ಇತ್ತೀಚಿನ ಸುದ್ದಿ
ಧರ್ಮಸ್ಥಳ | ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ಭೇಟಿ: ತಾಯಿ ಕುಸುಮಾವತಿ ಜತೆ ಮಾತುಕತೆ
01/09/2025, 20:24

ಧರ್ಮಸ್ಥಳ(reporterkarnataka.com): ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತನ್ನ ಪಕ್ಷದ ಇತರ ನಾಯಕರೊಂದಿಗೆ ಧರ್ಮಸ್ಥಳದ ಪಾಂಗಾಳದಲ್ಲಿರುವ ಸೌಜನ್ಯಾ ಮನೆಗೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ತಕ್ಷಣ ವಿಜಯೇಂದ್ರ ಅವರು ಪಾಂಗಾಳದಲ್ಲಿರುವ ಸೌಜನ್ಯ ಅವರ ಮನೆಗೆ ಭೇಟಿ ನೀಡಿ ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ಜತೆ ಮಾತುಕತೆ ನಡೆಸಿದರು. ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬೀಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಂತಾದವರು ಉಪಸ್ಥಿತರಿದ್ದರು.
ಸೌಜನ್ಯ ಅವರ ಕುಟುಂಬ ಕಳೆದ 13 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, ಬಿಜೆಪಿ ನಾಯಕರು ಯಾರೂ ಇದುವರೆಗೆ ಸೌಜನ್ಯ ನಿವಾಸಕ್ಕೆ ಭೇಟಿ ನೀಡಿರಲಿಲ್ಲ. ಸೌಜನ್ಯ ಹತ್ಯೆಗೀಡಾದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿದ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರಾಗಲಿ, ಅಂದಿನ ಗೃಹ ಸಚಿವ ಆರ್. ಆಶೋಕ್ ಆಗಲಿ, ಪಕ್ಷದ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಅವರಗಾಗಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದರೂ ದೇಗುಲದಿಂದ ಕೇವಲ 2 ಕಿಮೀ. ದೂರದಲ್ಲಿದ್ದ ಸೌಜನ್ಯಳ ಪಾಂಗಾಳದ ಮನೆಗೆ ಭೇಟಿ ನೀಡಿಲ್ಲ. ಹಾಗಾಗಿ
ಬಿಜೆಪಿ ರಾಜ್ಯಾಧ್ಯಕ್ಷರ ಈ ನಡೆ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ.
13 ವರ್ಷಗಳ ಹಿಂದೆ ಅತ್ಯಾಚಾರ ಹಾಗೂ ಹತ್ಯೆಗೀಡಾದ 17 ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಹತ್ಯೆಯಲ್ಲಿ ಪ್ರಭಾವಿಗಳ ಕೈವಾಡವಿದೆ ಎಂದು ಆಕೆಯ ತಾಯಿ ಕುಸುಮಾವತಿ ಅವರು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ, ಬಿಜೆಪಿಯಾಗಲಿ ಕಾಂಗ್ರೆಸ್ ಆಗಲಿ ಕುಸುಮಾವತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ದುರದೃಷ್ಟಕರ ವಿಷಯವೆಂದರೆ ಉಭಯ ಪಕ್ಷಗಳ ದ.ಕ. ಜಿಲ್ಲೆಯ ನಾಯಕರು ಕೂಡ ಈಗಲೂ ಮೌನಕ್ಕೆ ಶಣಾಗಿದ್ದಾರೆ