ಇತ್ತೀಚಿನ ಸುದ್ದಿ
ಕೋವಿಡ್ ಸೋಂಕಿತರ ಪ್ರಮಾಣ ತಗ್ಗಿಸಲು ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ತಂಡ ರಚನೆ
16/06/2021, 10:35
ಮಂಗಳೂರು (reporterkarnataka news): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತ್ತಿಯಲ್ಲಿ ಪ್ರಸ್ತುತ ಶೇ.17ರಷ್ಟು ಕೋವಿಡ್ ಸೋಂಕಿತರ ಪ್ರಮಾಣ ವರದಿಯಾಗುತ್ತಿದ್ದು ಕೋವಿಡ್ ಪರೀಕ್ಷೆ ಪ್ರಮಾಣವನ್ನು ವ್ಯಾಪಕವಾಗಿ ಹೆಚ್ಚಿಸಿಕೊಂಡು ಕೋವಿಡ್ 19 ಪಾಸಿಟಿವ್ ಪ್ರಕರಣಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ತಂಡ ರಚಿಸಲಾಗಿದೆ.
ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳು ತಪಾಸಣೆಗಾಗಿ ಸುತ್ತಾಡುತ್ತಿರುವುದರಿಂದ ಮತ್ತಷ್ಟು ಸೋಂಕು ಹರಡುವ ಸಾಧ್ಯತೆಗಳಿರುವುದನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಪತ್ತೆ ಹಚ್ಚಲಾಗುವ ಪ್ರಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ತಂಡವನ್ನು ರಚಿಸಲಾಗಿದೆ.
ಈ ತಂಡವು ಸೋಂಕಿನ ಲಕ್ಷಣಗಳುಳ್ಳ ವ್ಯಕ್ತಿಗಳ ಸ್ಥಳಕ್ಕೆ ಬಂದು ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಲು ಪಾಲಿಕೆ ವತಿಯಿಂದ ಕೋವಿಡ್ ಪರೀಕ್ಷೆಗಾಗಿ ಸಂಪರ್ಕಿಸಿ ಎಂಬ ಪರಿಕಲ್ಪನೆಯಲ್ಲಿ ಪ್ರತ್ಯೇಕವಾದ ದೂ ಸಂ: 0824-2455674 ನ್ನು ನಿಗಧದಿಪಡಿಸಿಕೊಂಡು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.ಈ ಸಹಾಯವಾಣಿ ಕೇಂದ್ರವು ಪ್ರತಿ ದಿನ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಕಾರ್ಯಾಚರಿಸಲಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕಾರ್ಯಚರಣೆಯನ್ನು ನಡೆಸಲಾಗಿದ್ದು, ಜೂನ್ 11ರಂದು ಒಟ್ಟು 20 ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳು ಕಂಡು ಬಂದಿದ್ದು, ರೂ. 16,500 ದಂಡವನ್ನು ವಿಧಿಸಲಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ