ಇತ್ತೀಚಿನ ಸುದ್ದಿ
Dharma Sabha |ಕಟ್ಟೆಮಾರು: ಮಂತ್ರ ದೇವತೆಗೆ ದೊಂದಿ ಬೆಳಕಿನಲ್ಲಿ ವೈಭವದ ಕೋಲೋತ್ಸವ; ಧಾರ್ಮಿಕ ಸಭೆ
12/02/2025, 19:45
![](https://reporterkarnataka.com/wp-content/uploads/2025/02/IMG-20250212-WA0047-1024x681.jpg)
ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ಕಟ್ಟೆಮಾರು ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿದ್ಯ , ಶ್ರೀ ಮಂತ್ರ ದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವ ದೊಂದಿ ಬೆಳಕಿನಲ್ಲಿ ವೈಭವದಲ್ಲಿ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಭಾರತವು ಅತಿ ಪುರಾತನ ಸನಾತನ ಸಂಸ್ಕೃತಿಯನ್ನು ಹೊಂದಿದ್ದು ವಿಶ್ವದಲ್ಲೇ ತನ್ನ ಸಂಸ್ಕೃತಿ ಸಂಸ್ಕಾರಗಳಿಂದ ಹೆಸರು ಪಡೆದ ದೇಶ. ಆದರೆ ಇಂದಿನ ಯುವ ಜನಾಂಗ ಪಾಶ್ಚಾತ್ಯದ ಕಡೆಗೆ ವಾಲುತ್ತಿರುವುದು ವಿಪರ್ಯಾಸವೇ ಆಗಿದೆ. ಇದಕ್ಕೆ ಮೂಲ ಕಾರಣ ಮನೆಗಳಲ್ಲಿ ಸಂಸ್ಕಾರಯುತ ಶಿಕ್ಷಣವು ಕಡಿಮೆಯಾಗುತ್ತಿರುವುದು ಎಂದರು.
ಮನೆಯಲ್ಲಿ ಮಗುವಿಗೆ ಧಾರ್ಮಿಕ ಶಿಕ್ಷಣ ನೀಡುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಭದ್ರ ಪಡಿಸಿಕೊಳ್ಳಬೇಕು. ಮನೆ ಮಂದಿ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿರುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ನಮ್ಮ ಹಿರಿಯರಿಂದ ಬಂದ ಸಂಸ್ಕೃತಿ ನಂಬಿಕೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ನುಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿ ಮಹನೀಯರನ್ನು ಸನ್ಮಾನಿಸಲಾಯಿತು. 14 ಮಂದಿಗೆ ಆರೋಗ್ಯ ಸಮಸ್ಯೆ, ಮನೆ ರಿಪೇರಿ, ಮದುವೆ, ಶಿಕ್ಷಣದ ಸಲುವಾಗಿ ಅರ್ಹರನ್ನು ಹುಡುಕಿ ಧನಸಹಾಯ ಮಾಡಲಾಯಿತು.
ಸರಕಾರಿ ಶಾಲೆಗಳಾದ ನಡುಮೊಗೇರು, ಏಮಾಜೆ, ಬೊಂಡಾಲ ಶಾಲೆಗಳಿಗೆ ಸ್ಮಾರ್ಟ್ ಟಿವಿ ಹಾಗೂ ನಲ್ಕೇಮಾರ್ ಶಾಲೆಗೆ ಲ್ಯಾಪ್ಟಾಪ್ ನೀಡಲಾಯಿತು.
“ಕಟ್ಟೆಮಾರ್ದ ಸ್ವರ್ಣ ತುಡಾರ್” ಮತ್ತು “ಕಟ್ಟೆಮಾರ್ದ ಕರ್ತೆದಿ ” ಆಲ್ಬಮ್ ಸಾಂಗ್ ಲೋಕಾರ್ಪಣೆ ಮಾಡಲಾಯಿತು. ಚಿಂತಾಮಣಿ ಕಡೇಶಿವಾಲಯ ಇವರಿಂದ ಭಕ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮಧ್ಯಪ್ರದೇಶ ಉಜ್ಜಯಿನಿಯ ಅಖಿಲ ಭಾರತೀಯ ನಾಥ ಸಂಪ್ರದಾಯ ಬರ್ತ್ರ್ ವರಿ ಗುಫಾ ಮಠಾಧೀಶರಾದ ಯೋಗಿ ಪೀರ್ ರಾಮನಾಥ್ ಜಿ ಮಹಾರಾಜ್, ಹಿಂದೂ ರಾಷ್ಟ್ರ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಸಂದೀಪ್ ನಾಥ್ , ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ,ಅಶೋಕ್ ಪೂಜಾರಿ ಮುಂಬೈ, ಪ್ರಶಾಂತ್ ಬನ್ನನ್ ಮಾಲಕರು ತಾಜ್ ರೆಸಿಡೆನ್ಸಿ ಮಂಗಳೂರು, ಆಶ್ರಿತ್ ಕಿಶನ್ ಹೆಬ್ಬೇವು ಫಾರ್ಮ್ಸ್ ಫೆನ್ ಕೊಂಡ, ತಾರನಾಥ ಪೂಜಾರಿ ಹೋಟೆಲ್ ನೀಲ್ ಕಮಲ್ ಉಡುಪಿ, ಪ್ರವೀಣ್ ಕೊಟ್ಟಾರಿ ರಾಯಪ್ಪ ಕೋಡಿ, ತಾರನಾಥ ಸಾಲಿಯಾನ್ , ನಟೇಶ್ ಪೂಜಾರಿ ಪುಳಿತಡಿ, ಧನರಾಜ್ ಪೂಜಾರಿ ಬೆಂಗಳೂರು, ಪುತ್ತೂರು ಮಾಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿನಯ ಸುವರ್ಣ, ಕಿಶೋರ್ ಕುಮಾರ್ ಕಟ್ಟೆಮಾರು ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯಕ್, ಚಿತ್ರನಟಿ ನವ್ಯ ಪೂಜಾರಿ ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ಶ್ರೀ ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರಿನ ಧರ್ಮದರ್ಶಿ ಶ್ರೀ ಮನೋಜ್ ಕುಮಾರ್ ಕಟ್ಟೆಮಾರು ಸ್ವಾಗತಿಸಿ, ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.