ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ: ಶ್ರದ್ಧಾ- ಭಕ್ತಿಯಿಂದ ಗುಡ್ ಫ್ರೈಡೇ ಆಚರಣೆ; ಬಿಷಪರಿಂದ ವಿಶೇಷ ಪ್ರಾರ್ಥನೆ
29/03/2024, 20:46

ಮಂಗಳೂರು(reporterkarnataka.com): ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಕ್ರೈಸ್ತ ಸಮುದಾಯದವರು ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಪವಿತ್ರ ದಿನವಾದ ಶುಭ ಶುಕ್ರವಾರ(ಗುಡ್ ಫ್ರೈ ಡೇ) ಆಚರಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‍ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಕ್ರೈಸ್ತರು ಎಲ್ಲ ಧಾರ್ಮಿಕ ವಿಧಿ ವಿಧಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನಗರದ ಕೊಡಿಯಾಲ್ ಬೈಲ್‍ನಲ್ಲಿರುವ ಚಾಪೆಲ್‍ನಲ್ಲಿ ಜರಗಿದ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಶಿಲುಬೆಯ ಹಾದಿ: ಕೆಲವು ಚರ್ಚ್‍ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥಿಸಿದರು. ಸಂಜೆ ಚರ್ಚ್‍ಗಳಲ್ಲಿ ನಡೆದ ಪ್ರಾರ್ಥನಾ ವಿಧಿಗಳಲ್ಲಿ ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಗಳಿಗೆಗಳ ಕಥನವನ್ನು ಓದಿದರು. ಬಳಿಕ ಪ್ರವಚನ ನೀಡಿದರು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ, ಶಿಲುಬೆಯ ಆರಾಧನೆ ಕಾರ್ಯಕ್ರಮ ನಡೆಯಿತು.
ಸಮಾಜದ ನಾನಾ 10 ವಿಚಾರಗಳ ಕುರಿತು ವಿಶೇಷ ಪ್ರಾರ್ಥನೆ ಸಾಗಿತು. ಇದರ ಜತೆಯಲ್ಲಿ ಶಿಲುಬೆಗೆ ನಮನ, ಶಿಲುಬೆಯ ಆರಾಧನೆಯ ಕಾರ್ಯಕ್ರಮಗಳು ನಡೆಯಿತು. *ಬಲಿಪೂಜೆ ಇಲ್ಲ:* ಕಥೋಲಿಕ್ ಚರ್ಚ್ ಗಳಲ್ಲಿ ಶುಭ ಶುಕ್ರವಾರದಂದು ಯಾವುದೇ ಬಲಿಪೂಜೆಗಳು ನಡೆಯುವುದಿಲ್ಲ. ಇದರ ಬದಲು ಶುಭ ಶುಕ್ರವಾರದಂದು ಬೆಳಗ್ಗೆಯಿಂದ ಮಧ್ಯಾಹ್ನ 12ರ ತನಕ ಶಿಲುಬೆಯ ಹಾದಿಯ ಭಕ್ತಿಯ ಕಾರ್ಯಕ್ರಮಗಳು ಸಾಗಿತು. ಕೆಲವೊಂದು ಚರ್ಚ್‍ಗಳಲ್ಲಿ ಶಿಲುಬೆಯ ಹಾದಿಯ ಬಳಿಕ ಶಿಲುಬೆಗೆ ಏರಿದ ಯೇಸುವಿನ ಪ್ರತಿಮೆಯನ್ನು ಮೆರವಣಿಗೆ ನಡೆದರೆ ಇನ್ನು ಕೆಲವು ಚರ್ಚ್‍ಗಳಲ್ಲಿ ಶಿಲುಬೆಯ ಹಾದಿ ಕಾರ್ಯಕ್ರಮ ಮಾತ್ರ ಸಾಗಿತು. ಕೆಲವು ಚರ್ಚ್‍ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನು ಒಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಕಾರ್ಯ ನಡೆಯಿತು. ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥನೆಗಳು ಸಾಗಿತು.
*ಜಾಗರಣೆ:* ಮಾ.30 ರಂದು ಯೇಸುವಿನ ಪುನರುತ್ಥಾನದ ಜಾಗರಣೆ ಆಚರಣೆ ಸಾಗಲಿದೆ. ಅಂದು ಸಂಜೆ ಎಲ್ಲ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆಗಳು ನಡೆಯಲಿದೆ. ಯೇಸು ಮರಣದ ಬಳಿಕ ಪುನರುತ್ಥಾನಗೊಳ್ಳುತ್ತಾರೆ ಎನ್ನುವ ನಂಬಿಕೆಯ ಆಧಾರದಲ್ಲಿ ಶನಿವಾರ ಜಾಗರಣೆ ಹಬ್ಬವನ್ನು ಆಚರಣೆ ಮಾಡುತ್ತಾರೆ. ಮಾ.31ರಂದು ಈಸ್ಟರ್ ಭಾನುವಾರದ ಆಚರಣೆಗಳು ನಡೆಯಲಿದೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಅವರು ಜಾಗರಣೆಯ ಬಲಿಪೂಜೆಯನ್ನು ರೊಸಾರಿಯೋ ಕೆಥೆಡ್ರಲ್ ನಲ್ಲಿ ನಡೆಸಲಿದ್ದಾರೆ. ಈಸ್ಟರ್ ಹಬ್ಬದ ಭಾನುವಾರದ ಬಲಿಪೂಜೆಯನ್ನು ಅವರು ನಿಡ್ಡೋಡಿಯ ಲಿಟ್ಲ್ ಫ್ಲವರ್ ಚರ್ಚ್ ನಲ್ಲಿ ನಡೆಸಲಿದ್ದಾರೆ.