ಇತ್ತೀಚಿನ ಸುದ್ದಿ
ಡೊಂಗರಕೇರಿ ವಾರ್ಡ್: ಫುಟ್ ಪಾತ್ ಗೆ ಬಂತು ವೈದ್ಯರ ಹೂ ಕುಂಡ!: ಪಾಲಿಕೆ ಕಮಿಷನರ್ ಆದೇಶಕ್ಕೆ ಕ್ಯಾರೇ ಎನ್ನದ ಟಿಪಿಒ!!
05/05/2022, 08:11
ಮಂಗಳೂರು(reporterkarnataka.com): ಬಡವರು ಹೊಟ್ಟೆಪಾಡಿಗೆ ಫುಟ್ ಪಾತ್ ನಲ್ಲಿ ತರಕಾರಿ ಇಟ್ಟು ಮಾರಿದ್ರೆ ಅಟ್ಟಾಡಿಸಿ ಓಡಿಸ್ತಾರೆ. ಆದರೆ ಉಳ್ಳವರು ಫುಟ್ ಪಾತ್ ಗೆ ಬೇಲಿ ಹಾಕಿದ್ರೂ ನಮ್ಮ ಸ್ಥಳೀಯಾಡಳಿತ ಸುಮ್ಮನಿರುತ್ತದೆ. ಇದಕ್ಕೆ ಒಂದು ಜ್ವಲಂತ ಉದಾಹರಣೆ ಡೊಂಗರಕೇರಿ ವಾರ್ಡ್ ನ ಕೆನರಾ ಹೈಸ್ಕೂಲ್ ಸಮೀಪ ಫುಟ್ ಪಾತ್ ನಲ್ಲಿ ಅಡ್ಡವಾಗಿ ಹೂ ಕುಂಡಗಳನ್ನು ಜೋಡಿಸಿರುವುದು. ಇದು ಪಾದಚಾರಿಗಳ ಓಡಾಟಕ್ಕೆ ತಡೆಯಾಗಿ ಪರಿಣಮಿಸಿದೆ. ಈ ಕುರಿತು ಪಾಲಿಕೆ ಕಮಿಷನರ್ ಹಾಗೂ ಸ್ಥಳೀಯ ಶಾಸಕರಿಗೆ ದೂರು ನೀಡಿ ತಿಂಗಳೇ ಕಳೆದರೂ ಯಾವುದೇ ಸ್ಪಂದನ ದೊರೆತಿಲ್ಲ.
ಫುಟ್ ಪಾತ್ ಅತಿಕ್ರಮಣದ ಕುರಿತು ಮಂಜುಳಾ ನಾಯಕ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆಗೆ ಸಿದ್ಧತೆಗಳು ನಡೆದಿತ್ತು. ಅಷ್ಟರಲ್ಲಿ ಸ್ಥಳೀಯ ಪೊಲೀಸ್ ಠಾಣೆ ಮುಖ್ಯಸ್ಥರು ಮಧ್ಯಪ್ರವೇಶಿಸಿ 10 ದಿನಗಳ ಟೈಮ್ ಕೊಡಿ ಕ್ಲಿಯರ್ ಮಾಡಿಸುತ್ತೇವೆ ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ
ಪ್ರತಿಭಟನೆಯನ್ನು ರದ್ದು ಮಾಡಲಾಗಿದೆ.ವಾಸ್ತವದಲ್ಲಿ ಇದು ಪೊಲೀಸ್ ಮಧ್ಯಪ್ರವೇಶದ ವಿಷಯವೇ ಇಲ್ಲ. ಜನರಿಂದ ಆಯ್ಕೆಯಾದ ಇಲ್ಲಿನ ಸ್ಥಳೀಯ ಕಾರ್ಪೊರೇಟರ್, ಮೇಯರ್ ಮತ್ತು ಕಮೀಷನರ್ ಸೇರಿ ಪರಿಹರಿಸುವಂತಹ ವಿಷಯ. ಆದರೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರಾಗಲಿ, ಕಮಿಷನರ್ ಅಕ್ಷಯ್ ಶ್ರೀಧರ್ ಅವರಾಗಲಿ ಇತ್ತ ಗಮನಹರಿಸಿಲ್ಲ. ಕಾರಣ ಇದು ವೈದ್ಯರೊಬ್ಬರು ಹೂ ಕುಂಡ ಇಡುವ ಮೂಲಕ ಮಾಡಿದ ಅತಿಕ್ರಮಣ.ಮುಂಚೆ ಈ ಜಾಗದಲ್ಲಿ ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದವು. ಸ್ಮಾರ್ಟ್ ಸಿಟಿ ಫಂಡ್ ನ ಹಣವನ್ನು ಇಲ್ಲಿ ಬೇಕಾಬಿಟ್ಟಿ ಫುಟ್ ಪಾತ್ ಗೆ ಸುರಿದ ಬಳಿಕ ವೈದ್ಯರು ಇಲ್ಲಿ ಹೂ ಕುಂಡಗಳ ತಡೆಬೇಲಿ ನಿರ್ಮಿಸಿದ್ದಾರೆ.
ಈ ಕುರಿತು ‘ರಿಪೋರ್ಟರ್ ಕರ್ನಾಟಕ’ ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ, ಕಳೆದ ವಾರವೇ ಈ ಕುರಿತು ಪಾಲಿಕೆಯ ಟೌನ್ ಪ್ಲಾನಿಂಗ್ ವಿಭಾಗಕ್ಕೆ ಸೂಚನೆ ನೀಡಲಾಗಿದೆ ಎಂಬ ಉತ್ತರ ಬಂತು. ಟೌನ್ ಪ್ಲಾನಿಂಗ್ ಆಫೀಸರ್ ಬಾಲಕೃಷ್ಣ ಗೌಡ ಅವರನ್ನು ‘ರಿಪೋರ್ಟರ್ ಕರ್ನಾಟಕ’ ಸಂಪರ್ಕಿಸಲು ಯತ್ನಿಸಿದಾಗ ಅವರು ಕರೆ ಸ್ವೀಕರಿಸಿಲ್ಲ. ಕಮಿಷನರ್ ಹೇಳಿಕೆಯ ವಾಟ್ಸಾಪ್ Screenshot ಕಳುಹಿಸಿಕೊಟ್ಟರೂ ಟಿಪಿಒ ಬಾಲಕೃಷ್ಣ ಗೌಡ ಅವರು ಸ್ಪಂದಿಸಿಲ್ಲ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉಳ್ಳವರಿಗೆ ಒಂದು ಕಾನೂನು, ಇಲ್ಲದವರಿಗೆ ಇನ್ನೊಂದು ಕಾನೂನು ಆಗಿದೆ. 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟುವವರಿಗೆ ಸೆಟ್ ಬ್ಯಾಕ್ ಎಂದೆಲ್ಲ ಕಿರುಕುಳ ಕೊಡುವ ಟೌನ್ ಪ್ಲಾನಿಂಗ್ ವಿಭಾಗದ ಅಧಿಕಾರಿಗಳು ಸೈಕಲ್ ನಲ್ಲಿ ಸುತ್ತಲೂ ಜಾಗ ಇಡದ ಫ್ಲ್ಯಾಟ್ ಗಳಿಗೆ ಪರ್ಮಿಷನ್ ನೀಡಿದ ಬೇಕಾದಷ್ಟು ಉದಾಹಣೆಗಳಿಗೆ. ಆದರೆ ಇವೆಲ್ಲ ಟೌನ್ ಪ್ಲಾನಿಂಗ್ ಆಫೀಸರ್ ಬಾಲಕೃಷ್ಣ ಗೌಡ ಅವರಿಗೆ ಕಾಣಿಸುವುದಿಲ್ಲ. ಕಮಿಷನರ್ ಆದೇಶ ನೀಡಿ ಒಂದು ವಾರ ಕಳೆದರೂ ಅವರ ಕೈಕೆಳಗಿನ ಒಬ್ಬ ಟಿಪಿಒ ಅದನ್ನು ಕಾರ್ಯಗತ ಮಾಡುವುದಿಲ್ಲ ಅಂದ್ರೆ ಏನರ್ಥ? ಗೌಡ ಮೇಲೆ ಕಮಿಷನರ್ ಗಿಂತ ಪವರ್ ಫುಲ್ ಜನಪ್ರತಿನಿಧಿಗಳ ಪ್ರಭಾವ ಇದೆಯೇ ಎಂದು ಸ್ಥಳೀಯ ಜನರು ಪ್ರಶ್ನಿಸುತ್ತಾರೆ.