ಇತ್ತೀಚಿನ ಸುದ್ದಿ
European Union | ಆರ್ಥಿಕ ಪ್ರಗತಿಯ ಭಾರತದತ್ತ ಯುರೋಪಿಯನ್ ರಾಷ್ಟ್ರಗಳ ಹೆಜ್ಜೆ: ಆಯುಕ್ತರ ತಂಡ ತಿಂಗಳಾಂತ್ಯಕ್ಕೆ ಭೇಟಿ
21/02/2025, 21:37

•ಫೆಬ್ರವರಿ ತಿಂಗಳಾಂತ್ಯಕ್ಕೆ ಯುರೋಪಿಯನ್ ಯೂನಿಯನ್ ಆಯುಕ್ತರ ತಂಡ ಭಾರತ ಭೇಟಿ
* 27 ರಾಷ್ಟ್ರಗಳ ಯುರೋಪಿಯನ್ ಆಯುಕ್ತರು ಇದೇ ಮೊದಲ ಬಾರಿ ಭಾರತಕ್ಕೆ ಅನಿರೀಕ್ಷಿತ ಆಗಮನ
ನವದೆಹಲಿ(reporterkarnataka.com): ಆರ್ಥಿಕತೆಯಲ್ಲಿ ಜಗತ್ತಿಗೆ ಸ್ಫೂರ್ತಿಯಂತೆ ತೋರುವ ಭಾರತದತ್ತ ಈಗ ಯುರೋಪಿಯನ್ ರಾಷ್ಟ್ರಗಳೂ ಹೆಜ್ಜೆ ಹಾಕುತ್ತಿವೆ. ಇದೇ ಫೆಬ್ರವರಿ ಅಂತ್ಯದ ವೇಳೆಗೆ 27 ಯುರೋಪಿಯನ್ ಯೂನಿಯನ್ ಆಯುಕ್ತರ ತಂಡ ಭಾರತಕ್ಕೆ ಭೇಟಿ ನೀಡಲಿದೆ.
ಕೇಂದ್ರ ಸರ್ಕಾರದ ಅಧಿಕೃತ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆಗೆ ಮಾರು ಹೋಗಿರುವ ಯುರೋಪಿಯನ್ ರಾಷ್ಟ್ರಗಳು ಒಟ್ಟಾಗಿ ಇದೇ ಮೊದಲ ಬಾರಿಗೆ ಭಾರತ ಭೇಟಿ ಕಾರ್ಯಕ್ರಮ ಹಾಕಿಕೊಂಡಿವೆ.
ವಿಶ್ವದ ಅನೇಕ ರಾಷ್ಟ್ರಗಳು ಇಂದು ತೀರಾ ಆರ್ಥಿಕ ಹಿಂಜರಿತ ಕಾಣುತ್ತಿವೆ. ನಿಶ್ಚಲವಾದ ಯೂರೋ ಪ್ರದೇಶಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆ ಪ್ರತಿ ವರ್ಷ ಶೇ.5.4ರಷ್ಟು ವೃದ್ಧಿಸುತ್ತಿದೆ. ಇದನ್ನು ಮನಗಂಡಿರುವ 27 ಯುರೋಪಿಯನ್ ಯೂನಿಯನ್ ಆಯುಕ್ತರ ತಂಡವು ಭಾರತಕ್ಕೆ ಅನಿರೀಕ್ಷಿತ ಭೇಟಿ ಹಮ್ಮಿಕೊಂಡಿದೆ.
ಆರ್ಥಿಕತೆಯಲ್ಲಿ ಭಾರತ ವರ್ಷದಿಂದ ವರ್ಷಕ್ಕೆ ಬೆಳೆವಣಿಗೆ ಹೊಂದುತ್ತಿದ್ದು, ಯುರೋಪಿಯನ್ ರಾಷ್ಟ್ರಗಳಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿ ಗೋಚರಿಸಿದೆ. ಹೀಗಾಗಿ 27 ಯುರೋಪಿಯನ್ ಯೂನಿಯನ್ ಗಳ ಆಯುಕ್ತರು ಒಟ್ಟಾಗಿ ಇದೇ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ನಿಶ್ಚಲವಾದ ಯುರೋಪ್ ಪ್ರದೇಶಕ್ಕೆ ಹೋಲಿಸಿದರೆ ಭಾರತ ಆರ್ಥಿಕತೆಯಲ್ಲಿ ಹೆಜ್ಜೆ ಹೆಜ್ಜೆಗೂ ಪ್ರಗತಿ ಕಾಣುತ್ತಿದೆ. ಭಾರತದ ಈ ಕ್ರಿಯಾತ್ಮಕ ಬೆಳವಣಿಗೆ ಅಧ್ಯಯನದಿಂದ ಯುರೋಪ್ ರಾಷ್ಟ್ರಗಳ ಆರ್ಥಿಕ ಚೇತರಿಕೆಗೆ ಮದ್ದು ಗೋಚರಿಸಬಹುದು ಎಂಬ ಇಂಗಿತ ಈ 27 EU ಗಳದ್ದಾಗಿದೆ.
2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ. ಕಳೆದ ದಶಕದಲ್ಲಿ ಭಾರತ ವಾರ್ಷಿಕ ಸರಾಸರಿ ಶೇ.7ರ ದರದಲ್ಲಿ ಬೆಳೆದಿದೆ. ಇದು ಭಾರತೀಯರ ಜೀವನ ಮಟ್ಟ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತಿದ್ದು, ಯುರೋಪಿಯನ್ ರಾಷ್ಟ್ರಗಳ ಗಮನ ಸೆಳೆಯುತ್ತಿದೆ.
ಭಾರತ 2017ರಲ್ಲಿ ಪರಿಚಯಿಸಿದ ಸರಕು ಮತ್ತು ಸೇವಾ ತೆರಿಗೆಯು ಆಂತರಿಕವಾಗಿ ಇದ್ದಂಥ ಆರ್ಥಿಕ ಮಿತಿ, ಗಡಿಗಳನ್ನು ತೆಗೆದುಹಾಕುವ ಮೂಲಕ ಒಂದೇ ಮಾರುಕಟ್ಟೆಯನ್ನು ಸೃಷ್ಟಿಸಿತು. ಭಾರತದ ಈ ಮಾದರಿಯನ್ನು ಅಳವಡಿಸಿಕೊಳ್ಳಲು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು ಶ್ರಮಿಸುತ್ತಿವೆ.
ಭಾರತದಲ್ಲಿ ನಾಗರಿಕರ ಗುರುತನ್ನು ಅವರವರ ಫೋನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಸಂಪರ್ಕಿಸುವ “ಇಂಡಿಯಾ ಸ್ಟ್ಯಾಕ್” ನಂತಹ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಯುರೋಪಿಯನ್ ಆಯುಕ್ತರು ಪ್ರಮುಖವಾಗಿ ಗಮನಿಸುತ್ತಾರೆ.
ಭಾರತದ 28 ರಾಜ್ಯಗಳ ಸುಸಂಘಟಿತ ಆಡಳಿತವು ಈ ಯುರೋಪಿಯನ್ ಯೂನಿಯನ್ ಆಯುಕ್ತರನ್ನು ಪ್ರಮುಖವಾಗಿ ಸೆಳೆದಿದೆ. ಯುರೋಪಿಯನ್ ರಾಷ್ಟ್ರಗಳಿಗಿಂತ ಹೆಚ್ಚೇ ರಾಜ್ಯಗಳನ್ನು ಒಳಗೊಂಡಿದ್ದರೂ ಭಾರತದ “ವಿವಿಧತೆಯಲ್ಲಿ ಏಕತೆ” ಧ್ಯೇಯ ಮತ್ತು ಪರಿಣಾಮಕಾರಿ ಆಡಳಿತ ವ್ಯವಸ್ಥೆ ಯುರೋಪಿಯನ್ ಯೂನಿಯನ್ ಆಯುಕ್ತರ ಗಮನ ಸೆಳೆದಿದೆ.
ಯುರೋಪಿಯನ್ 27 ರಾಷ್ಟ್ರಗಳ ಒಕ್ಕೂಟದ್ದು ವಿಚಿತ್ರ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ. ಹಾಗಾಗಿ ಯುರೋಪಿಯನ್ ನಾಗರಿಕರು ಸಾಮಾನ್ಯವಾಗಿ ಯುರೋಪಿಯನ್ ಯೂನಿಯನ್ ಹೆಚ್ಚು ಬಾಂಧವ್ಯ ಹೊಂದಿರುವುದಿಲ್ಲ. ಅವರು ತಮ್ಮ ಪ್ರತ್ಯೇಕ ದೇಶಗಳಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಈ ಅನಿರೀಕ್ಷಿತ ಭಾರತ ಭೇಟಿಯಿಂದ EU ಆಯುಕ್ತರು ಭಾರತದ ಏಕತೆ ಮತ್ತು ಬೆಳವಣಿಗೆ ವಿಧಾನದಲ್ಲಿ ಅಡಕವಾಗಿರುವ ಅಮೂಲ್ಯವಾದ ಅಂಶಗಳನ್ನು ಕಂಡುಕೊಳ್ಳಲಿದ್ದಾರೆ.