತು. ಕನಿಷ್ಢ 2600 ರೂ. ಹೂಡಿಕೆ ಮಾಡಿದರೆ, 37 ದಿನಗಳಲ್ಲಿ 5200 ರೂ. ಆಮಿಷೆ ತೋರಿಸಲಾಗಿತ್ತು. ಈ ನಕಲಿ ಕಂಪನಿಯ ಪ್ರಚಾರದ ಹೊಣೆಯನ್ನು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು ವಹಿಸಿದ್ದರು. ಇದೀಗ ಅವರ ಮೊಬೈಲ್ ಕೆಲವು ದಿನ
ಸ್ವಿಚ್ ಆಫ್ ಆಗಿ ಈಗ ಮತ್ತೆ ಸದ್ದು ಮಾಡುತ್ತಿದೆ. ಕಾವೂರು ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ.
ಕರಾವಳಿಯ ಉಭಯ ಜಿಲ್ಲೆಗಳಿಗೆ ಕೆಲವು ವ್ಯಕ್ತಿಗಳು ಇದನ್ನು ಪರಿಚಯಿಸಿದ್ದರು.
ಉಡುಪಿಯಲ್ಲಿ ಕಚೇರಿ ಕೂಡ ತೆರೆಯಲಾಗಿತ್ತು. ಬುದ್ದಿವಂತರು ಎಂದು ಕರೆಸಿಕೊಳ್ಳುವ ಕರಾವಳಿ ಜನರನ್ನೇ ಟಾರ್ಗೆಟ್ ಮಾಡಿ ವ್ಯವಹಾರ ಕುದುರುವಂತೆ ನೋಡಿಕೊಳ್ಳಲಾಯಿತು. ಆರಂಭದಲ್ಲಿ ಕರಾವಳಿಗರು ಸಣ್ಣ ಮೊತ್ತ ಹೂಡಿಕೆ ಮಾಡಿದ್ದರು. ಅದು ನಿಗದಿತ ವೇಳೆ ಗೆ ಡಬಲ್ ಆಗುವ ಮೂಲಕ ನಕಲಿ ಕಂಪನಿ ಜನರಲ್ಲಿ ಭರವಸೆ ಮತ್ತು ಆಸೆ ಮೂಡುವಾಗೆ ನೋಡಿಕೊಂಡಿತ್ತು. ಸಣ್ಣ ಮೊತ್ತ ಡಬಲ್ ಆಗಿರುವುದನ್ನು ಕಂಡದ್ದೇ ತಡ ಕರಾವಳಿ ಜನರು ದೊಡ್ಡ ದೊಡ್ಡ ಮೊತ್ತವನ್ನು ಆನ್ ಲೈನ್ ನಲ್ಲಿ ಡಾಲರ್ ಮೇಲೆ ಹೂಡಿಕೆ ಮಾಡಲು ಶುರು ಮಾಡಿದರು. ಹಣವಂತರು ತಮ್ಮ ಸ್ಟಾಕ್ ಹಣವನ್ನು ದ್ವಿಗುಣ ಮಾಡುವ ಆಸೆಗೆ ಬಿದ್ದರೆ, ಕೈಯಲ್ಲಿ ಹಣ ಇಲ್ಲದವರು ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು, ಇನ್ನೂ ಕೆಲವರು ಲೋನ್ ಮಾಡಿ ಹೂಡಿಕೆ ಮಾಡಿದರು. ಸಾಧಾರಣವಾಗಿ ವೃತ್ತಿಪರರು, ಸರಕಾರಿ ಸಿಬ್ಬಂದಿಗಳು, ಖಾಸಗಿ ಕಂಪನಿಗಳಲ್ಲಿ ದುಡಿಯುವವರು, ಕಾರ್ಮಿಕರು ಇದರ ಮೇಲೆ ಹೂಡಿಕೆ ಮಾಡಿದ್ದಾರೆ. ಹೂಡಿಕೆ ಜಾಸ್ತಿಯಾಗುತ್ತಿದ್ದಂತೆ ದಿನಗಳ ಜತೆಗೆ ಕೆಲವು ತಾಸುಗಳಲ್ಲಿ ಹಣ ಡಬಲ್ ಆಗುವ ಸ್ಕೀಮ್ ಗಳನ್ನು ಪರಿಚಯಿಸಲಾಯಿತು. ಉಭಯ ಜಿಲ್ಲೆಯ ಜನರು ಸಿಕ್ಕಾಪಟ್ಟೆ ಹೂಡಿಕೆ ಮಾಡಿದರು. ಕೆಲವು ಕುಟುಂಬಗಳು 20 ಲಕ್ಷದವರೆಗೆ ಹೂಡಿಕೆ ಮಾಡಿದ ಉದಾಹರಣೆ ಇದೆ. ಆದರೆ ಕ್ರಿಸ್ಮಸ್ ಮುನ್ನ ದಿನ ನಕಲಿ ಕಂಪನಿಯ ಅಸಲಿ ಮುಖ ಬಯಲಾಯಿತು. ಬರೇ ಎರಡು ಜಿಲ್ಲೆಗಳಿಂದ ಬಹುಕೋಟಿ ರೂ.ಗಳನ್ನು ಸಾರ್ವಜನಿಕರಿಗೆ ವಂಚಿಸಲಾಯಿತು.
ಗೆಟ್ಸೋ ಕಂಪನಿಯ ಮೆನೇಜರ್ ಆಗಿ ಅಮೆರಿಕದ ಮಹಿಳೆ ಎಂದು ಹೇಳಿಕೊಂಡ ಅಲೆಗ್ಸಾಂಡ್ರಾ ವರ್ಸ್ಕಾಯ ಎಂಬವರು ಸಾಮಾಜಿಕ ಜಾಲತಾಣದ ಮೂಲಕ ಗ್ರಾಹಕರಿಗೆ ತನ್ನ ಪರಿಚಯ ಮಾಡಿಸಿಕೊಂಡಿದ್ದರು. ಮಹಿಳೆಯ ಮೂಲಕ ಸ್ಥಳೀಯ ಕೆಲವು ವ್ಯಕ್ತಿಗಳು ದ.ಕ. ಮತ್ತು ಉಡುಪಿ ಜಿಲ್ಲೆಗೆ ಆನ್ ಲೈನ್ ಟ್ರೇಡಿಂಗ್ ಪರಿಚಯಿಸಿದ್ದರು.
ಅಲೆಗ್ಸಾಂಡ್ರಾ ವಾಟ್ಸಾಪ್ , ಟೆಲಿಗ್ರಾಂನಲ್ಲಿ ಗೆಟ್ಸೋ ಗ್ರೂಪ್ ಗಳನ್ನು ಕೂಡ ತೆರೆದಿದ್ದರು. ವಾಟ್ಸಾಪ್ ನಲ್ಲಿ ಮೀಟಿಂಗ್ ನಡೆಸುತ್ತಿದ್ದರು. ಆದರೆ ಮೀಟಿಂಗ್ ವೀಡಿಯೊ ಕಾನ್ಪರೆನ್ಸ್ ಮೂಲಕ ಅಲ್ಲ. ಬದಲಿಗೆ ಚಾಟಿಂಗ್ ಮೀಟಿಂಗ್. ಅಲೆಗ್ಸಾಂಡ್ರಾ ಎಲ್ಲೂ ತನ್ನ ಮೂತಿಯನ್ನು ಲೈವ್ ಆಗಿ ಪ್ರದರ್ಶಿಸಲಿಲ್ಲ. ಹಾಗೆ ಆಡಿಯೋ ಕೂಡ ಹಾಕಿಲ್ಲ. ಆಗ್ಲೇ ಹೂಡಿಕೆದಾರರು ಅರ್ಥ ಮಾಡಿಕೊಳ್ಳಬೇಕಿತ್ತು.
ವಾಸ್ತವದಲ್ಲಿ ಅಲೆಗ್ಸಾಂಡ್ರಾ ಅಮೆರಿಕದ ನಿವಾಸಿಯಲ್ಲ ಮತ್ತು ಆಕೆ ಮಹಿಳೆಯೂ ಅಲ್ಲ ಎಂದು ಹೇಳಲಾಗಿದೆ. ಇದೊಂದು ನೈಝೀರಿಯಾ ಫ್ರಾಡ್ ತರಹದ ಗ್ಯಾಂಗ್ ಎಂದು ಶಂಕಿಸಲಾಗಿದೆ. ಭಾರತದಲ್ಲೇ ಇದ್ದುಕೊಂಡು ನಕಲಿ ಹೆಸರಿನಲ್ಲಿ, ನಕಲಿ ಫೋಟೋ ಹಾಕಿ ಸಾರ್ವಜನಿಕರನ್ನು ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. ವಂಚನೆಗೊಳಗಾದ ಬುದ್ದಿವಂತ ಕರಾವಳಿಗರು ಮರ್ಯಾದೆಗೆ ಅಂಜಿ ಒಳಗೊಳಗೆ ಕೊತ ಕೊತ ಕುದಿಯುತ್ತಿದ್ದಾರೆ ಅಷ್ಟೇ.
(ಗೆಟ್ಸೋ ಬಹುಕೋಟಿ ವಂಚನೆಯ ಇನ್ನಷ್ಟು ವರದಿ ಶೀಘ್ರ ನಿರೀಕ್ಷಿಸಿ…)