ಇತ್ತೀಚಿನ ಸುದ್ದಿ
ಎಂಚಿನ ಅವಸ್ಥೆ ಮಾರ್ರೆ..!!? ಎಷ್ಟು ಸಲ ಓದುವುದು, ಎಷ್ಟು ಅಂತ ಕಾಯುವುದು ಒಂದು ಅರ್ಥ ಆಗಲ್ಲ : ವಿವಿ ವಿದ್ಯಾರ್ಥಿಗಳ ಮನದ ಮಾತು
06/08/2021, 10:26
Reporterkarnataka.com
ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಏನಂದುಕೊಂಡಿದೆ ಎಂದು ಅರ್ಥ ಆಗ್ತ ಇಲ್ಲ. ಬಸ್ ಸ್ಟ್ರೈಕ್ ಅಂತ ಮುಂದೂಡಿ ಕೊರೊನಾ ಎರಡನೇ ಅಲೆ ಬಂತೆಂದು ಮತ್ತೆ ಮುಂದೂಡಿ ಮೊದಲ ಸೆಮ್‌ನ ಮೂರು ಮುಖ್ಯ ಸಬ್ಜೆಕ್ಟ್‌ಗಳ ಎಕ್ಸಾಂ ಉಳಿದಿರುವಾಗ ಮಧ್ಯದಲ್ಲಿ ಎರಡನೇ ಸೆಮಿಸ್ಟರ್ ಆರಂಭಿಸಿ ಎರಡೂ ಸೆಮ್ಮಿನ ವಿಷಯಗಳನ್ನು ಸಜ್ಜಿಗೆ ಬಜಿಲ್ ಆಗುವಂತೆ ಮಾಡಿ ಬಳಿಕ ಮೊನ್ನೆಗೆ ಎಕ್ಸಾಂ ನಿಗದಿಗೊಳಿಸಿ ವಿದ್ಯಾರ್ಥಿಗಳನ್ನು ಮೊದಲ ಸೆಮ್ ಓದುವಂತೆ ಹೇಳಿ ಮತ್ತೆ ಡಿಸಿ ಆರ್ಡರ್ ನೀಡಿದ್ರು ಅಂತ ಎಕ್ಸಾಂ ಮುಂದೂಡಿ ಮತ್ತೆ ಆ.11 ರಿಂದ ಎಕ್ಸಾಂ ಸ್ಟಾರ್ಟ್ ಅಂತೆ…..
ಎಂಚಿನ ಅವಸ್ಥೆ ಮಾರ್ರೆ..!!!
ಸತ್ಯವಾಗಿಯೂ ಇಲ್ಲಿ ಬಲಿಪಶುಗಳು ಯಾರು ಅಂತ ಅರ್ಥ ಆಗ್ತ ಇಲ್ಲ. ಮಂಗಳೂರು ವಿವಿಯಲ್ಲಿ ಬರೀ ವಿದ್ಯಾರ್ಜನೆ ಮಾಡ್ತಿರುವ ವಿದ್ಯಾರ್ಥಿಗಳ ಜತೆಗೆ ಕೆಲಸ ಮಾಡಿ ಮನೆಯ ಜವಾಬ್ದಾರಿ ಹೊತ್ತುಕೊಂಡು ವಿದ್ಯೆಯ ಬೆಳಕು ಕಾಣಬೇಕು ಅಂತ ಸಂಜೆ ಕಾಲೇಜ್‌ಗೆ ಬರುವ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಆದರೆ ಇದೆಲ್ಲದರ ಪರಿವೆಯೆ ಇರದ ಹಾಗೆ ವಿವಿಯ ಆಡಳಿತ ವ್ಯವಸ್ಥೆ ಹಾಗೂ ಸರಕಾರದ ವ್ಯವಸ್ಥೆಯಲ್ಲಿ ಜೀವನದ ಪರೀಕ್ಷೆ ಎದುರಿಸಲು ತಿಣುಕಾಡುವ ಪರಿಸ್ಥಿತಿ ಅನೇಕರಿಗೆ ಎದುರಾಗಿದೆ.
ಪರೀಕ್ಷೆ ಇದೆ ಅಂತ ಕೆಲಸ ಬಿಟ್ಟು ಓದಿ ಪರೀಕ್ಷೆ ಹಿಂದಿನ ದಿನ ಕ್ಯಾನ್ಸಲ್ ಆದಾಗ ಮತ್ತೆ ಕೆಲಸಕ್ಕೆ ಹೋಗ್ತೀವಿ ಅಂತ ಸಂಸ್ಥೆಗಳಿಗೆ ಮಾತುಕೊಟ್ಟು ಎರಡು ದಿನದಲ್ಲಿ ಮತ್ತೆ ಎಕ್ಸಾಂ ಅಂತ ಹೇಳುವ ಆಡಳಿತ ವ್ಯವಸ್ಥೆಯ ನಡುವೆ ಈ ವಿದ್ಯಾರ್ಥಿಗಳ ಪಾಡೇನೆಂದು ಕೇಳುವವರು ಯಾರು..!?
ನಾಡಿದ್ದು 11 ರಿಂದ ಎಕ್ಸಾಂ ಅಂತೀರ ಬರ್ಲಿಕ್ಕೆ ಆಗದವರಿಗೆ ವಿಶೇಷ ಎಕ್ಸಾಂ ಅಂತ ಹೇಳಲಾಗುತ್ತೆ. ಹಾಗೇನೆ ಮಾಡುವುದು ಆಗಿದ್ದರೆ ಮೊನ್ನೆಯ ಎಕ್ಸಾಂ ಕೂಡ ಮಾಡಬಹುದಿತ್ತಲ್ಲ. ಹನ್ನೊಂದಕ್ಕೆ ಕೊರೊನಾ ಕಡಿಮೆ ಆಗ್ತದೆ ಅಂತ ಉಯಿಲು ಬರೆದು ಕೊಟ್ಟಿದೆಯ… ಒಂದು ಅರ್ಥ ಆಗ್ತಿಲ್ಲ.
ಮತ್ತೆ ಎಕ್ಸಾಂ ಅಂತ ಮತ್ತೆ ಓದ್ಲಿಕೆ ರಜೆ ಮಾಡಿ ಕಡೆ ಕ್ಷಣಕ್ಕೆ ಎಕ್ಸಾಂ ಕ್ಯಾನ್ಸಲ್ ಆದ್ರೆ ಅತ್ತ ಗಳಿಕೆಯು ಇಲ್ಲ ಇತ್ತ ಪರೀಕ್ಷೆಯೂ ಇಲ್ಲ ಅನ್ನುವ ಪರಿಸ್ಥಿತಿ.
ಮತ್ತೊಂದು ಕಡೆ ಮಾನ್ಯ ಮುಖ್ಯಮಂತ್ರಿಗಳು ಹದಿನಾಲ್ಕು ದಿನಗಳ ಬಳಿಕ ಲಾಕ್‌ಡೌನ್ ಅಂತ ಹೇಳಿಕೆ ನೀಡಿದ್ದಾರೆ. ಹಾಗಾದರೆ ಹನ್ನೊಂದಕ್ಕೆ ಎಕ್ಸಾಂ ಆರಂಭ ಆದ್ರೂ ಬಾಕಿಯ ಎಕ್ಸಾಂ ಮಾಡ್ಲಿಕೆ ಸಾಧ್ಯವೇ ?
ಹದಿನೈದರ ಒಳಗೆ ಮುಗಿಸಬೇಕು ಅಂತ ದಿನಗಳ ನಡುವೆ ಅಂತರವಿರದೆ ಪರೀಕ್ಷೆ ಮಾಡಿದರೆ ಮೂರ್ನಾಲ್ಕು ತಿಂಗಳ ಹಿಂದೆ ಓದಿದ ವಿಷಯಗಳನ್ನು ಮನನ ಮಾಡಿಕೊಳ್ಳುವುದಾದರೂ ಹೇಗೆ.?
ದಯವಿಟ್ಟು ಅರ್ಥ ಮಾಡಿಕೊಳ್ಳಿ ಕೇವಲ ಡಿಗ್ರಿ ಕಾಲೇಜ್‌ಗೆ ಹೋಗಬೇಕು ಅಂತ ಕಾಲೇಜ್ ಸೇರಿದವರಷ್ಟೆ ಅಲ್ಲ ಕೆಲವರ ಕನಸುಗಳು ಇವೆ ಇಲ್ಲಿ. ಪಾಸ್ ಆಗುವದಷ್ಟೆ ಸಂಜೆ ಕಲಿಯುವ ವಿದ್ಯಾರ್ಥಿಗಳ ಆದ್ಯತೆ ಅಲ್ಲ, ಪರೀಕ್ಷೆಗಳಲ್ಲಿ ಉತ್ತಮ ಅಂಕ ತೆಗಿಬೇಕು, ಬದುಕಿನ ಕರಾಳತೆಯಾಚೆಗೆ ಹೊಸ ಬೆಳಕನ್ನು ವಿದ್ಯೆಯಿಂದ ಪಡೆಯಬೇಕು ಎನ್ನುವ ಆಸೆಗೆ ಕಸುವು ತುಂಬುವ ಕೆಲಸ ಮಾಡುವುದು ಬಿಟ್ಟು ಮತ್ತೆ ಮತ್ತೆ ಚಿವುಟುವ ಕೆಲಸ ಆಗದಿರಲಿ…
ವಿಶ್ವ ವಿದ್ಯಾಲಯ ಹಾಗೂ ಜಿಲ್ಲಾಡಳಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡ ಯೋಚಿಸಲಿ. ಆನ್‌ಲೈನ್ ಕ್ಲಾಸ್ ಹಾಗೂ ಆಂತರಿಕ ಎಕ್ಸಾಂಗಳು, ಅಸೈನ್‌ಮೆಂಟ್‌ಗಳು ಹಾಗೂ ಕಡ್ಡಾಯ ಹಾಜರಾತಿ ಇದ್ದಕ್ಕೂ ವಿನಾಯಿಯಿತಿ ನೀಡದೆ ಕೆಲಸ ಮಾಡಿ ಕತ್ತಲಿಗೆ ಜ್ಞಾನದ ಬೆಳಕ ಅರಸುವ ಹಲವಾರು ಸಂಧ್ಯಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಭರವಸೆಯ ನಾಳೆಗಾಗಿ ತುಡಿಯುತ್ತಿರುವ ಅನೇಕರ ಮನದ ಮಾತು ಇದು….
ದಯವಿಟ್ಟು ಅರ್ಥ ಮಾಡಿಕೊಳ್ಳಿ, ಕೊರೊನಾ ನಮ್ಮ ಬದುಕಲ್ಲೂ ಆಟ ಆಡಿದೆ…