ಇತ್ತೀಚಿನ ಸುದ್ದಿ
ಕಾಂಗ್ರೆಸ್‌ನ ಗೂಂಡಾಗಳಿಂದ ನಾರಾಯಣಸ್ವಾಮಿ ಮೇಲೆ ದಾಳಿ; ಸಚಿವ ಪ್ರಿಯಾಂಕ್ ಖರ್ಗೆ ಕೈವಾಡ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪ
22/05/2025, 20:17

ಬೆಂಗಳೂರು(reporterkarnataka.com): ಕಾಂಗ್ರೆಸ್‌ನ ಗೂಂಡಾಗಳು ಕಾನೂನು ಕೈಗೆ ತೆಗೆದುಕೊಂಡು ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ದಾಳಿ ಮಾಡಿದ್ದಾರೆ. ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಇದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ರಾಜಭವನದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ಕಾರಿನ ಮೇಲೆ ಕಾಂಗ್ರೆಸ್ ಗೂಂಡಾಗಳು ದಾಳಿ ಮಾಡಿದ್ದಾರೆ. ಸರ್ಕಾರ ಮಾಡಿರುವ ತಪ್ಪುಗಳ ವಿರುದ್ಧ ನಾರಾಯಣಸ್ವಾಮಿ ಮಾತಾಡಿದ್ದಾರೆ. ಆದರೆ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಲಾಗಿದೆ. ಇದೇ ರೀತಿ ಸಿ.ಟಿ.ರವಿ ಅವರ ಮೇಲೂ ದಾಳಿ ಮಾಡಲಾಗಿತ್ತು. ಪೊಲೀಸರು ನಾರಾಯಣಸ್ವಾಮಿ ಅವರಿಗೆ ರಕ್ಷಣೆ ನೀಡಿಲ್ಲ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಟ್ಟಿಲ್ಲ ಎಂದು ದೂರಿದರು.
ನಾರಾಯಣಸ್ವಾಮಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಕಾರಿನ ಮೇಲೆ ಬಣ್ಣ, ಮೊಟ್ಟೆ ಹಾಕಲಾಗಿದೆ. ಕೊಲೆ ಬೆದರಿಕೆ ಹಾಕಲಾಗಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಪ್ರತಿಪಕ್ಷ ನಾಯಕರ ಕರ್ತವ್ಯ. ಅದನ್ನು ಅವರು ಸರಿಯಾಗಿಯೇ ಮಾಡಿದ್ದಾರೆ. ನಾಯಿ ಬೊಗಳಿದರೆ ಸ್ವರ್ಗ ಹಾಳಾಗಲ್ಲ ಎಂಬುದು ಗಾದೆ ಮಾತು ಅಷ್ಟೆ. ಕಲಬುರ್ಗಿಯಲ್ಲಿ ಇದು ಹೊಸದಲ್ಲ. ಇದು ಪ್ರತಿ ದಿನದ ಕಾಯಕವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಇದರ ಹಿಂದೆ ಇದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರವನ್ನು ಯಾರು ನೀಡಿದ್ದಾರೆ? ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗೂಂಡಾಗಿರಿ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ನಾರಾಯಣಸ್ವಾಮಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಪೊಲೀಸರು ಹಾಗೂ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.