ಇತ್ತೀಚಿನ ಸುದ್ದಿ
ದ.ಕ. ಜಿಲ್ಲೆ: ವಸತಿ ಯೋಜನೆಯ ಅರ್ಹ 8 ಸಾವಿರ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ತಾಕೀತು
24/03/2023, 10:59
ಮಂಗಳೂರು (reporterkarnataka.com): ಪ್ರಧಾನ ಮಂತ್ರಿ ಆವಾಸ್ ಯೋಜನೆ, ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಜಿಲ್ಲೆಯ ಅರ್ಹ 8 ಸಾವಿರ ಫಲಾನುಭವಿಗಳಿಗೆ ನಿಗದಿ ಪಡಿಸಿದ ಕಾಲಮಿತಿಯೊಳಗೆ ಸಾಲಸೌಲಭ್ಯ ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಬ್ಯಾಂಕುಗಳ ಮ್ಯಾನೇಜರುಗಳಿಗೆ ಕಟ್ಟುನಿಟ್ಟು ಸೂಚನೆ ನೀಡಿದರು.
ಅವರು ಗುರುವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಸಲಹಾ ಸಮಿತಿ (ಡಿಸಿಸಿ) ಹಾಗೂ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ (ಡಿಸಿಎಲ್ ಆರ್)ಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫಲಾನುಭವಿಗಳು ನಿರ್ಮಿಸಿಕೊಳ್ಳುವ ಮನೆಯ ಹಂತಗಳಿಗೆ ಅನುಸಾರ ಬ್ಯಾಂಕುಗಳು ಕಾಲಮಿತಿಯಲ್ಲಿ ಸಾಲ ಸೌಲಭ್ಯ ನೀಡಬೇಕು, ಪಿಎಂಎವೈ, ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಒದಗಿಸದಿರುವುದು ಕಂಡು ಬಂದಿದೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮ ಮಟ್ಟದಲ್ಲಿ ಸಂಬಂಧಿಸಿದ ಬ್ಯಾಂಕ್‍ಗಳಿಗೆ ಅರ್ಹ ಫಲಾನುಭವಿಗಳ ಪಟ್ಟಿ ನೀಡಲಾಗುವುದು ಅಲ್ಲದೆ ಅವರ ಮೊಬೈಲ್ ನಂಬರನ್ನು ಈ ವೇಳೆ ನೀಡಲಾಗುವುದು, ಅಲ್ಲದೆ ಫಲಾನುಭವಿಗಳನ್ನು ಭೇಟಿಯಾಗುವಂತೆಯೂ ತಿಳಿಸಲಾಗುವುದು ಆದ್ಯತೆಯ ಮೇರೆಗೆ ಈ ಫಲಾನುಭವಿಗಳಿಗೆ ಸಾಲದ ನೆರವು ನೀಡುವಂತೆ ಅವರು ನಿದರ್ಶನ ನೀಡಿದರು.
ಸ್ವಾಮಿ ವಿವೇಕಾನಂದ ಯೂತ್ ಲಯಬಲಿಟಿ ಗ್ರೂಪ್ ಗಳ ಚಟುವಟಿಕೆಗಳಿಗೆ ಪ್ರತಿ ಗುಂಪಿಗೆ 10,000 ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿದೆ. ಇದಕ್ಕೆ ಪ್ರಸ್ತಾವನೆ ಸಲ್ಲಿಸುವ ಜಿಲ್ಲೆಯ ಎಲ್ಲಾ ಗುಂಪುಗಳಿಗೆ ಅರ್ಜಿ ಸ್ವೀಕರಿಸಿದ ಏಳು ದಿನದೊಳಗೆ ಮಂಜೂರಾತಿ ನೀಡುವಂತೆ ಸೂಚನೆ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ಮೇಲುಸ್ತುವಾರಿ ವಹಿಸುವಂತೆಯೂ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸ್ತ್ರೀ ಸಾಮಥ್ರ್ಯ ಅಭಿವೃದ್ಧಿ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ಬಾಕಿ ಇಡಬಾರದು, ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಇತ್ಯರ್ಥ ಪಡಿಸಬೇಕು ಎಂದು ತಿಳಿಸಿದ ಜಿಪಂ ಸಿಇಒ, ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಪ್ರಾರಂಭದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಎಲ್ಲಾ ಬ್ಯಾಂಕುಗಳ ಹಿರಿಯ ಮ್ಯಾನೇಜರ್ಗಳು ಎಸ್‍ಒಪಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, 10 ಲಕ್ಷಕ್ಕೂ ಮೇಲ್ಪಟ್ಟ ಹಣದ ವರ್ಗಾವಣೆ, ಅನುಮಾನಸ್ಪದ ವಹಿವಾಟು ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು, ಅದೇ ರೀತಿ ಎಟಿಎಂ ಗಳಿಗೆ ಹಣ ಸಾಗಿಸುವ ಸಂದರ್ಭದಲ್ಲಿಯೂ ನೀಡಲಾದ ಎಸ್ ಒ ಪಿಯನ್ನು ಅಗತ್ಯವಾಗಿ ಪಾಲಿಸಬೇಕು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳ ನಿರ್ದೇಶನಗಳನ್ನು ಚಾಚು ತಪ್ಪದೇ ಅನುಸರಿಸಬೇಕು ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್‍ನ ಎಫ್‍ಐಡಿಡಿ ಗುರುರಾಜ ಆಚಾರ್ಯ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿಮ ಪಾಲಿಸಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಹಾಗಾಗಿ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಂತೆ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದರು.
ನಬಾರ್ಡ್‍ನ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಅಭಿವೃದ್ಧಿ ಮ್ಯಾನೇಜರ್ ಸಂಗೀತ ಕರ್ತ, ಕೆನರಾ ಬ್ಯಾಂಕ್‍ನ ಉಪ ಮಹಾ ಪ್ರಬಂಧಕ ಶ್ರೀಕಾಂತ್ ವಿ.ಕೆ. ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ. ವೇದಿಕೆಯಲ್ಲಿದ್ದರು.ಇದೇ ವೇಳೆ 2023-24ರ ಜಿಲ್ಲಾ ಸಾಲ ಯೋಜನೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು.
ಜಿಲ್ಲೆಯ 2023-24ರ ಒಟ್ಟು ಸಾಲ ಯೋಜನೆ 22,718 ಕೋಟಿ ರೂ.ಗಳು ಮತ್ತು ಆದ್ಯತಾವಲಯಕ್ಕೆ 15,374 ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.
ಆದ್ಯತಾ ವಲಯದ ಪ್ರಮುಖ ಕ್ಷೇತ್ರಗಳ ಗುರಿ ಇಂತಿದೆ.
ವ್ಯವಸಾಯ ಕ್ಷೇತ್ರಕ್ಕೆ 7,640 ಕೋಟಿ, ಎಂಎಸ್‍ಎಂಇಗೆ 5,893 ಕೋಟಿ, ವಸತಿಗೆ 1,463 ಕೋಟಿ ಹಾಗೂ ಶಿಕ್ಷಣಕ್ಕೆ 117 ಕೋಟಿ ರೂ.ಗಳು.
ಈ ಗುರಿಯನ್ನು ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ, ವಾಣಿಜ್ಯ, ಸಹಕಾರಿ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನಿರ್ವಹಣೆ ಮತ್ತು ಸಂಭಾವ್ಯತೆ ಆಧಾರದ ಮೇಲೆ ಹಂಚಲಾಗಿದೆ.