ಇತ್ತೀಚಿನ ಸುದ್ದಿ
ದ.ಕ. ಲೋಕಸಭೆ ಕ್ಷೇತ್ರ: 3 ದಶಕಗಳ ಬಿಜೆಪಿ ನಾಗಾಲೋಟಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಬ್ರೇಕ್; ತೀವ್ರ ಸ್ಪರ್ಧೆ
11/04/2024, 12:09

ಮಂಗಳೂರು(reporterkarnataka.com): ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳು ತೀವ್ರ ಹಣಾಹಣಿಯಲ್ಲಿ ತೊಡಗಿವೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ರಂಗ ರಂಗೇರಲಾರಂಭಿಸಿದೆ. ಆರೋಪ- ಪ್ರತ್ಯಾರೋಪ, ಪ್ರಚಾರ- ಅಪಪ್ರಚಾರ ಎಲ್ಲ ಶುರುವಾಗಿದೆ. ಕಳೆದ 3 ದಶಕಗಳ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಕಳೆದ 35 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದೆ. ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ವಿ. ಧನಂಜಯ ಕುಮಾರ್ ಅವರು ಪ್ರಥಮ ಬಾರಿಗೆ ಸೋಲಿಸುವ ಮೂಲಕ ಇಲ್ಲಿ ಬಿಜೆಪಿ ಅಧ್ಯಾಯ ಆರಂಭವಾಗಿತ್ತು. ಧನಂಜಯ ಕುಮಾರ್ ಅವರು ಎರಡು ಬಾರಿ ಸಂಸದರಾದ ಬಳಿಕ ಡಿ.ವಿ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಅವರು ಇಲ್ಲಿಂದ ಸತತವಾಗಿ ನಿರಾಯಸದಿಂದ ಆಯ್ಕೆಯಾಗುತ್ತಿದ್ದರು. ಕಾರಣ ಹಿಂದುತ್ವ ಎನ್ನುವ ಮಾಂತ್ರಿಕ ಪದ. ಆದರೆ ಈ ಭಾರೀ ಚಿತ್ರಣ ಬದಲಾಗಿದೆ. ಕೆಪಿಸಿಸಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಅವರೇ ಮಂಗಳೂರಿನ ಯುವ ನ್ಯಾಯವಾದಿ, ಗುರು ಬೆಳದಿಂಗಳು ರುವಾರಿ, ಸರ್ವ ಧರ್ಮವನ್ನು ಗೌರವಿಸುವ ಪದ್ಮರಾಜ್ ಆರ್. ಪೂಜಾರಿ. ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಗರಡಿಯಲ್ಲಿ ಪಳಗಿರುವ ಪದ್ಮರಾಜ್ ಅವರು ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಸೌಹಾರ್ದತೆಯ ಬದುಕಿಗೆ ಪ್ರಾಮುಖ್ಯತೆ ನೀಡುವ ಅವರು ಇನ್ನೊಂದು ಧರ್ಮಕ್ಕೆ ಗೌರವ ನೀಡುವ ಪರ ಧರ್ಮ ಸಹಿಷ್ಣುತೆಯನ್ನು ಬೋಧಿಸುವ
ಹಿಂದೂ ಧರ್ಮದ ಪ್ರತೀಕವಾಗಿ ಹೊರಹೊಮ್ಮಿದ್ದಾರೆ. ಕುದ್ರೋಳಿ ದೇವಾಲಯದಲ್ಲಿ ಕಳೆದ 28 ವರ್ಷಗಳಿಂದ ಗೋಕರ್ಣನಾಥನ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಹಿಂದೂ ಧರ್ವದ ಸೇವೆಗೆ ಹೊಸ ವ್ಯಾಖ್ಯಾನ ಬರೆದಿದ್ದಾರೆ. ಈ ಎಲ್ಲ ಸಕರಾತ್ಮಕ ಅಂಶಗಳ ಮೂಲಕ ದ.ಕ. ಲೋಕಸಭೆ ಕ್ಷೇತ್ರದಲ್ಲಿ ಕಳೆದ 35 ವರ್ಷಗಳ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಾರೆ. ಹಿಂದುತ್ವದ ಪದ ಬಳಸಿ ಪ್ರತಿ ಬಾರಿ ವಿಜಯ ಪತಾಕೆ ಹಾರಿಸುವ ಬಿಜೆಪಿಗೆ ಪದ್ಮರಾಜ್ ಅವರು ಟಕ್ಕರ್ ನೀಡಿದ್ದಾರೆ. ಕಳೆದ 3 ದಶಕದಲ್ಲೇ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಜಂಘಾಬಲ ಕಗ್ಗಿಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ, ಪ್ರಚಾರ ನಡೆಸುವುದು ಬಿಜೆಪಿ ಅನಿವಾರ್ಯವಾಗಿದೆ. ಆದರೆ ಈ ವಿಷಯದಲ್ಲಿಯೂ ಬಿಜೆಪಿಗೆ ದೊಡ್ಡ ಆಘಾತ ಎದುರಾಗಿದೆ. ಮಂಗಳೂರಿನ ಬಂಗ್ರ ಕೂಳೂರಿನಲ್ಲಿ ನಡೆಯಬೇಕಿದ್ದ ಪ್ರಧಾನಿಯವರ ಸಾರ್ವಜನಿಕ ಸಭೆ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಮಂಗಳೂರಿನಲ್ಲಿ ಮೋದಿ ಅವರ ರೋಡ್ ಶೋ ಮಾತ್ರ ನಡೆಯಲಿದೆ. ಮೈಸೂರಿನಲ್ಲಿ ಒಡೆಯರ್ ಪರವಾಗಿ ಸಾರ್ವಜನಿಕ ಸಭೆ ನಡೆಯಲಿದೆ. ಇದೆಲ್ಲ ಒಂದು ರೀತಿಯಲ್ಲಿ ಇಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣ ನಿರ್ಮಿಸಲಿದೆ ಎನ್ನಲಾಗಿದೆ.