ಇತ್ತೀಚಿನ ಸುದ್ದಿ
ಮಾಜಿ ಡಿವೈಎಸ್ಪಿ ದಿವಂಗತ ಗಣಪತಿ ಆರೋಪ: ಕೇಶವನಾರಾಯಣ ಆಯೋಗ ವರದಿ ತಿರಸ್ಕಾರ
25/09/2025, 20:13

ಬೆಂಗಳೂರು(reporterkarnataka.com): ಹಿಂದಿನ ಗೃಹಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಐ.ಪಿ.ಎಸ್.ಎ.ಎಮ್. ಪ್ರಸಾದ ಹಾಗೂ ಐ.ಪಿ.ಎಸ್ ಪ್ರಣವ ಮೊಹಾಂತಿ ಅವರ ವಿರುದ್ಧ ದಿ.ಗಣಪತಿಯವರು ಸಂದರ್ಶನದಲ್ಲಿ ಆರೋಪಿಸಿರುವುದನ್ನು ಕೇಶವನಾರಾಯಣ ಆಯೋಗದ ವರದಿ ತಳ್ಳಿಹಾಕಿದೆ.
ಎಮ್.ಕೆ.ಗಣಪತಿಯವರ ಆತ್ಮಹತ್ಯೆಗೆ ಇವರುಗಳು ಕಾರಣವಲ್ಲವೆಂಬ ಅಭಿಪ್ರಾಯವನ್ನು ಕೇಶವನಾರಾಯಣ ಆಯೋಗವು ಸ್ಪಷ್ಟವಾಗಿ ಹೇಳಿದ್ದು, ತನಿಖಾ ಪ್ರಕರಣದಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿರುವುದರಿಂದ ಕೆಲವು ಅಧಿಕಾರಿ/ಸಿಬ್ಬಂದಿಯವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಡಿರುವ ಶಿಫಾರಸ್ಸನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರಿಗೆ ಸಚಿವ ಸಂಪುಟದ ನಿರ್ಣಯಗಳ ವಿವರಗಳನ್ನು ನೀಡಿದ ಅವರು ಶ್ರೀ ಎಂ.ಕೆ ಶ್ರೀವಾಸ್ತವ್, ಐಪಿಎಸ್ ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಇವರು ಸರ್ಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ತನಿಖಾ ಕ್ರಮಗಳ ಬಗ್ಗೆ ವಿಚಾರಣಾ ಆಯೋಗವು ಮಾಡಿರುವ ಆಕ್ಷೇಪಣೆಗಳನ್ನು ಸಿ.ಬಿ.ಐ ಸಲ್ಲಿಸಿರುವ ವರದಿಯನ್ನು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ಮಾನ್ಯ ಮಾಡಿರುವುದರಿಂದ ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಎಸ್.ಎಲ್.ಪಿ ಯಲ್ಲಿ ಸಿ.ಬಿ.ಐ ಪ್ರಕರಣವನ್ನು ಮುಕ್ತಾಯ ಮಾಡಿರುವುದನ್ನು ಎತ್ತಿ ಹಿಡಿದಿರುವುದರಿಂದ, ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆಯ ಶಿಫಾರಸ್ಸನ್ನು ಒಪ್ಪುವ ಅಗತ್ಯವಿಲ್ಲವೆಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿರುತ್ತದೆ.
ಕೆ.ಎನ್. ಕೇಶವನಾರಾಯಣ ಅವರು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಇವರ ವಿಚಾರಣಾ ವರದಿಯನ್ನು ಸಚಿವ ಸಂಪುಟವು ಭಾಗಶ: ಒಪ್ಪಿ, ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯ ಶಿಫಾರಸ್ಸನು ತಿರಸ್ಕರಿಸಿದೆ ಎಂದು ತಿಳಿಸಿದರು.