8:14 PM Wednesday8 - January 2025
ಬ್ರೇಕಿಂಗ್ ನ್ಯೂಸ್
ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಸಚಿವ ಎಂ. ಬಿ. ಪಾಟೀಲ್ ಚಾಲನೆ ಜ.10-12: ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025; ದೇಶ – ವಿದೇಶದ 2… ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ…

ಇತ್ತೀಚಿನ ಸುದ್ದಿ

ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ

07/01/2025, 19:30

ಬೆಂಗಳೂರು(reporterkarnataka.com): ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಪಕ್ಕಾ 60 ಪರ್ಸೆಂಟ್‌ ಕಮಿಶನ್‌ ಸರ್ಕಾರ. ಕಾಂಗ್ರೆಸ್‌ನ ಆಡಳಿತದಿಂದಾಗಿ ರಾಜ್ಯದ ದಿವಾಳಿಯ ಕಡೆಗೆ ಸಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಹಾಗೂ ಕೇರಳದಂತೆಯೇ ಕರ್ನಾಟಕ ಕೂಡ ದಿವಾಳಿಯ ಕಡೆಗೆ ಹೆಜ್ಜೆ ಇಡುತ್ತಿದೆ. ಕಾಂಗ್ರೆಸ್‌ನದ್ದು ಪಕ್ಕಾ 60 ಪರ್ಸೆಂಟ್‌ ಕಮಿಶನ್‌ನ ಸರ್ಕಾರ. ಗುತ್ತಿಗೆದಾರರಿಗೆ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್‌ ಎಂದು ಆರೋಪಿಸಿದ ಗುತ್ತಿಗೆದಾರರು, ಈಗ ಕಾಂಗ್ರೆಸ್‌ ಸರ್ಕಾರ 60% ಕಮಿಶನ್‌ ಸರ್ಕಾರ ಎಂದು ಹೇಳಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ 30-40 ನಿವೇಶನಕ್ಕೆ 10 ಲಕ್ಷ ರೂ. 40-60 ನಿವೇಶನಕ್ಕೆ 20 ಲಕ್ಷ ರೂ., ಇದಕ್ಕೂ ಹೆಚ್ಚಿನ ನಿವೇಶನಗಳಿಗೆ 40 ಲಕ್ಷ ರೂ. ಲಂಚ ಕಮಿಶನ್‌ ಕೊಡಬೇಕಿದೆ ಎಂದು ದೂರಿದರು.
ಗುತ್ತಿಗೆದಾರರಿಗೆ ಸರ್ಕಾರ 32 ಸಾವಿರ ಕೋಟಿ ರೂ. ನೀಡಬೇಕಿದೆ. ಈ ಹಣ ತರಲು ಎಲ್ಲದಕ್ಕೂ ಸರ್ಕಾರ ತೆರಿಗೆ ಹಾಕುತ್ತಿದೆ. ಇಲ್ಲವಾದರೆ ಗುತ್ತಿಗೆದಾರರಿಗೆ ಕೆಲಸ ಸ್ಥಗಿತಗೊಳಿಸುತ್ತಾರೆ. ಇದರ ನಡುವೆ ಆಶಾ ಕಾರ್ಯಕರ್ತೆಯರು ಧರಣಿ ಆರಂಭಿಸಿದ್ದಾರೆ. ಜೊತೆಗೆ ತೊಗರಿ ಖರೀದಿಗೆ ಸರ್ಕಾರದ ಬಳಿ ಹಣವಿಲ್ಲ ಎಂದರು.
*ಅನುದಾನ ಕಡಿತ, ಬಳಕೆ ಮಾಡಿಲ್ಲ*
ರಾಜ್ಯ ಬಜೆಟ್‌ನಲ್ಲಿ 3.22 ಲಕ್ಷ ಕೋಟಿ ರೂ. ನಲ್ಲಿ 1.79 ಲಕ್ಷ ಕೋಟಿ ರೂ., ಅಂದರೆ 55.69% ಖರ್ಚಾಗಿದೆ. ಇನ್ನೂ 45% ಅನ್ನು ಎರಡು ತಿಂಗಳಲ್ಲಿ ಖರ್ಚು ಮಾಡಬೇಕಿದೆ. ಎಸ್‌ಸಿಎಸ್‌ಪಿಯಲ್ಲಿ 28,527.02 ಕೋಟಿ ರೂ. ಇದ್ದರೆ, 13,923 ಕೋಟಿ ರೂ. ಅಂದರೆ 48.81% ಖರ್ಚು ಮಾಡಲಾಗಿದೆ. ಟಿಎಸ್‌ಪಿಯಲ್ಲಿ 11,515.39 ಕೋಟಿ ರೂ. ಇದ್ದರೆ, 4,937.59 ಕೋಟಿ ರೂ. ಅಂದರೆ 42.88% ಖರ್ಚಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ, 3,077 ಕೋಟಿ ರೂ. ಇದ್ದರೆ 1,076 ಕೋಟಿ ರೂ. ಅಂದರೆ 34% ಖರ್ಚಾಗಿದೆ. ನುಡಿದಂತೆ ನಡೆದ ಎಂದು ಹೇಳಿ ಯಾವುದೇ ಅನುದಾನ ಖರ್ಚು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಬಹಳ ಮೋಸ ಮಾಡುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23ರಲ್ಲಿ ಬಿಜೆಪಿ ಸರ್ಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25ರಲ್ಲಿ ಕಾಂಗ್ರೆಸ್‌ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 45 ಕೋಟಿ ರೂ. ನೀಡಿದೆ. ತಾಂಡಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 110 ಕೋಟಿ ರೂ. ನೀಡಿದರೆ ಕಾಂಗ್ರೆಸ್‌ 60 ಕೋಟಿ ರೂ. ನೀಡಿದೆ. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 50 ಕೋಟಿ ರೂ. ನೀಡಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 95 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 55 ಕೋಟಿ ರೂ. ನೀಡಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್‌ 100 ಕೋಟಿ ರೂ. ನೀಡಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 13 ಕೋಟಿ ರೂ. ಗೆ ಇಳಿಸಿದೆ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ 106 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್‌ 50.10 ಕೋಟಿ ರೂ. ನೀಡಿದೆ. ನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 5 ಕೋಟಿ ರೂ. ನೀಡಿದೆ. ಉಪ್ಪಾರ ನಿಗಮಕ್ಕೆ ಬಿಜೆಪಿ 15 ಕೋಟಿ ರೂ. ನೀಡಿದರೆ ಕಾಂಗ್ರೆಸ್‌ 8 ಕೋಟಿ ರೂ. ನೀಡಿದೆ. ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್‌ 60 ಕೋಟಿ ರೂ.ಗೆ ರಿಯಾಯಿತಿ ಮಾಡಿದೆ. ದೇವಾಲಯಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಬಿಜೆಪಿ 274.68 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ ಕೇವಲ 17.50 ಕೋಟಿ ರೂ. ನೀಡಿದೆ. ವಿವಿಧ ಮಠ ಹಾಗೂ ದೇವಾಲಯಗಳಿಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನದಡಿ ಬಿಜೆಪಿ 154.85 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 30 ಕೋಟಿ ರೂ. ನೀಡಿ ಅನ್ನಕ್ಕೂ ಕನ್ನ ಹಾಕಿದೆ ಎಂದು ದೂರಿದರು.
ಹಿಂದೂ ರುದ್ರಭೂಮಿಗಳ ನಿರ್ವಹಣೆಗೆ ಬಿಜೆಪಿ 25 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 10 ಕೋಟಿ ರೂ. ಗೆ ಇಳಿಸಿದೆ. ನೇಕಾರರ ಯೋಜನೆಗೆ ಬಿಜೆಪಿ 125.77 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್‌ 10 ಕೋಟಿ ರೂ. ಕೊಟ್ಟಿದೆ. ಕಮಿಶನ್‌ ದಂಧೆಗಾಗಿ ಸರ್ಕಾರ ಇಡೀ ರಾಜ್ಯವನ್ನು ಕತ್ತಲೆಗೆ ದೂಡಿದೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್‌ ಖರ್ಗೆಯವರ ಆಪ್ತರನ್ನು ಇನ್ನೂ ಬಂಧಿಸಿಲ್ಲ. ಬಹುಶಃ ಸುರಕ್ಷತೆ ದೃಷ್ಟಿಯಿಂದ ಅವರನ್ನು ಪೊಲೀಸರು ಕಬ್ಬಿನ್‌ ಗದ್ದೆಯಲ್ಲಿ ಇರಿಸಿರಬಹುದು. ಅವರ ಆಪ್ತರು ರೌಡಿಶೀಟರ್‌ ಪಟ್ಟಿಯಲ್ಲಿದ್ದು, ಆ ಪಟ್ಟಿಯಿಂದ ಹೆಸರು ತೆಗೆಸಿದ್ದೇ ಕಾಂಗ್ರೆಸ್‌ ನಾಯಕರು. ಸಚಿವ ರಾಮಲಿಂಗಾರೆಡ್ಡಿ ಹಳೆಯ ಸುದ್ದಿ ಹೇಳಿದ್ದಾರೆ. ನಾನು ಸಚಿವನಾಗಿದ್ದಾಗ ಸಾರಿಗೆ ನಿಗಮಗಳನ್ನು ನಷ್ಟಕ್ಕೆ ದೂಡಲಿಲ್ಲ. ಎಲ್ಲ ಕಡೆ ಬಸ್‌ ನಿಲ್ದಾಣ ನಿರ್ಮಿಸಿ ಬಾಡಿಗೆ ಮೂಲಕ ಆದಾಯ ಬರುವಂತೆ ಮಾಡಲಾಗಿತ್ತು. ಈಗ ಸರ್ಕಾರ ಎಲ್ಲೂ ನಿಲ್ದಾಣ ನಿರ್ಮಿಸಿಲ್ಲ. ನಾನು ಸಚಿವ ಸ್ಥಾನದಿಂದ ಹೊರಬಂದಾಗ ಬಿಎಂಟಿಸಿ ಲಾಭದಲ್ಲಿತ್ತು. ಕೋವಿಡ್‌ ಸಮಯದಲ್ಲಿ ಆರ್ಥಿಕ ನಷ್ಟವಾಗಿದ್ದಾಗಲೂ ಟಿಕೆಟ್‌ ದರ ಏರಿಸಲಿಲ್ಲ. ಗ್ಯಾರಂಟಿಗಳಿಂದಾಗಿ ಈಗ ಟಿಕೆಟ್‌ ದರ ಏರಿಸಿದ್ದಾರೆ ಎಂದರು.

*ಸಿದ್ಧತೆ ಅಗತ್ಯ*

ಹೊಸ ವೈರಸ್‌ ಹರಡುತ್ತಿರುವುದರಿಂದ ಸರ್ಕಾರ ಟಾಸ್ಕ್‌ ಫೋರ್ಸ್‌ ರಚಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಆಕ್ಸಿಜನ್‌ ವ್ಯವಸ್ಥೆ ಮಾಡಬೇಕು. ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಅಧಿಕಾರಿಗಳು ಆಡಿಟ್‌ ಮಾಡಬೇಕು. ಸರ್ಕಾರ ಕೂಡಲೇ ಸಿದ್ಧತೆ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು