ಇತ್ತೀಚಿನ ಸುದ್ದಿ
ದ.ಕ. ಲೋಕಸಭೆ ಕ್ಷೇತ್ರ: ಕಾಂಗ್ರೆಸ್- ಬಿಜೆಪಿ ನಡುವೆ ತೀವ್ರಗೊಂಡ ಪೈಪೋಟಿ; ಜಯದ ಮಾಲೆ ಯಾರ ಕೊರಳಿಗೆ?
09/04/2024, 17:38

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಕರಾವಳಿಯಲ್ಲಿ ಬಿಸಿಲ ಧಗೆಯೊಂದಿಗೆ ಚುನಾವಣಾ ಕಾವು ನಿಧಾನವಾಗಿ ಏರತೊಡಗಿದೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ಇಬ್ಬರು ಯುವ ಹೊಸ ಮುಖಗಳನ್ನು ಕಣಕ್ಕಿಳಿಸಲಾಗಿದೆ. ಕಳೆದ ಮೂರುವರೆ ದಶಕದ ಇತಿಹಾಸದಲ್ಲೇ ಭಾರೀ ಪೈಪೋಟಿ ಏರ್ಪಟ್ಟಿದೆ.
ಬಿಜೆಪಿಯು ಮಾಜಿ ಸೇನಾಧಿಕಾರಿ ಕ್ಯಾಪ್ಟನ್ ಬ್ರಜೇಶ್ ಚೌಟ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಅಳೆದು ತೂಗಿ ನ್ಯಾಯವಾದಿ ಪದ್ಮರಾಜ್ ರಾಮಯ್ಯ ಅವರನ್ನು ಅಖಾಡಕ್ಕಿಳಿಸಿದೆ. ಇವರಿಬ್ಬರೂ ಕೂಡ ಯುವ ನಾಯಕರೇ. ಬಿಜೆಪಿ ಅಭ್ಯರ್ಥಿ ಹಿಂದುತ್ವ, ರಾಮ ಮಂದಿರ, ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಅಭಿವೃದ್ಧಿ, ಸಹಬಾಳ್ವೆ, ಸೌಹಾರ್ದತೆ, ಮಾನವೀಯತೆ, ಪರೋಪಕಾರ ಮುಂತಾದ ವಿಷಯಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ. ಬ್ರಜೇಶ್ ಚೌಟ ಹಾಗೂ ಪದ್ಮರಾಜ್ ಇಬ್ಬರೂ
ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಇಬ್ಬರೂ ಸುಶಿಕ್ಷಿತರು. ಬ್ರಜೇಶ್ ಅವರು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಡಿಫೆನ್ಸ್ ಅಕಾಡೆಮಿ ಸೇರಿ, ಅಲ್ಲಿ ತರಬೇತಿ ಪಡೆದು ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಗೇರಿದವರು. ಸಂಘ ಪರಿವಾರದ ಒಡನಾಟದಿಂದ ರಾಜಕೀಯವಾಗಿ ಬಿಜೆಪಿಯಲ್ಲಿ ಒಲವು ಹೊಂದಿ ದಶಕಗಳ ಕಾಲ ಪಕ್ಷದಲ್ಲಿ ದುಡಿದಿದ್ದಾರೆ. ಮಂಗಳೂರು ಕಂಬಳ ಆರಂಭಿದ ಕೀರ್ತಿ ಅವರದ್ದಾಗಿದೆ. ಹಾಗೆ ಪದ್ಮರಾಜ್ ಅವರು ಪುಂಜಾಕಟ್ಟೆಯಲ್ಲಿ ಪ್ರೌಢ ಹಾಗೂ ಪಿಯು ಶಿಕ್ಷಣ ಪಡೆದು ಮಂಗಳೂರಿನಲ್ಲಿ ಕಾನೂನು ಪದವಿ ಓದಿದವರು. ಶೈಕ್ಷಣಿಕವಾಗಿ ತುಂಬಾ ಗಟ್ಟಿಗರು. ಕೇಂದ್ರ ಮಾಜಿ ಸಚಿವ, ಪ್ರಾಮಾಣಿಕ ರಾಜಕಾರಣಿ ಎಂದೇ ಖ್ಯಾತರಾದ ಬಿ. ಜನಾರ್ದನ ಪೂಜಾರಿ ಅವರ ಗರಡಿಯಲ್ಲಿ ಬೆಳೆದು, ಅವರ ಪಟ್ಟಶಿಷ್ಯ ಎಂದು ಕರೆಸಿಕೊಂಡವರು.
ಮಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದ ಪದ್ಮರಾಜ್ ಅವರು ತನ್ನ ವೃತ್ತಿ ಜತೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡವರು. ಗುರು ಬೆಳದಿಂಗಳು ಎಂಬ ಸಂಸ್ಥೆಯನ್ನು ಕಟ್ಟಿ ಬಡವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ನಾಗೂರಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಮೊದಲಿಗೆ ಆಟೋ ಡ್ರೈವರ್ ಸಹಾಯಕ್ಕೆ ಧಾವಿಸಿದವರು ಇದೇ ಪದ್ಮರಾಜ್ ಅವರು. ಸಂತ್ರಸ್ತ ಆಟೋ ಚಾಲಕನಿಗೆ ಸುಸಜ್ಜಿತ ಮನೆಯನ್ನು ಗುರು ಬೆಳದಿಂಗಳು ಸಂಘಟನೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಾಗಲೂ ಯಾವುದೇ ಜಾತಿ, ರಾಜಕೀಯ ನೋಡದೆ ಪದ್ಮರಾಜ್ ಅವರು ನೆಟ್ಟಾರ್ ಕುಟುಂಬದ ನೆರವಿಗೆ ಧಾವಿಸಿದ್ದರು. ವಿಶೇಷವೆಂದರೆ, ಈ ಎರಡೂ ಘಟನೆಗಳು ನಡೆದಾಗಲೂ ಪದ್ಮರಾಜ್ ಅವರು ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಿರಲಿಲ್ಲ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಯೂ ಆಗಿರಲಿಲ್ಲ. ಕೇವಲ ಸಾಮಾಜಿಕ ಕಳಕಳಿ, ಮಾನವೀಯ ಹೃದಯ ಪದ್ಮರಾಜ್ ಅವರನ್ನು ಈ ಕಾರ್ಯದಲ್ಲಿ ಕೈಜೋಡಿಸುವಂತೆ ಮಾಡಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಪದ್ಮರಾಜ್ ಅವರು ಕಳೆದ 25 ವರ್ಷಗಳಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವರ ಸೇವೆ ಮಾಡುತ್ತಿದ್ದಾರೆ. ದೇಗುಲದ ಕೋಶಾಧಿಕಾರಿಯಾಗಿ ಸೇವಾನಿರತರಾಗಿದ್ದಾರೆ. ಕುದ್ರೋಳಿಯ ದಸರಾ ಮಹೋತ್ಸವದ ಸಂದರ್ಭದಲ್ಲಿ ಹಗಳಿರುಳು ದುಡಿಯುತ್ತಾರೆ. ಸರ್ವ ಧರ್ಮಗಳ ಸಂಗಮದ
ದಸರಾ ಮೆರವಣಿಗೆಗೆ ಸಾಥ್ ನೀಡುತ್ತಾರೆ.
ಇದಕ್ಕಿಂತ ದೊಡ್ಡ ಹಿಂದೂ ಮತ್ತು ಹಿಂದೂತ್ವವಾದಿ ನಮಗೆ ಬೇಕೇ ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಾರೆ.
ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿವೆ. ದಿನ ಕಳೆದಂತೆ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಜಯದ ಮಾಲೆ ಯಾರ ಕೊರಳಿಗೆ ಎನ್ನುವ ತೀರ್ಮಾನ ಮಾತ್ರ ಮತದಾರರದ್ದಾಗಿದೆ.