ಇತ್ತೀಚಿನ ಸುದ್ದಿ
ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರನ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆ: ಭಕ್ತ ಸಾಗರದ ನಿರೀಕ್ಷೆ; ಅಧಿಕಾರಿಗಳು ಅಲರ್ಟ್
21/03/2024, 13:37

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ದೊಡ್ಡ ಜಾತ್ರಾ ಮಹೋತ್ಸವವು ಮಾರ್ಚ್ 22ರಂದು ಶುಕ್ರವಾರ ಸಡಗರ ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಜರುಗಲಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿ ಸಾಗುವ 108 ಅಡಿ ಎತ್ತರದ ಗೌತಮ ಪಂಚ ಮಹಾರಥೋತ್ಸವಕ್ಕೆ ನಂಜನಗೂಡು ಮದುವಣಗಿತ್ತಿಯಂತೆ ಸಿಂಗಾರಗೊಂಡು ನಿಂತಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಭಕ್ತ ಸಾಗರ ನಂಜುಂಡೇಶ್ವರನ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು, ತಂಪು ಪಾನೀಯ, ತಾತ್ಕಾಲಿಕ ಶೌಚಾಲಯಗಳು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇವಾಲಯದ ಸುತ್ತ ಹಾಗೂ ಪಟ್ಟಣದ ರಥ ಬೀದಿಯಲ್ಲಿ ಸುಗಮ ರೀತಿಯಲ್ಲಿ ರಥ ಸಂಚರಿಸಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗೆಯೇ ಭಕ್ತರ ರಕ್ಷಣೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಶಾಸಕರಾದ ದರ್ಶನ್ ನಾರಾಯಣ್, ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸುಗಮ ಜಾತ್ರೆ ನಡೆಸಲು ಅಲರ್ಟ್ ಆಗಿದ್ದಾರೆ. ಕಪಿಲಾ ನದಿಯ ದಡದ ಸುತ್ತ ಮತ್ತು ಹಾಗೂ ರಥ ಸಂಚರಿಸುವ ಕಡೆ ಹೆಚ್ಚುವರಿ
ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟೆಚರ ವಹಿಸಲಾಗಿದೆ. ಅಲ್ಲದೆ ರಥದ ದುರಸ್ತಿ ಹಾಗು ಸ್ವಚ್ಛತೆ ಸೇರಿದಂತೆ ದೇವಾಲಯದ ಸುತ್ತಮುತ್ತ ರಸ್ತೆ ದುರಸ್ತಿ ಕಾಮಗಾರಿ ಭರದಿಂದ ಸಾಗಿದೆ. ದೇವಾಲಯ ಹಾಗೂ ನಗರದ ಸೌಂದರ್ಯಕ್ಕಾಗಿ ಇಡೀ ನಂಜನಗೂಡು ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಂಗೊಳಿಸುತ್ತಿದೆ.