ಇತ್ತೀಚಿನ ಸುದ್ದಿ
ಈಶ್ವರಪ್ಪಗೆ ಮತ್ತೆ ಸಂಕಷ್ಟ?: ಸಂತೋಷ್ ಸಾವಿನ ಪ್ರಕರಣದ ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಗೆ ತಕರಾರು ಅರ್ಜಿ
24/08/2022, 00:08
ಬೆಂಗಳೂರು(reporterkarnataka.com): ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿರುವುದನ್ನು ಪ್ರಶ್ನಿಸಿ ಸಂತೋಷ್ ಕುಟುಂಬಸ್ಥರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಉಡುಪಿ ಪೊಲೀಸರು ನಡೆಸಿದ ತನಿಖೆ ನ್ಯಾಯಯುತವಾಗಿಲ್ಲ. ಪೂರ್ವಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದಾರೆ. ಪಾರದರ್ಶಕ ತನಿಖೆಗಾಗಿ ಸಿಬಿಐಗೆ ಪ್ರಕರಣವನ್ನು ಒಪ್ಪಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಮೃತ ಸಂತೋಷ್ ಸಹೋದರ ಪ್ರಶಾಂತ್ ಅವರು ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಏನು ಪ್ರಕರಣ?: ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ 4 ಕೋಟಿ ವೆಚ್ಚದ ಕಾಮಗಾರಿ ಬಿಲ್ ಮಂಜೂರು ಮಾಡಲು ಈಶ್ವರಪ್ಪ 40 ಪರ್ಸೆಂಟ್ ಕಮಿಷನ್‍ಗೆ ಒತ್ತಾಯಿಸಿದ್ದರು ಎಂದು ಆರೋಪಿಸಿ ಎ.11ರಂದು
ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತ ಸಂತೋಷ್ ಪಾಟೀಲ ಸಂಬಂಧಿಗಳು ನೀಡಿದ ದೂರಿನಂತೆ ಸೆಕ್ಷನ್ 306, 334 ಅಡಿ ಈಶ್ವರಪ್ಪ (ಎ 1), ಬಸವರಾಜ್ (ಎ 2), ರಮೇಶ್ (ಎ 3) ವಿರುದ್ಧ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಹಲವರ ಕೈವಾಡವಿದೆ. ಉಡುಪಿ ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸದೆ ಹಾದಿ ತಪ್ಪಿಸಿದ್ದಾರೆ. ತನಿಖೆ ವೇಳೆ ಹಲವು ರೀತಿಯ ಪ್ರಭಾವ ಬೀರಲಾಗಿದೆ. ಹೀಗಾಗಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದು ಮೃತ ಸಂತೋಷ್ ಸಹೋದರ ಪ್ರಶಾಂತ್ ಅವರು ತಿಳಿಸಿದ್ದಾರೆ.