ಇತ್ತೀಚಿನ ಸುದ್ದಿ
ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್
07/01/2025, 22:38
ಚಿತ್ರ/ವರದಿ:ಅನುಷ್ ಪಂಡಿತ್ ಮಂಗಳೂರು ಧರ್ಮಸ್ಥಳ
info.reporterkarnataka@gmail.com
ದೇಶದಲ್ಲಿ ಸಮಗ್ರತೆ, ವೈವಿಧ್ಯತೆ, ಸೌಹಾರ್ದವನ್ನು ಉಳಿಸಿಕೊಳ್ಳಬೇಕಾಗಿದೆ.ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಹೇಳಿದರು.
ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಸರತಿ ಸಾಲಿನ ಬದಲಿಗೆ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯ ಸದನ ಲೋಕಾರ್ಪಣೆ
ಮಾಡಿ ಅವರು ಮಾತನಾಡಿದರು.
ಸಾಮಾಜಿಕ ಸದ್ಭಾವ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದ ಉಪ ರಾಷ್ಟ್ರಪತಿಯವರು ಭಾರತ ಮಾತೆ ಒಂದೇ ಎಂದಾಗ ಈ ಭಾವನೆ ಬರುತ್ತದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ, ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದರು.
ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ, ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ.
ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು, ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಅವರು ಮರೆಯಬಾರದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ? ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ ? ಎಂದು ಪ್ರಶ್ನಿಸಿದರು.
ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ, ಅತ್ಯುನ್ನತ ನಾಗರಿಕತೆ ನಮ್ಮದು ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಹುಟ್ಟಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸದ ಕ್ಯಾ.ಬ್ರಿಜೇಶ್ ಚೌಟ ಮುಂತಾದವರು ಉಪಸ್ಥಿತರಿದ್ದರು.
ಸೇನಾ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಉಪ ರಾಷ್ಟ್ರಪತಿಯವರನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸ್ವಾಗತಿಸಿದರು. ನಂತರ ಹೆಲಿಕಾಪ್ಟರ್ ನಲ್ಲಿ ಉಪರಾಷ್ಟ್ರಪತಿ ಧರ್ಮಸ್ಥಳಕ್ಕೆ ತೆರಳಿದರು.