ಇತ್ತೀಚಿನ ಸುದ್ದಿ
ಬ್ರೋಕರ್ ಮೋಸದಾಟ: ಕಾಂಬೋಡಿಯಲ್ಲಿ ಮಾಲೀಕನಿಂದ ಬಂಧನಕ್ಕೀಡಾದ ಕಾಫಿನಾಡು ಯುವಕ; 13 ಲಕ್ಷ ಬೇಡಿಕೆ; ಕಣ್ಣೀರಿಡುತ್ತಿರುವ ಹೆತ್ತವರು
01/11/2023, 14:35
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬ್ರೋಕರ್ ಗಳ ಮೋಸಕ್ಕೆ ಬಲಿಯಾಗಿ ಕಾಂಬೋಡಿಯಾ ಸೇರಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಯುವಕನೊಬ್ಬನನ್ನು ಮಾಲೀಕ ಬಂಧನದಲ್ಲಿಟ್ಟ ಘಟನೆ ಬೆಳಕಿಗೆ ಬಂದಿದೆ.
ಎನ್.ಆರ್.ಪುರ ತಾಲೂಕಿನ
ಬಾಳೆಹೊನ್ನೂರಿನ ಮಹಲ್ಗೋಡು ಗ್ರಾಮದ ಅಶೋಕ್ ಕಾಂಬೋಡಿಯಾದಲ್ಲಿ ಬಂಧನಕ್ಕೀಡಾದ ಯುವಕ ಎಂದು ಗುರುತಿಸಲಾಗಿದೆ.
ಬ್ರೋಕರ್ ಗಳ ಮೋಸಕ್ಕೆ ಬಲಿಯಾಗಿ ವಿದೇಶದಲ್ಲಿ ಕೆಲಸದ ಆಸೆಗೆ ತೆರಳಿದ್ದ ಯುವಕನನ್ನು
ಮಾಲೀಕ ಬಂಧನದಲ್ಲಿಟ್ಟಿದ್ದಾನೆ. ನಾನು ಇಲ್ಲಿ ಕೆಲಸ ಮಾಡಲ್ಲ, ಭಾರತಕ್ಕೆ ವಾಪಸ್ ಹೋಗುತ್ತೇನೆ ಎಂದಾಗ ಮಾಲೀಕ ಯುವಕನಿಗೆ ಈ ವಿಚಿತ್ರ ಶಿಕ್ಷೆ ನೀಡಿದ್ದಾನೆ. ಯುವಕನನ್ನು ಕತ್ತಲು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಕೆಲಸ ಬಿಟ್ಟು ವಾಪಾಸ್ ಊರಿಗೆ ತೆರಳಬೇಕಾದರೆ 13 ಲಕ್ಷ ಹಣ ಬೇಡಿಕೆ ಇಟ್ಟಿದ್ದಾನೆ.
ಸುರೇಶ್ ಮತ್ತು ಪ್ರೇಮಾ ದಂಪತಿಯ ಮೊದಲ ಪುತ್ರನಾದ ಅಶೋಕ್ ಇದೀಗ ವಿದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾನೆ. ಮಗನ್ನು ನೆನೆದು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಯುವಕನ ಪೋಷಕರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.














