ಇತ್ತೀಚಿನ ಸುದ್ದಿ
Education | ಶಿಕ್ಷಣ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಮಧು ಬಂಗಾರಪ್ಪ
10/03/2025, 21:26

ಬೆಂಗಳೂರು(reporterkarnataka.com):ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದೊಂದಿಗೆ ರಾಜ್ಯದ ಶಿಕ್ಷಣ ಇಲಾಖೆಯಲ್ಲಿನ ಶೇಕಡ 80 ರಷ್ಟು ಹುದ್ದೆಗಳನ್ನು ತುಂಬಲು ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇದ್ದ ಪದವೀಧರ, ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) 15000 ಹುದ್ದೆಗಳ ಪೈಕಿ ಈಗಾಗಲೇ 12285 ಅಭ್ಯಥಿಗಳನ್ನು ಕೌನ್ಸಿಲಿಂಗ್ ಮೂಲಕ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಬೋಧನೆಗೆ ಅವಶ್ಯಕತೆ ಇರುವ ಪಿ.ಎಸ್.ಟಿ. ಮತ್ತು ಜಿಪಿಟಿ ವೃಂದದ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಖಾಯಂ ಹುದ್ದೆ ಭರ್ತಿ ಆಗುವವರೆಗೂ ಅಥವಾ ಶೈಕ್ಷಣಿಕ ಸಾಲಿನ ಅಂತ್ಯದ ವರೆಗೂ ತಾತ್ಕಾಲಿಕವಾಗಿ ಒಟ್ಟು 35000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರೌಢ ಶಾಲಾ ಸಹ ಶಿಕ್ಷಕರ ಒಟ್ಟು ಹುದ್ದೆಗಳಲ್ಲಿ 385 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿರುತ್ತದೆ. ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ದೈಹಿಕ ಶಿಕ್ಷಣ ಶಿಕ್ಷಕರ 200 ಹುದ್ದೆಗಳು ಸೇರಿ ಒಟ್ಟು 2500 ಶಿಕ್ಷಕರುಗಳ ಹುದ್ದೆಗಳನ್ನು 15000 ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿರುತ್ತದೆ ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಗಣಕಯಂತ್ರ ಲ್ಯಾಬ್‍ಗಳನ್ನು ನಿರ್ವಹಿಸಲು ಪ್ರತ್ಯೇಕ ತರಬೇತುದಾರರ ಹುದ್ದೆಗಳಿರುವುದಿಲ್ಲ. ಗಣಕಯಂತ್ರ ಲ್ಯಾಬ್ ಹೊಂದಿರುವ ಟ್ಯಾಲ್ಸ್ ಶಾಲೆಗಳ ಶಿಕ್ಷಕರಿಗೆ ಬುನಾದಿ ಮತ್ತು ಪುನಃಶ್ಚೇತನ ತರಬೇತಿಯನ್ನು ನೀಡಲಾಗಿದ್ದು, ತರಬೇತಿ ಪಡೆದ ಶಿಕ್ಷಕರು ಗಣಕಯಂತ್ರ ಲ್ಯಾಬ್‍ಗಳನ್ನು ಬೋಧನಾ ಕಲಿಕಾ ಪ್ರಕ್ರಿಯೆಗೆ ಬಳಸುತ್ತಿದ್ದಾರೆ ಎಂದರು.
ಪ್ರಸ್ತುತ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಕುರಿತಂತೆ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಇವರ ಹಂತದಲ್ಲಿ ನಾಲ್ಕು ವಿಭಾಗಗಳ ಪ್ರೌಢ ಶಾಲಾ ಶಿಕ್ಷಕರುಗಳ ಪಟ್ಟಿಯನ್ನು ಪಡೆದು ಕ್ರೋಢೀಕರಿಸಲಾಗುತ್ತಿದ್ದು, ಒಂದೇ ಸಾಮಾನ್ಯ ಅರ್ಹತಾ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಕ್ರಮ ವಹಿಸಲಾಗುತ್ತಿದೆ. ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯ ಬಗ್ಗೆ ತ್ವರಿತವಾಗಿ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದರು.