ಇತ್ತೀಚಿನ ಸುದ್ದಿ
ದೇರಳಕಟ್ಟೆಯಲ್ಲಿ ಮಾದಕ ವಸ್ತು ಮಾರಾಟ: ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ; 5.11 ಲಕ್ಷ ಮೌಲ್ಯದ ಡ್ರಗ್ಸ್ ಸಹಿತ ಸೊತ್ತು ವಶ
30/12/2023, 23:46
ಮಂಗಳೂರು(reporterkarnataka.com): ನಗರದ ಹೊರವಲಯದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಎದುರು ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉಳ್ಳಾಲ ನಿವಾಸಿ ಮಹಮ್ಮದ್ ರಮೀಜ್ ಯಾನೆ ಲೆಮೇನ್ ಟಿ ರಮೀಜ್ (33) ಬಂಧಿತ ಆರೋಪಿ.
ಮಂಗಳೂರು ಸಿಸಿಬಿ ಪೊಲೀಸರು ಶನಿವಾರ ಉಳ್ಳಾಲ ತಾಲೂಕು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಎದುರು ಫೀಜಾ ಮಾಲ್ ಮೈದಾನದ ಬಳಿ ಒಬ್ಬ ವ್ಯಕ್ತಿ ಅಕ್ರಮವಾಗಿ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿತನನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಯು ಬೆಂಗಳೂರಿನಿಂದ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಖರೀದಿ ಮಾಡಿ ತಂದು ಉಳ್ಳಾಲ ಪರಿಸರದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದನು.
ಆರೋಪಿಯಿಂದ 100 ಗ್ರಾಂ ಎಂಡಿಎಂಎ ಮಾದಕ ವಸ್ತು, 2 ಮೊಬೈಲ್ ಫೋನ್, ಒಂದು ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 5,11,000 ರೂ. ಎಂದು ಅಂದಾಜಿಸಲಾಯಿತು.
ಆರೋಪಿತನ ಮೇಲೆ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ, ದರೋಡೆಗೆ ಸಂಚು, ಕೊಲೆಯತ್ನ ಹಾಗೂ ಕೊಣಾಜೆ ಠಾಣೆಯಲ್ಲಿ ದರೋಡೆ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ.
ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.