ಇತ್ತೀಚಿನ ಸುದ್ದಿ
ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚನೆ: ಅನಗತ್ಯ ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
03/05/2024, 20:44
ಮಂಗಳೂರು(reporterkarnataka.com) :ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಿ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ನೀರಿನ ಅನಗತ್ಯ ಬಳಕೆಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಈ ಕಾರಣ ನೀರನ್ನು ಅನಗತ್ಯವಾಗಿ ಪೊಲು ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದರು.
ಮಳೆಯ ಕೊರತೆ, ತಾಪಮಾನ ಹೆಚ್ಚಳದಿಂದಾಗಿ ನೀರಿನ ಸಮಸ್ಯೆ ಪ್ರಾರಂಭವಾಗುತ್ತಿದೆ. ಸಾರ್ವಜನಿಕರು ಅನಗತ್ಯವಾಗಿ ನೀರು ಪೊಲು ಮಾಡದೇ ಸದ್ಭಳಕೆ ಮಾಡಬೇಕು. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಈಗಾಗಲೇ ನೀರಿನ ಸಮಸ್ಯೆ ಪರಿಹರಿಸುವ ಕಂಟ್ರೋಲ್ ರೂಮ್ ಗಳನ್ನು ತೆರೆಯಲಾಗಿದ್ದು, ಈ ಕಂಟ್ರೋಲ್ ರೂಮ್ ಗಳಿಗೆ ಸಾರ್ವಜನಿಕರಿಂದ ಬರುವಂತಹ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು, ನೀರಿನ ರೇಷನಿಂಗ್ ಮಾಡಲು ಸೂಕ್ತ ವೇಳಾಪಟ್ಟಿಯನ್ನು ತಯಾರಿಸಿ ಸಮರ್ಪಕವಾಗಿ ಎಲ್ಲಾ ಕಡೆ ನೀರು ಪೂರೈಕೆಯಾಗುವಂತೆ ನಿಗಾವಹಿಸಬೇಕು ಎಂದು ಮಹಾನಗರಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.
ಜಿಲ್ಲೆಯ ಪ್ರತಿ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಕ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಅನ್ನು ರಚಿಸಿ ನೀರಿನ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಡ್ಯಾಮ್ ಗಳನ್ನು ಹೊರತುಪಡಿಸಿ ನೀರಿನ ಪರ್ಯಾಯ ಮೂಲಗಳನ್ನು ಖುದ್ದಾಗಿ ಭೇಟಿ ನೀಡಿ ಅದರ ಬಗ್ಗೆ ಪಟ್ಟಿ ತಯಾರಿಸಬೇಕು ಎಂದರು.
ನೀರಿನ ಸಮಸ್ಯೆ ಇರುವ ಸೋಮೇಶ್ವರ ಹಾಗೂ ಕೋಟೆಕಾರು ಪ್ರದೇಶಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಆಗುತ್ತಿದ್ದು, ಅದರ ಬಗ್ಗೆಯೂ ಗಮನಹರಿಸಬೇಕು. ಮುಂದಿನ ಮಳೆಗಾಲದವರೆಗೂ ಯಾವುದೇ ರೀತಿಯ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು ಎಂದರು.
ಮುಂಬರುವ ದಿನಗಳಲ್ಲಿ ಮಳೆಗಾಲ ಸಮೀಪಿಸುತ್ತಿದ್ದು, ನೆರೆ ಹಾವಳಿ, ಭೂ ಕುಸಿತ ಮತ್ತಿತರ ಆಕಸ್ಮಿಕ ಘಟನೆಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕುವಾರು ಈ ಹಿಂದೆ ಸಂಭವಿಸಿರುವಂತಹ ಘಟನೆಗಳನ್ನು ಅವಲೋಕನ ಮಾಡಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಮೆಸ್ಕಾಂ, ಆರೋಗ್ಯ ಇಲಾಖೆಗಳೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಯಾರಾಗಿರಬೇಕು. ಮಳೆಗಾಲ ಆಗಮಿಸುವ ಮೊದಲೇ ಯಾವೆಲ್ಲಾ ಪ್ರದೇಶಗಳಲ್ಲಿ ಭೂಕುಸಿತ, ಪ್ರವಾಹ ಹಾಗೂ ಸಂಪರ್ಕಕ್ಕೆ ಸಿಗದೆ ಇರುವ ಪ್ರದೇಶಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು ಹಾಗೂ ಯಾವುದೇ ರೀತಿಯ ಹಾನಿ ಉಂಟಾಗದಂತೆ ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಂಡಿರಬೇಕು ಎಂದರು.
ಪ್ರವಾಹ ಸಂಭವಿಸುವಂತಹ ಪ್ರದೇಶದಲ್ಲಿ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಬೇಕಾದಂತಹ ಬೋಟ್ ವ್ಯವಸ್ಥೆ ಹಾಗೂ ನಿರಾಶ್ರಿತರು ಉಳಿದುಕೊಳ್ಳುವಂತಹ ಶಿಬಿರಗಳಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಸ್ತೆ ಕಡಿತಗೊಂಡು ಸಂಪರ್ಕಕ್ಕೆ ಸಿಗದ ಪ್ರದೇಶದಲ್ಲಿ ಗರ್ಭಿಣಿಯರು, ವಯಸ್ಸಾದವರ ಪಟ್ಟಿಯನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಅವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಆಗಬೇಕು ಎಂದರು.
ನೆಟ್‍ವರ್ಕ್‍ಗಳು ಸಿಗದಂತಹ ಪ್ರದೇಶದಲ್ಲಿ ಜನರಿಂದ ಮಾಹಿತಿಯನ್ನು ಪಡೆಯಲು ಮತ್ತು ಅವರಿಗೆ ಮಾಹಿತಿಯನ್ನು ನೀಡಲು ಪರ್ಯಾಯ ವ್ಯವಸ್ಥೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಭೂಕುಸಿತ ಉಂಟಾಗುವಂತಹ ಪ್ರದೇಶ, ಅಪಾಯಕ್ಕೆ ಸಿಲುಕಿರುವಂತಹ ಮನೆಗಳನ್ನು ಗುರುತಿಸಿ ಅಲ್ಲಿನ ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಲು ಹಾಗೂ ಇಂತಹಾ ಸಂದರ್ಭದಲ್ಲಿ ರಕ್ಷಣೆಗೆ ಜೆಸಿಬಿ ಹಾಗೂ ಹಿಟಾಚಿ ವಾಹನಗಳ ಬಳಕೆಗೆ ಸ್ಥಳೀಯ ವಾಗಿ ಲಭ್ಯವಿರುವವರ ಪೋನ್ ನಂಬರ್ ಹಾಗೂ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಿಟ್ಟುಕೊಂಡು ಭೂಕುಸಿತ ಉಂಟಾಗುವ ಪ್ರದೇಶದಲ್ಲಿ ತಕ್ಷಣ ಬಳಕೆಗೆ ಸಿದ್ದವಿರುವಂತೆ ನಿಗಾವಹಿಸಬೇಕು ಎಂದರು.
ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಸ್ವಚ್ಚತೆ ಕಾರ್ಯವನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಮರಗಳ ರಂಬೆ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಯಾವುದೇ ರೀತಿಯ ವಿದ್ಯುತ್ ಹಾನಿಗಳು ಸಂಭವಿಸದಂತೆ ತಡೆಯಲು ಮರಗಳ ರಂಬೆ ಕೊಂಬೆಗಳನ್ನು ಕತ್ತರಿಸುವ ಕೆಲಸ ಶೀಘ್ರವಾಗಿ ಮಾಡಬೇಕು. ಶಾಲಾ ಕಟ್ಟಡಗಳ ಹಂಚಿನ ಮೇಲೆ ಬಿದ್ದು ಹಾನಿ ಉಂಟು ಮಾಡುವಂತಹ ಮರಗಳ ರೆಂಬೆಕೊಂಬೆಗಳನ್ನು ಸಹ ಕತ್ತರಿಸಲು ಅರಣ್ಯ ಇಲಾಖೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್., ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೋಹಾಪಾತ್ರ ಉಪಸ್ಥಿತರಿದ್ದರು.
ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.