ಇತ್ತೀಚಿನ ಸುದ್ದಿ
ದ.ಕ. ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಗೆಲುವು ನಮ್ಮದೇ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್
26/03/2024, 23:43
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ತಯಾರಿ ನಡೆದಿದ್ದು, ಸುಮಾರು 50ರಿಂದ 60 ಸಾವಿರ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲುವುಗಾಗಿ
ಹೇಳುತ್ತಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೇ ಸುಮಾರು 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದು ಸ್ಥಳೀಯ ಶಾಸಕರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧ್ಯಕ್ಷರು, ಬಿಜೆಪಿ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಹಾಗಾಗಿ ಅವರ ಹೇಳಿಕೆ ನಮಗೆ ಮುಖ್ಯವಲ್ಲ ಎಂದರು.
ಕಳೆದ ವಿಧಾನಸಭೆ ಚುನಾವಣೆಯ ಬಳಿಕ ಲೋಕಸಭೆ ಚುನಾವಣೆಗೆ ತಯಾರಿ ನಡೆದಿದೆ. ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಬೂತ್ ಮಟ್ಟದ ಕಾರ್ಯಕರ್ತರಿಗೆ ತರಬೇತಿ ನೀಡುವ ಕೆಲಸ ಮಾಡಲಾಗಿದೆ. ಪ್ರತಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು, ಏ.3ಕ್ಕೆ ದ.ಕ. ಜಿಲ್ಲಾ ಲೋಕಸಭಾ ಸಭಾ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಬ್ಲಾಕ್ ಗಳಲ್ಲಿ ಮಾ. 27ರಿಂದ 30ರವರೆಗೆ ಬ್ಲಾಕ್, ವಿಧಾನಸಭಾ ಕ್ಷೇತ್ರಗಳ ಸಭೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ದಿನದಂದು ಮಂಗಳೂರು ಪುರಭವನದಲ್ಲಿ ಸಮಾವೇಶ ನಡೆಯಲಿದ್ದು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಬಳಿಕ ಏ. 11ರಿಂದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ಸುಳ್ಯದಲ್ಲಿ, ಏ. 12ರಂದು ಮೂಡಬಿದ್ರೆ, ಏ.13ರಂದು ಪುತ್ತೂರು, 14ರಂದು ಮಂಗಳೂರು ದಕ್ಷಿಣ, 15ರಂದು ಉಳ್ಳಾಲ, 16ರಂದು ಮಂಗಳೂರು ಉತ್ತರ, 17ರಂದು ಬೆಳ್ತಂಗಡಿ, 18ರಂದು ಬಂಟ್ವಾಳದಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಏ.19ರಿಂದ ಎರಡನೇ ಸುತ್ತಿನ ಮತಯಾಚನೆ ನಡೆಯಲಿದೆ. ಪಕ್ಷದ ವತಿಯಿಂದ ಪ್ರತಿ ಕ್ಷೇತ್ರದ ಮಾಜಿ ಶಾಸಕರು, ಹಾಲಿ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಪ್ರಚಾರ ಕಾರ್ಯ ನಡೆಯಲಿದೆ. ಮಂಗಳೂರು ದಕ್ಷಿಣದಲ್ಲಿ ಮಾಜಿ ಶಾಸಕರಾದ ಜೆ.ಆರ್. ಲೋಬೋ, ಐವನ್ ಡಿಸೋಜ ಅವರ ಉಸ್ತುವಾರಿಯಲ್ಲಿ, ಸುಳ್ಯದಲ್ಲಿ ಶಕುಂತಳಾ ಶೆಟ್ಟಿ ಮತ್ತು ಜಿ.ಕೃಷ್ಣಪ್ಪ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಉಸ್ತುವಾರಿಯನ್ನಾಗಿ ಪಕ್ಷದ ವರಿಷ್ಟರು ಮಾಜಿ ಸಚಿವ ರಮಾನಾಥ ರೈ ಅವರನ್ನು ನೇಮಕ ಮಾಡಿದ್ದು, ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಚಾರ ಸಭೆ ಹಾಗೂ ಕಾರ್ಯಕ್ರಮಗಳು ನಡೆಯಲಿದೆ. ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಕಾರ್ಯಕ್ರಮ ಈಗಾಗಲೇ ನಡೆದಿರುವುದರಿಂದ ಜಿಲ್ಲಾ ಮಟ್ಟದ ಇನ್ನೊಂದು ಕಾರ್ಯಕ್ರಮ ಪುತ್ತೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಪಕ್ಷದ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ವಿದ್ಯಾರ್ಥಿ ಕಾಂಗ್ರೆಸ್ ನಿಂದ ಬೆಳೆದಿರುವ ತನಗೆ ಆರು ಜಿಲ್ಲೆಗಳ ಹೊಸ ಜವಾಬ್ದಾರಿ ನೀಡಿದ್ದಾರೆ ಎಂದರು.
ಪಕ್ಷದ ದ.ಕ. ಜಿಲ್ಲಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ. ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಪ್ರಾಬಲ್ಯ ಇಲ್ಲ ಎಂಬ ಟೀಕೆಯನ್ನು ನಾನು ಒಪ್ಪಲಾರೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳನ್ನು ಗೆದ್ದಿರುವ ಇತಿಹಾಸ ಇದೆ. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಆರ್ಥಿಕ ಶಕ್ತಿ ನೀಡಿದ ಪಕ್ಷ ಕಾಂಗ್ರೆಸ್ ಆಗಿದ್ದು, ಗ್ಯಾರಂಟಿ ಖಂಡಿತ ನಮ್ಮ ಕೈ ಹಿಡಿಯಲಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹೊಸ ಮುಖ ಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ಕೂಗಿನಂತೆ ಪದ್ಮರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೀಗ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ನಾವು ಮಾಡಲಿದ್ದು, ಪದ್ಮರಾಜ್ ಗೆ ಸಾಟಿಯಾದ ಅಭ್ಯರ್ಥಿ ಜಿಲ್ಲೆಯಲ್ಲಿ ಇಲ್ಲವಾಗಿದ್ದು, ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.
ಅಭ್ಯರ್ಥಿ ಪದ್ಮರಾಜ್ ಆರ್., ಮುಖಂಡರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೋ, ಐವನ್ ಡಿಸೋಜ, ರಕ್ಷಿತ್ ಶಿವರಾಂ, ಶಾಹುಲ್ ಹಮೀದ್, ಇನಾಯತ್ ಅಲಿ, ಸದಾಶಿವ ಉಳ್ಳಾಲ್, ಯು.ಕೆ. ಮೋನು ಉಪಸ್ಥಿತರಿದ್ದರು.