ಇತ್ತೀಚಿನ ಸುದ್ದಿ
ಸ್ಮಶಾನ ಹೊರತುಪಡಿಸಿ ಬೇರೆಡೆ ಅನುಮತಿ ಇಲ್ಲದೇ ಅಂತ್ಯಕ್ರಿಯೆ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್
27/11/2025, 12:20
ಬೆಂಗಳೂರು(reporterkarnataka.com): ಮೃತದೇಹಗಳನ್ನು ಗೊತ್ತುಪಡಿಸಿದ ಸ್ಮಶಾನ ಹೊರತುಪಡಿಸಿ ಬೇರೆಡೆ ಅನುಮತಿ ಇಲ್ಲದೆ ಸಮಾಧಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಸೊಸೆ ಶವವನ್ನು ಮನೆ ಬಳಿ ಹೂಳಲಾಗಿದ್ದು, ಅದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿದೆ. ಎಲ್ಲೆಂದರಲ್ಲಿ ಸಮಾಧಿ ಮಾಡುವುದು ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ತಮ್ಮ ಒಪ್ಪಿಗೆಯಿಲ್ಲದೆ ಸೊಸೆಯ ಶವವನ್ನು ಮನೆ ಬಳಿ ಹೂಳಲಾಗಿದ್ದು, ಸಮಾಧಿ ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಲು ಕೋರಿ ಬಂಗಾರಪೇಟೆಯ ತುರಾಂಡಹಳ್ಳಿಯ ಎಚ್.ಗೋಪಾಲಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ, ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಮೃತದೇಹಗಳನ್ನು ಎಲ್ಲೆಂದರಲ್ಲಿ ಸಮಾಧಿ ಮಾಡುವುದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಅಲ್ಲದೆ, ಈ ಪ್ರಕರಣ ಒಂದು ಶವ ಸಮಾಧಿ ಮಾಡುವುದು ಮಾತ್ರವಲ್ಲ. ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡಿದಲ್ಲಿಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ, ಎಲ್ಲೆಂದರಲ್ಲಿ ಸಮಾಧಿ ಮಾಡುವುದಕ್ಕೆ ಅವಕಾಶ ಸಿಕ್ಕಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ಸಮಾಧಿ ಸ್ಥಳ ಹೊರತುಪಡಿಸಿ ಬೇರೆ ಸ್ಥಳದಲ್ಲಿ ಶವ ಹೂಳಲು ಅವಕಾಶವಿಲ್ಲ. ಅದಕ್ಕೆ ಅವಕಾಶ ನೀಡಿದಲ್ಲಿ ಮುಂದೊಂದು ದಿನ ಕೊಲೆ ಪ್ರಕರಣಗಳಲ್ಲಿಯೂ ಮುಂದುವರೆಯುವ ಸಾಧ್ಯತೆಯಿರಲಿದೆ. ಜತೆಗೆ, ಇದರಿಂದ ಎದುರಾಗುವ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹ ಕೃತ್ಯಗಳಿಗೆ ಅನುಮತಿ ನೀಡಿದಲ್ಲಿ ಬೇರೊಬ್ಬ ವ್ಯಕ್ತಿ ಮತ್ತೊಬ್ಬರ ಆಸ್ತಿಯಲ್ಲಿ ಶವ ಹೂಳುವುದಕ್ಕೆ ಕಾರಣವಾಗಲಿದೆ. ಆದ್ದರಿಂದ ಗೊತ್ತುಪಡಿಸಿದ ಸ್ಮಶಾನದಲ್ಲಿ ಮಾತ್ರ ದಹನ ಮಾಡಬೇಕು. ಅದನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಯಾರನ್ನೂ ಅಂತ್ಯಕ್ರಿಯೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.












