ಇತ್ತೀಚಿನ ಸುದ್ದಿ
Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ
31/03/2025, 19:08

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಶ್ರೀನಿವಾಸಪುರ ಪಟ್ಟಣದಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು.
ನಗರದ ವಿವಿಧ ಭಾಗಗಳಿಂದ ಸಾವಿರಾರು ಮುಸ್ಲಿಮರು ಪಾದಯಾತ್ರೆಯ ಮೂಲಕ ಈದ್ಗಾ ಮೈದಾನವನ್ನು ತಲುಪಿದರು. ಬೆಳಿಗ್ಗೆ 9:45ಕ್ಕೆ ಸಾಮೂಹಿಕ ನಮಾಜ್ ಸಲ್ಲಿಸಿದರು.
ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಮುಹಮ್ಮದ್ ಆಸಿಫ್ ಅವರು ಧಾರ್ಮಿಕ ಪ್ರವಚನ ನೀಡುತ್ತಾ, ಈದ್-ಉಲ್-ಫಿತರ್‌ನ ಮಹತ್ವ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶಗಳನ್ನು ವಿವರಿಸಿದರು. ಇಸ್ಲಾಮ್ ಧರ್ಮ ಶಾಂತಿ ಮತ್ತು ಸಹೋದರತ್ವದ ಸಂದೇಶ ಸಾರುತ್ತದೆಯೆಂದು ಹೇಳಿದರು. ಅವರು ರೋಜಾ (ಉಪವಾಸ) ಮತ್ತು ಜಕಾತ್ (ದಾನ) ಕುರಿತು ಮಾತನಾಡಿ, ಇದು ದಯೆ ಮತ್ತು ಸಹಾಯಹಸ್ತವನ್ನು ಪ್ರೇರೇಪಿಸುತ್ತದೆ ಎಂದರು.
ಚಾರ್ಮಿನಾರ್ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 7:45ಕ್ಕೆ ನಡೆದ ಸಾಮೂಹಿಕ ನಮಾಜ್‌ಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ನಮಾಜ್ ಮುಗಿದ ಬಳಿಕ ಜನರು ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಮಂದಿ ಮತ್ತು ಸ್ನೇಹಿತರು ಭೇಟಿ ನೀಡಿ ಹಬ್ಬದ ಸಂತೋಷ ಹಂಚಿಕೊಂಡರು.
ಪ್ರತಿವರ್ಷದಂತೆ ಈ ಬಾರಿ ಮಹಿಳೆಯರಿಗೂ ಪ್ರತ್ಯೇಕ ಸಾಮೂಹಿಕ ನಮಾಜ್ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರೂ ಧಾರ್ಮಿಕ ಉತ್ಸಾಹದಿಂದ ಈದ್ಗಾ ಮೈದಾನದಲ್ಲಿ ನಮಾಜ್ ಸಲ್ಲಿಸಿದರು.
ಹಬ್ಬದ ಸಂದರ್ಭದಲ್ಲಿ ಪೊಲೀಸರು ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆ ಕೈಗೊಂಡು, ಶಾಂತಿಯುತ ಸಂಭ್ರಮಕ್ಕೆ ಸಹಕರಿಸಿದರು.