ಇತ್ತೀಚಿನ ಸುದ್ದಿ
ದ.ಕ. ಜಿಲ್ಲೆಯಲ್ಲಿ ಎನ್ ಐಎ ದಾಳಿ: ಪುತ್ತೂರು ಕಾರ್ಯಾಚರಣೆಯಲ್ಲಿ 4 ಮಂದಿ ವಶಕ್ಕೆ?
31/05/2023, 12:11
ಮಂಗಳೂರು(reporterkarnataka.com): ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಂಚಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯ ಸುಮಾರು 16 ಕಡೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಬುಧವಾರ ಮುಂಜಾನೆ ದಾಳಿ ನಡೆಸಿದ್ದು, 4 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಪುತ್ತೂರಿನ ಕುಂಬ್ರ ಸೇರಿದಂತೆ 3 ಕಡೆಗಳಿಗೆ ಎನ್ ಐಎ ತಂಡ ಇಂದು ಮುಂಜಾನೆ 5 ಗಂಟೆಯ ವೇಳೆಗೆ ದಾಳಿ ನಡೆಸಿದ್ದು, ಒಟ್ಟು 4 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಹವಾಲಾ ಮೂಲಕ ಹಣ ವರ್ಗಾವಣೆಯಾಗಿದೆ. ಕ್ರಿಪ್ಟೋ ಕರೆನ್ಸಿ ಮೂಲಕವೂ ಹಣ ಕೈಬದಲಾಗಿದೆ ಎನ್ನಲಾಗಿದೆ.
ಬುಧವಾರ ಬೆಳ್ಳಂಬೆಳಗೆ ನಡೆದ ಈ ದಾಳಿಯಲ್ಲಿ ಮನೆ, ಕಚೇರಿ ಕೂಡ ಸೇರಿದೆ.
ವಿಧ್ವಂಸಕ ಕೃತ್ಯ, ಹವಾಲಾ ಹಣ ಸೇರಿದಂತೆ ಹಲವು ವಿಷಯಗಳ ಕುರಿತು ತನಿಖೆ ನಡೆಸಲು ದಾಳಿ ನಡೆಸಲಾಗಿದೆ. ಬಂಟ್ವಾಳ, ವಿಟ್ಲ, ವೇಣೂರು, ಬೆಳ್ತಂಗಡಿ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ 16 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.