ಇತ್ತೀಚಿನ ಸುದ್ದಿ
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಶಿವರಾತ್ರಿ ಜಾಗರಣೆಯಲ್ಲಿ ಮಿಂದೆದ್ದ ಶಿವಭಕ್ತರು
09/03/2024, 17:44

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಪವಿತ್ರ ಪುಣ್ಯಕ್ಷೇತ್ರ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಹಿಂದೂಗಳ ಪವಿತ್ರ ಹಬ್ಬ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.
ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಭಕ್ತರಿಗಾಗಿ ಶಿವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.
ರಾಜ್ಯವು ಸೇರಿದಂತೆ ವಿವಿಧ ಕಡೆಯಿಂದ ದೇವಾಲಯಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಕಪಿಲಾ ನದಿಯಲ್ಲಿ ಸ್ನಾನ ಮಾಡಿ ವಿವಿಧ ಸೇವೆಗಳನ್ನು ಸಲ್ಲಿಸಿದ ಭಕ್ತರು ಸಾಲಿನಲ್ಲಿ ಬಂದು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ತಮ್ಮ ಭಕ್ತಿ ಭಾವ ಮೆರೆದರು. ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಗಳನ್ನು ದೇವಾಲಯದ ಶಿವಲಿಂಗಗಳಿಗೆ ಅರ್ಪಿಸಿದರು. ಶಿವರಾತ್ರಿ ಹಾಗೂ ಜಾಗರಣೆ ಪ್ರಯುಕ್ತ ದೇವಾಲಯದ ಒಳ ಹಾಗೂ ಹೊರ ಆವರಣವನ್ನು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಇದೇ ಸಂದರ್ಭ ಜಾಗರಣೆ ಮಾಡುವ ಭಕ್ತರಿಗೆ ಅನುಕೂಲವಾಗುವಂತೆ ದೇವಾಲಯದ ಬಳಿ ಅಹೋರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಸಿಮ್ ಈವೆಂಟ್ಸ್ ಕಲಾತಂಡದವರು ಅಹೋರಾತ್ರಿ ನಡೆಸಿಕೊಟ್ಟ ಭಕ್ತಿ ಗೀತೆ ಜನಪದ ಗೀತೆ ದೇವರ ನಾಮ ಹಾಗೂ ವಿವಿಧ ಬಗೆಯ ನೃತ್ಯಗಳು ಭಕ್ತರ ಮನಸೂರೆಗೊಂಡವು.
ಜಾಗರಣೆಗಾಗಿ ಬಂದ ಭಕ್ತರಲ್ಲಿ ಬಹು ಪಾಲು ನಿದ್ರೆಗೆ ಜಾರಿದರೆ ಕೆಲವೇ ಕೆಲವು ಭಕ್ತರು ಶಿವನಾಮ ಪಠಣೆ ಮಾಡಿ ಅರ್ಥಪೂರ್ಣ ಜಾಗರಣೆ ಆಚರಿಸಿದರೆ ಹೆಚ್ಚು ಭಕ್ತರು ಮೊಬೈಲ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವ ಮೂಲಕ ಜಾಗರಣೆಗೆ ತೆರೆ ಎಳೆದರು.
ದೇವಾಲಯದ ಸುತ್ತಮುತ್ತ ಅಹೋರಾತ್ರಿ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದ ಕಾರಣ ಒಂದು ರೀತಿ ಜಾತ್ರೆಯೋಪಾದಿಯಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು.
ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಮಾತನಾಡಿ ಶಿವರಾತ್ರಿ ವಿಶೇಷತೆ ಬಗ್ಗೆ ವಿವರಿಸಿದರು.