ಇತ್ತೀಚಿನ ಸುದ್ದಿ
ದ.ಕ. ಜಿಲ್ಲೆ: 8 ಕ್ಷೇತ್ರಗಳ ಒಟ್ಟು 60 ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರ; ಬಿಜೆಪಿ, ಎಎಪಿ, ಕಾಂಗ್ರೆಸ್ ಎಲ್ಲ ಕಡೆ ಸ್ಪರ್ಧೆ
09/05/2023, 20:36

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಅಂತಿಮ ಕಣದಲ್ಲಿರುವ ಒಟ್ಟು 60 ಮಂದಿ ಅಭ್ಯರ್ಥಿಗಳ ಭವಿಷ್ಯ ನಾಳೆ(ಮೇ 10) ನಿರ್ಧಾರವಾಗಲಿದೆ. ರಾಜ್ಯದ ಎಲ್ಲ 224 ವಿಧಾನಸಭೆ ಕ್ಷೇತ್ರಗಳಲ್ಲಿ ನಾಳೆ ಏಕಕಾಲಕ್ಕೆ
ಮತದಾನ ನಡೆಯಲಿದೆ.
ದ.ಕ. ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಎಲ್ಲ 8 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜನತಾ ದಳ ಮಂಗಳೂರು(ಉಳ್ಳಾಲ) ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಸ್ಪರ್ಧಿಸುತ್ತಿದೆ. 10 ಮಂದಿ ಪಕ್ಷೇತರರು ಅಖಾಡದಲ್ಲಿದ್ದಾರೆ. ಆರ್ ಯುಪಿಪಿ 19 ಮಂದಿ ಸ್ಪರ್ದಿಸುತ್ತಿದ್ದಾರೆ. ವರ್ಷಪೂರ್ತಿ ಬೀದಿಯಲ್ಲಿ ಜನಪರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಿರುವ ಎಡಪಕ್ಷಗಳು ಜಿಲ್ಲೆಯಲ್ಲಿ ಒಂದೇ ಒಂದು ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸದೆ ಬಿಜೆಪಿ ವಿರುದ್ಧ ಹೋರಾಟಕ್ಕೆ ಇಳಿದಿರುವುದು ವಿಶೇಷವಾದರೆ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಆಮ್ ಆದ್ಮಿ ಪಾರ್ಟಿ ಎಲ್ಲ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಸುಳ್ಯ ಕ್ಷೇತ್ರ ಹೊರತುಪಡಿಸಿದರೆ ಜಿಲ್ಲೆ ಯಲ್ಲಿ ಎಎಪಿ ಸ್ಪರ್ಧೆ ಹೆಸರಿಗಷ್ಟೇ ಸೀಮಿತವಾಗಿದೆ. ಸುಳ್ಯ ಎಎಪಿ ಅಭ್ಯರ್ಥಿ ಸುಮನಾ ಅವರು ಕ್ಷೇತ್ರದ ಪ್ರತಿ ಮನೆ ಮನೆಗೆ ಬೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ಇಲ್ಲಿ ಎಎಪಿಯಿಂದ ತಕ್ಕ ಮಟ್ಟಿನ ರೋಡ್ ಶೋ ಕೂಡ ನಡೆದಿದೆ. ಉಳಿದಂತೆ ಎಎಪಿ ಅಭ್ಯರ್ಥಿಗಳು ಬರೇ ಮಾರ್ಕೇಟ್ ಗಳಿಗೆ ಮತ್ತು ಕೆಲವು ಪ್ರದೇಶದ ಅಂಗಡಿಗಳಿಗೆ ಮಾತ್ರ ಭೇಟಿ ನೀಡಿ ಮತಬೇಟೆ ನಡೆಸಿದ್ದಾರೆ. ಇದು ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮಾತ್ರ ತಿರುಗಾಡಿದ್ದು. ಜನತಾ ದಳ ಕೂಡ ಹೆಸರಿಗಷ್ಟೇ ಸ್ಪರ್ದೆ ನಡೆಸುತ್ತಿದೆ. ಅಭ್ಯರ್ಥಿ ಗಳು ಮತದಾರರನ್ನು ಭೇಟಿಯಾಗುವ ಪ್ರಯತ್ನ ಮಾಡಿಲ್ಲ. ಜಿಲ್ಲೆಯ ಎರಡು ಪ್ರಬಲ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕೂಡ ಎಲ್ಲ ಮನೆಗಳಿಗೆ ಭೇಟಿ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗಳಿಗೆ ಎರಡೆರಡು ಬಾರಿ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಕೂಡ ತಮ್ಮ ಕರಪತ್ರವನ್ನು ಹೌಸಿಂಗ್ ಕಾಲೋನಿಗಳಿಗೆ ಮುಟ್ಟಿಸಿದ್ದಾರೆ.
ದ.ಕ. ಜಿಲ್ಲೆಯ ಅಂತಿಮ ಕಣದಲ್ಲಿ ಒಟ್ಟು 60 ಮಂದಿ ಅಭ್ಯರ್ಥಿಗಳಿದ್ದಾರೆ. ಇವರ ಪೈಕಿ 52 ಮಂದಿ ಪುರುಷರು ಹಾಗೂ 8 ಮಂದಿ ಮಹಿಳೆಯರು.