ಇತ್ತೀಚಿನ ಸುದ್ದಿ
ಕಾರಿನಲ್ಲೇ ಸುಟ್ಟು ಹೋದ ಸ್ಥಿತಿಯಲ್ಲಿ ಧಾರವಾಡ ಮಾಜಿ ಶಾಸಕನ ಪುತ್ರನ ಶವ ಪತ್ತೆ: ಕೊಲೆ ಶಂಕೆ
24/03/2026, 21:09
ಧಾರವಾಡ(reporterkarnataka.com): ಧಾರವಾಡ ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವವು ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಒಳಗಿದ್ದ ರಾಜು ಬೋಳಶೆಟ್ಟಿ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಗುರುತು ಸಿಗದಷ್ಟು ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.












