ಇತ್ತೀಚಿನ ಸುದ್ದಿ
ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳ ಬಾಕಿ ವೇತನ 2 ವಾರದೊಳಗೆ ಪಾವತಿಗೆ ಕ್ರಮ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ
25/06/2023, 14:38
ಬೆಂಗಳೂರು(reporterkarnataka.com): ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಬಾಕಿ ವೇತನ ಎರಡು ವಾರದೊಳಗೆ ಪಾವತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿಂದು ಡಯಾಲಿಸಿಸ್ ಸಿಬ್ಬಂದಿ ಪ್ರತಿನಿಧಿಗಳ ಸಮಸ್ಯೆಗಳನ್ನ ಆಲಿಸಿದ ಸಚಿವರು, ಸಮಸ್ಯೆಗಳನ್ನ ಒಂದೊಂದಾಗಿ ಬಗೆಹರಿಸುವುದಾಗಿ ಹೇಳಿದರು.
ರಾಜ್ಯದಾದ್ಯಂತ ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಪ್ರತಿನಿಧಿಗಳು ಇಂದು ಸಚಿವರನ್ನ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು. ಏಜನ್ಸಿಯವರಿಂದ ಸಮಯಕ್ಕೆ ಸರಿಯಾಗಿ ವೇತನ ದೊರೆಯುತ್ತಿಲ್ಲ. ಅಲ್ಲದೇ ಹೆಚ್ವುವರಿ ಭತ್ಯೆಗಳು ವರ್ಷಗಳಿಂದ ಬಾಕಿ ಇದೆ. ಇಲ್ಲಿಯವರೆಗೂ ಏಜನ್ಸಿಯವರಿಂದ ಪಿ.ಎಫ್ ಪಾವತಿಯಾಗಿಲ್ಲ ಎಂದು ತಮ್ಮ ಕಷ್ಟಗಳನ್ನ ಹೇಳಿಕೊಂಡರು. ಸಮಸ್ಯೆ ಹೀಗೆ ಮುಂದುವರಿದರೆ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 800 ಸಿಬ್ಬಂದಿಗಳು ನಿರ್ಧರಿಸಿದ್ದಾರೆ ಎಂದರು.
ಸಿಬ್ಬಂದಿಗಳ ಮನವೊಲಿಸುವಲ್ಲಿ ಯಶಸ್ವಿಯಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯ ಸ್ಥಗಿತವಾಗಬಾರದು. ಏಜನ್ಸಿಯವರೊಂದಿಗೆ ಮಾತುಕತೆ ನಡೆಸಿ ಬಾಕಿ ವೇತನ ಪಾವತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ.. ಏಜನ್ಸಿ ಗುತ್ತಿಗೆ ಅವಧಿ ಮುಗಿದಿರುವುದರಿಂದ ವೇತನ ಪಾವತಿಯಲ್ಲಿ ಸಮಸ್ಯೆಯಾಗಿದ್ದು, ಈಗಿರುವ ಸಂಜೀವಿನಿ ಏಜನ್ಸಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಸಿಎಂ ಜೊತೆ ಕೂಡ ಚರ್ಚೆ ನಡೆಸಿ, ಡಯಾಲಿಸಿಸ್ ಕೇಂದ್ರಗಳಲ್ಲಿ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಎರಡು ವಾರದೊಳಗೆ ಬಾಕಿ ಇರುವ ಭತ್ಯೆ ಪಾವತಿಗೆ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ತಲಾ 2 ಸಾವಿರದಂತೆ ಡೆಸೆಂಬರ್ ತಿಂಗಳ ವರೆಗಿನ ಭತ್ಯೆ ಕೊಡಿಸುವುದಾಗಿ ಸಿಬ್ಬಂದಿಗಳಿಗೆ ಇದೇ ವೇಳೆ ಸಚಿವರು ಭರವಸೆ ನೀಡಿದರು. ಅಲ್ಲದೇ ಮೇ ಮತ್ತು ಜೂನ್ ತಿಂಗಳ ವೇತನ 15 ದಿನದೊಳಗೆ ಸಿಬ್ಬಂದಿಗಳಿಗೆ ಪಾವತಿಸುವುದಾಗಿ ತಿಳಿಸಿದರು.
ಏಜನ್ಸಿಯಿಂದ ಪಿಎಫ್ ಮತ್ತು ಇಎಸ್ ಐ ಪಿ ದೊರಕಿಸಿಕೊಡುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ. 15 ದಿನಗಳ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಸಚಿವ ಗುಂಡೂರಾವ್ ಸಿಬ್ಬಂದಿಗಳಿಗೆ ತಿಳಿಸಿದರು. ಸಚಿವರ ಸಕಾರಾತ್ಮಕ ಸ್ಪಂದನೆಗೆ ಸಮಾಧಾನಗೊಂಡ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿಗಳು ಎಂದಿನಂತೆ ಕಾರ್ಯ ಮುಂದುವರಿಸಲು ನಿರ್ಧರಿಸಿದ್ದಾರೆ.