ಇತ್ತೀಚಿನ ಸುದ್ದಿ
ದಾವಣಗೆರೆ: ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ ವಿರೋಧಿಸಿ ಮಾರ್ಚ್ 28ರಂದು ಡಿಸಿ ಸರ್ಕಲ್ ನಿಂದ ಐಜಿಪಿ ಕಚೇರಿಗೆ ಪಾದಯಾತ್ರೆ
22/03/2023, 19:47

ದಾವಣಗೆರೆ(reporterkarnataka.com): ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಬಿ ಟಿವಿ ವರದಿಗಾರ ಮೆಹಬೂಬ್ ಮುನವಳ್ಳಿ ಅವರು ಕೊಲೆ ಆರೋಪಿಗಳ ಜತೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಬಂಧಿಸಿದ ಕ್ರಮವನ್ನು ವಿರೋಧಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮಾರ್ಚ್ 28ರಂದು ದಾವಣಗೆರೆ ನಗರ ಡಿಸಿ ಸರ್ಕಲ್ ನಿಂದ ಐಜಿಪಿ ಕಾರ್ಯಾಲಯದ ವರೆಗೆ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಕಾನಿಪ ಧ್ವನಿ ರಾಜ್ಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಯ ಪದಾಧಿಕಾರಿಗಳೆಲ್ಲ ಸೇರಿ ದಾವಣಗೆರೆ ಐಜಿಪಿ ಅವರಿಗೆ ಬಿ ಟಿವಿ
ವರದಿಗಾರರಾದ ಮೆಹಬೂಬ್ ಮುನವಳ್ಳಿ ಅವರಿಗೆ ಆದ ಅನ್ಯಾಯವನ್ನು ಪುನರ್ ಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸಲು ಮನವಿ ಸಲ್ಲಿಸಲಾಗುವುದು.
ಹಾಗೆ ಮುನವಳ್ಳಿ ಅವರನ್ನು ಕಳೆದ ವಾರ ಕೊಲೆ ಆರೋಪಿಗಳ ಜೊತೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ದಾವಣಗೆರೆ ಜಿಲ್ಲೆ ನ್ಯಾಮತಿ ಪೋಲಿಸರು ಬಂಧಿಸಿರುವುದನ್ನು ವಿರೋಧಿಸಿ ನಾಳೆಯಿಂದ ರಾಜ್ಯಾದ್ಯಂತ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಾನಿಪ ಧ್ವನಿಯ ತಾಲೂಕು ಪದಾಧಿಕಾರಿಗಳು ತಹಶೀಲ್ದಾರ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಈ ಘಟನೆಯನ್ನು ಖಂಡಿಸಿ ರಾಜ್ಯಪಾಲರಿಗೆ ತಲುಪುವಂತೆ ಮನವಿ ಸಲ್ಲಿಸಬೇಕೆಂದು ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು ಕರೆ ನೀಡಿದ್ದಾರೆ.