ಇತ್ತೀಚಿನ ಸುದ್ದಿ
ಬ್ಯಾಂಕ್ ಗಳ ಕಾರ್ಯ ತೃಪ್ತಿದಾಯಕವಾಗಿಲ್ಲದಿದ್ದರೆ ರಿಸರ್ವ್ ಬ್ಯಾಂಕ್ ಗೆ ಪತ್ರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ
06/01/2026, 17:16
ಗದಗ(reporterkarnataka.com): ಬ್ಯಾಂಕುಗಳು ಕೇವಲ ಹಣಕಾಸು ಸಂಸ್ಥೆಗಳಲ್ಲ, ಸಮಾಜದ ಆರ್ಥಿಕ ಚಲನೆಗೆ ದಿಕ್ಕು ತೋರಿಸುವ ಪ್ರಮುಖ ಸಂಸ್ಥೆಗಳಾಗಿವೆ. ಬ್ಯಾಂಕುಗಳಲ್ಲಿ ಇರುವ ಹಣ ಸಂಪೂರ್ಣವಾಗಿ ಸಾರ್ವಜನಿಕರದ್ದೇ ಆಗಿದ್ದು, ಆ ಹಣವನ್ನು ಸ್ಥಳೀಯವಾಗಿ ಸದ್ಬಳಕೆ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಹಕಾರ ನೀಡಬೇಕು. ಬ್ಯಾಂಕ್ ಅಧಿಕಾರಿಗಳ ಕಾರ್ಯ ತೃಪ್ತಿಕರವಾಗಿರದಿದ್ದರೆ ಸಂಬಂಧಪಟ್ಟ ಬ್ಯಾಂಕ್ ಮತ್ತು ರಿಸರ್ವ್ ಬ್ಯಾಂಕ್ ಗೆ ಪತ್ರ ಬರೆಯಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ ಸಭೆ ಜರುಗಿತು. ಸಭೆಯಲ್ಲಿ ವಿವಿಧ ಬ್ಯಾಂಕುಗಳ ಸಾಲ ವಿತರಣೆ, ಹಣಕಾಸು ಒಳಗೊಳ್ಳಿಕೆ, ಸರ್ಕಾರಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕು. ಸರ್ಕಾರದ ಜನಪರ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ತಲುಪುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು ಎಂದರು.
“ಬ್ಯಾಂಕುಗಳು ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಬೇಕು. ಲಾಭವೇ ಮುಖ್ಯ ಎಂಬ ಮನೋಭಾವವನ್ನು ಬಿಟ್ಟು, ಬ್ಯಾಂಕುಗಳು ಸ್ಥಾಪನೆಯಾದ ಮೂಲ ಉದ್ದೇಶವನ್ನು ಮೊದಲು ಈಡೇರಿಸಬೇಕು” ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಸಂಗ್ರಹವಾಗುವ ಬ್ಯಾಂಕ್ ಹಣವನ್ನು ಇದೇ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಇದರಿಂದ ಉದ್ಯೋಗ ಸೃಷ್ಟಿ, ವ್ಯಾಪಾರ ವೃದ್ಧಿ ಹಾಗೂ ಗ್ರಾಮೀಣ ಆರ್ಥಿಕ ಬಲವರ್ಧನೆ ಸಾಧ್ಯವಾಗುತ್ತದೆ. ಈ ಮೂಲಕ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು ಎಂದು ಸಂಸದರು ಅಭಿಪ್ರಾಯಪಟ್ಟರು.
*ಬೃಹತ್ ಲೋನ್ ಮೇಳಗಳಿಗೆ ಸೂಚನೆ:*
ರೈತರು, ಮಹಿಳೆಯರು, ಯುವ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ಸುಲಭವಾಗಿ ದೊರಕುವಂತೆ ಬೃಹತ್ ಮಟ್ಟದಲ್ಲಿ ಲೋನ್ ಮೇಳಗಳನ್ನು ಆಯೋಜಿಸಬೇಕು ಎಂದು ಅವರು ಸೂಚಿಸಿದರು. ಸಾಲ ಅರ್ಜಿಗಳ ಪ್ರಕ್ರಿಯೆ ಸರಳವಾಗಿರಬೇಕು. ಅರ್ಹ ಫಲಾನುಭವಿಗಳಿಗೆ ಯಾವುದೇ ಅನಗತ್ಯ ಅಡೆತಡೆ ಆಗಬಾರದು ಎಂದು ಹೇಳಿದರು.
*ಬಡತನ ನಿರ್ಮೂಲನೆಗೆ ಹೌಸಿಂಗ್ ಲೋನ್ ಪರಿಣಾಮಕಾರಿ:*
ಬಡತನ ನಿವಾರಣೆಯಲ್ಲಿ ಹೌಸಿಂಗ್ ಲೋನ್ ಮಹತ್ವದ ಪಾತ್ರ ವಹಿಸುತ್ತದೆ. ಸ್ವಂತ ಮನೆ ಹೊಂದುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಮಟ್ಟ ಸುಧಾರಿಸುತ್ತದೆ. ಈ ಹಿನ್ನೆಲೆಯಲ್ಲಿ ಗೃಹ ಸಾಲ ವಿತರಣೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸದರು ಸಲಹೆ ನೀಡಿದರು.
ಪ್ರಧಾನಮಂತ್ರಿ ಜನಧನ ಯೋಜನೆ, ಮುದ್ರಾ ಸಾಲ, ಸ್ವನಿಧಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಸೇರಿದಂತೆ ಪ್ರಮುಖ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಸಂಸದ ಬೊಮ್ಮಾಯಿ, ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕುಗಳಿಂದ ತಕ್ಷಣದ ಹಾಗೂ ಸುಲಭ ಸಾಲ ಸೌಲಭ್ಯ ಒದಗಿಸುವಂತೆ ಸೂಚಿಸಿದರು.
“ಬ್ಯಾಂಕುಗಳು ಕಚೇರಿಗಳಿಗೆ ಸೀಮಿತವಾಗದೆ ಜನರ ಬಳಿಗೆ ಹೋಗಬೇಕು. ಸಾಲ ಮಂಜೂರಾತಿಯಲ್ಲಿ ವಿಳಂಬವಾಗಬಾರದು. ಅರ್ಹರಿಗೆ ಯಾವುದೇ ಅಡಚಣೆ ಇಲ್ಲದೆ ಸಾಲ ಸೌಲಭ್ಯ ದೊರೆಯಬೇಕು” ಎಂದು ಅವರು ತಿಳಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ.ವಿ. ಮಾತನಾಡಿ ಜಿಲ್ಲೆಯಲ್ಲಿ 31-12-2025 ರ ವರೆಗೆ ಲೀಡ್ ಬ್ಯಾಂಕ್ ನ 183 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 2025 ರವರೆಗೆ ಜಿಲ್ಲೆಯ ಸಾಲ ಠೇವಿ ಅನುಪಾತ 102.18 % ರಷ್ಟಾಗಿರುತ್ತದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ನುಡಿದರು.
ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಸೆಪ್ಟೆಂಬರ್ 2025ರ ಅಂತ್ಯಕ್ಕೆ ಕೃಷಿ ಸೇರಿದಂತೆ ಆದ್ಯತಾ ವಲಯಕ್ಕೆ 278562.77 ಲಕ್ಷ ರೂ ನೀಡಿಕೆಯಾಗಿದೆ. ತಾಲೂಕಾವಾರು ವಿವರ ಇಂತಿದೆ ( ಲಕ್ಷ ರೂ.ಗಳಲ್ಲಿ) ಗದಗ – 112809.89 ; ಗಜೇಂದ್ರಗಡ- 14545.51; ಲಕ್ಷೆö್ಮÃಶ್ವರ- 16352.02; ಮುಂಡರಗಿ-26555.79; ನರಗುಂದ- 34976.61; ರೋಣ- 48135.33 ; ಶಿರಹಟ್ಟಿ – 25187.62; ಲಕ್ಷ ಸಾಲ ನೀಡಿಕೆಯಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಲ ಯೋಜನೆಗಳಾದ ಪ್ರಧಾನಮಂತ್ರಿ ಮುದ್ರಾ ಯೋಜನೆ, ಉದ್ಯೋಗಿನಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ ಅರಸ ಹಿಂದುಳಿದ ಅಭಿವೃದ್ಧಿ ನಿಗಮ, ಕೈಮಗ್ಗ ಮತ್ತು ಜವಳಿ ಇಲಾಖೆಯ, ಜಿ.ಪಂ.ದ ಎನ್.ಆರ್.ಎಲ್, ಎಂ,( ಸ್ವ ಸಹಾಯ ಗುಂಪು) ಪಿಎಂಎವೈ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಪಿಎಂಎಫ್‌ಬಿವೈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ನಬಾರ್ಡದ ಎಜಿಎಂ ಮಯೂರ ಕಾಂಬ್ಳೆ, ಆರ್‌ಬಿಐ ಎಜಿಎಂ, ಸೂರಜ ಎಸ್, ಎಸ್‌ಬಿಐ ದ ರೀಜನಲ್ ಮ್ಯಾನೇಜರ್ ನಾಗಸುಬ್ಬಾರೆಡ್ಡಿ , ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ನ ಅಧಿಕಾರಿಗಳು ಹಾಜರಿದ್ದರು.
*ಬ್ಯಾಂಕುಗಳ ಪ್ರಗತಿ ಪರಿಶೀಲನೆ : ಸಂಸದರ ಸೂಚನೆಗಳು*
# ಸಾಲ ವಿತರಣೆ ವೇಗಗೊಳಿಸಿ : ರೈತರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಾಲ ಮಂಜೂರಾತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು.
# ಸರ್ಕಾರಿ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಲಿ : ಪ್ರಧಾನಮಂತ್ರಿ ಜನಧನ, ಮುದ್ರಾ, ಸ್ವನಿಧಿ, ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪಬೇಕು.
# ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ : ಬ್ಯಾಂಕುಗಳು ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಶಾಖೆಗಳ ಮೂಲಕ ಜನಸಂಪರ್ಕ ಹೆಚ್ಚಿಸಿ ಹಣಕಾಸು ಒಳಗೊಳ್ಳಿಕೆಗೆ ಒತ್ತು ನೀಡಬೇಕು.
# ಸಾಲ ವಿತರಣೆಯಲ್ಲಿ ಸಾಧನೆ ಕಡ್ಡಾಯ : ವಿವಿಧ ರೀತಿಯ ವಾರ್ಷಿಕ ಸಾಲ ಗುರಿಗಳನ್ನು ನಿಗದಿತ ಅವಧಿಯೊಳಗೆ ಸಾಧಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದರು.
# ಅರ್ಜಿ ತಿರಸ್ಕಾರಕ್ಕೆ ಸ್ಪಷ್ಟ ಕಾರಣ : ಸಾಲ ಅರ್ಜಿಗಳನ್ನು ತಿರಸ್ಕರಿಸುವ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸ್ಪಷ್ಟ ಕಾರಣ ತಿಳಿಸಿ ಮರುಅರ್ಜಿಗೆ ಅವಕಾಶ ಕಲ್ಪಿಸಬೇಕು.
# ಸಮನ್ವಯ ಅಗತ್ಯ : ಬ್ಯಾಂಕುಗಳು ಮತ್ತು ಜಿಲ್ಲಾ ಆಡಳಿತದ ನಡುವೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಬೇಕು.
# ನಿರಂತರ ಮೇಲ್ವಿಚಾರಣೆ : ಮುಂದಿನ ಸಭೆಯಲ್ಲಿ ಪ್ರಗತಿ ವರದಿ ಸಲ್ಲಿಸುವಂತೆ ಹಾಗೂ ಕಾರ್ಯಕ್ಷಮತೆ ತೃಪ್ತಿಕರವಾಗದಿದ್ದರೆ ಸಂಬಂಧಿಸಿದ ಬ್ಯಾಂಕುಗಳಿಗೆ ಸೂಚನೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
# “ಕರ್ನಾಟಕ ಬ್ಯಾಂಕ್ ಸೇರಿದಂತೆ ಸಿ.ಡಿ. ರೇಷಿಯೋ ಶೇಕಡಾ 40ಕ್ಕಿಂತ ಕಡಿಮೆಯಿರುವ ಬ್ಯಾಂಕುಗಳ ಕಾರ್ಯವೈಖರಿಯ ಕುರಿತು ಗಂಭೀರವಾಗಿ ಪರಿಗಣಿಸಿ, ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಪತ್ರ ಬರೆಯಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು.”














