ಇತ್ತೀಚಿನ ಸುದ್ದಿ
ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರು ಸಿಸಿಬಿ ತಂಡ 17 ಮಂದಿಗೆ ಮುಖ್ಯಮಂತ್ರಿ ಪದಕ: ಬೆಂಗಳೂರಿನಲ್ಲಿ ಏಪ್ರಿಲ್ 2ರಂದು ಪ್ರದಾನ
31/03/2025, 20:45

ಜಯಾನಂದ ಪೆರಾಜೆ ಮಂಗಳೂರು
info.reporterkarnataka@gmail.com
ಮಂಗಳೂರಿನ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಟಿಕ್ರೈಮ್ ಬ್ರಾಂಚ್ ತಂಡದ 13 ಮಂದಿಯನ್ನು ದಕ್ಷತೆಯ ಕಾರ್ಯನಿರ್ವಹಣೆಗಾಗಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಈ ಬಾರಿಯ ಪದಕ ವಿಜೇತ ತಂಡದಲ್ಲಿ ಬಂಟ್ವಾಳದ ಸುಧೀರ್ ಕುಮಾರ್ ಸೇರಿದಂತೆ ಸಿಸಿಬಿ ವಿಭಾಗದ ಎಎಸ್‌ಐ ರಿತೇಶ್, ಶೀನಪ್ಪ , ಹೆಡ್ ಕಾನ್ಸ್ ಟೇಬಲ್ ಗಳಾದ ಆಂಜನಪ್ಪ, ಭೀಮಪ್ಪ ಉಪ್ಪಾರ, ಪುರುಷೋತ್ತಮ, ದಾವೋದರ ಕೆ, ಸಂತೋಷ್ ಕುಮಾರ್, ವಿಜಯ ಶೆಟ್ಟಿ, ಶ್ರೀಧರ ವಿ, ಪ್ರಕಾಶ್ ಸಪ್ತಗಿಹಳ್ಳಿ ಅಭಿಷೇಕ್ ಎ.ಆರ್ ಅವರನ್ನು ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ.
2022ರಲ್ಲಿ ಸಿಸಿಬಿ ಘಟಕದ ಎಸ್‌ಐ ಸುದೀಪ್, 2023ರಲ್ಲಿ ಶರಣಪ್ಪ ಭಂಡಾರಿ, ಹೆಡ್ ಕಾನ್ಸ್ ಟೇಬಲ್ ನಾಗರಾಜ್ ಮತ್ತು ಎಎಸ್‌ಐ ಮೋಹನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದರೊಂದಿಗೆ, ಮಂಗಳೂರು ಸಿಸಿಬಿ ಘಟಕದಿಂದ ಇಬ್ಬರು ಪಿಎಸ್‌ಐ ಸೇರಿ ಒಟ್ಟು 17 ಮಂದಿ ಮುಖ್ಯಮಂತ್ರಿ ಪದಕ ಬೆಂಗಳೂರಿನಲ್ಲಿ ಎಪ್ರಿಲ್ 2ರಂದು ಪಡೆಯಲಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕೂಡ ಇರಲಿದ್ದು, ಒಟ್ಟು ತಂಡಕ್ಕೆ ನೇತೃತ್ವ ನೀಡಲಿದ್ದಾರೆ.
ಇತ್ತೀಚೆಗೆ ಡ್ರಗ್ಸ್ ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿಯೇ ಡ್ರಗ್ಸ್ ತಂದು ವಿವಿಧ ಕಡೆಗಳಿಗೆ ಪೂರೈಸುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಪ್ರಜೆಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದರು. ಮೂರು ತಿಂಗಳ ಹಿಂದೆ ಮಂಗಳೂರಿನಲ್ಲಿ ಸಿಕ್ಕಿಬಿದ್ದ ನೈಜೀರಿಯನ್ ಪ್ರಜೆಯೊಬ್ಬನಿಂದ ಸಿಕ್ಕಿದ್ದ ಸುಳಿವು ಆಧರಿಸಿ ಮಂಗಳೂರು ಪೊಲೀಸರು ದೆಹಲಿ ಮತ್ತು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಡ್ರಗ್ಸ್ ರೂವಾರಿಗಳನ್ನು ಪತ್ತೆಹಚ್ಚಿದ್ದರು. ರಾಜ್ಯದ ಮಟ್ಟಿಗೆ ಅತಿ ದೊಡ್ಡ ಡ್ರಗ್ಸ್ ಬೇಟೆಯಾಗಿತ್ತು.
ಇದರ ನಡುವಲ್ಲೇ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಕೋಟೆಕಾರು ದರೋಡೆ ಪ್ರಕರಣವನ್ನೂ ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೆಲವೇ ದಿನಗಳಲ್ಲಿ ಭೇದಿಸಿದ್ದರು.
ಬೀದರ್ ಮತ್ತು ಮಂಗಳೂರಿನಲ್ಲಿ ಒಂದೇ ದಿನ ಅಂತರಕ್ಕೆ ದರೋಡೆ ಪ್ರಕರಣ ನಡೆದಿದ್ದರೂ, ಮಂಗಳೂರಿನ ದರೋಡೆ ಕೇಸನ್ನು ಅಷ್ಟೇ ವೇಗದಲ್ಲಿ ಭೇದಿಸಿತ್ತು.ಎರಡೂ ಪ್ರಕರಣಗಳಲ್ಲಿಯೂ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತು ಸಿಸಿಬಿ ಘಟಕದ ಎಸಿಪಿ ಮನೋಜ್ ನಾಯ್, ಎಸಿಪಿ ಧನ್ಯಾ ನಾಯಕ್ ಮಾರ್ಗದರ್ಶನದಿಂದ ಪ್ರಕರಣ ಭೇದಿಸಲು ಸಾಧ್ಯವಾಗಿತ್ತು ಎಂದು ಸಿಬ್ಬಂದಿ ನೆನೆಯುತ್ತಾರೆ.
ಇತ್ತೀಚಿನ ದಿನಗಳಲ್ಲಿ ಪೊಲೀಸರ ಗೌರವ ಹೆಚ್ಚಿಸುವ ಕೆಲಸವನ್ನು ಸಿಸಿಬಿ ತಂಡ ಮಾಡಿರುವುದು ಹೊಸ ಬೆಳವಣಿಗೆಯಾಗಿದೆ. ಸಿಸಿಬಿ ನಿದ್ದೆ, ಕುಟುಂಬದ ಸಖ್ಯ ಬಿಟ್ಟು ಕೇಸಿನ ಹಿಂದೆ ಬಿದ್ದು ಮಾಡಿರುವ ಕೆಲಸಕ್ಕಾಗಿ ರಾಜ್ಯ ಸರ್ಕಾರವೂ ಬೆನ್ನು ತಟ್ಟುವ ಕೆಲಸ ಮಾಡಿದೆ. ಪೊಲೀಸ್ ಕಮಿಷನರ್ ಅವರ ನೇರ ಹಿಡಿತದಲ್ಲಿರುವ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಸೂಕ್ತ ಮಾರ್ಗದರ್ಶನ ಸಿಕ್ಕಿದರೆ ಸಾಧ್ಯವಾಗದ್ದನ್ನೂ ಸಾಧಿಸಬಹುದು ಎನ್ನುವುದನ್ನು ಮಾಡಿ ತೋರಿಸಿಕೊಟ್ಟಿದ್ದಾರೆ.