ಇತ್ತೀಚಿನ ಸುದ್ದಿ
ಕಾಂಗ್ರೆಸ್ ಎ ಟೂ ಝೆಡ್ ಹಗರಣ ಮಾಡಿದೆ: ಶಾಸಕ ವೇದವ್ಯಾಸ್ ಕಾಮತ್ ಟೀಕೆ
18/06/2022, 16:17
ಮಂಗಳೂರು(reporterkarnataka.com); ಕಾಂಗ್ರೆಸ್ ಪಕ್ಷ ಹುಟ್ಟಿಕೊಂಡಿರುವುದೇ ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುದಕ್ಕಾಗಿ. ದೇಶದಲ್ಲಿ ಕಾಂಗ್ರೆಸ್ ಎ ಟೂ ಝೆಡ್ ಹಗರಣಗಳನ್ನು ಮಾಡಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಗರಣಗಳಲ್ಲಿ ಭಾಗಿಯಾಗದಿದ್ದರೆ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಬೀದಿಗಿಳಿದು ಗಲಭೆ ಎಬ್ಬಿಸದೆ ತನಿಖೆಗೆ ಸಹಕಾರ ನೀಡಿ ದೋಷಮುಕ್ತರಾಗಬೇಕಿತ್ತು. ಆದರೆ ಅವರು ದೊಂಬಿ ಎಬ್ಬಿಸಿ ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿಯವರನ್ನು ತನಿಖೆಗೆ ಒಳಪಡಿಸಿದ ಘಟನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡಬೇಕಿತ್ತೇ ಹೊರತು ಬೀದಿಗಿಳಿದು ಕಲ್ಲು ಹೊಡೆದು, ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಪಡಿಸುವ ಮೂಲಕವಲ್ಲ. ಕಾಂಗ್ರೆಸ್ ನಾಯಕರು ಸಂವಿಧಾನ ವಿರೋಧಿ ಧೋರಣೆ ತಳೆಯುತಿದ್ದಾರೆ. ದೇಶದ ಆಸ್ತಿಯನ್ನು ಲೂಟಿ ಹೊಡೆಯುವ ಯಾರೇ ಆದರೂ ಕಾನೂನಾತ್ಮಕವಾಗಿ ಬಂಧಿಸಲು ಸಂವಿಧಾನದಲ್ಲಿ ಅವಕಾಶವಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪ್ರಶ್ನಾತೀತರಲ್ಲ. ಹಗರಣವನ್ನೇ ಆಡಳಿತ ಮಂತ್ರವಾಗಿಸಿಕೊಂಡಿದ್ದ ಕಾಂಗ್ರೆಸ್ ಪರಿವಾರಕ್ಕೆ ಬಂಧನದ ಭೀತಿ ಎದುರಾಗಿದೆ. ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಕಠಿಣ ಶಿಕ್ಷೆ ಅನುಭವಿಸಲೇ ಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಗಲಭೆಗೆ ಕುಮ್ಮಕ್ಕು ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ಸಂವಿಧಾನ ಬದ್ಧ ಪ್ರತಿಭಟನೆಯ ಬದಲಾಗಿ ಗೂಂಡಾ ಪ್ರವೃತ್ತಿಯ ಮೂಲಕ ಜನರಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ದೇಶದಲ್ಲಿ ಗಲಭೆ ಹಬ್ಬಿಸಲು ಪ್ರಯತ್ನಿಸುತಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರವು ಇತ್ತೀಚೆಗೆ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಬೆಂಕಿ ಹಚ್ಚುತ್ತಿರುವುದು ಸೇನಾಕಾಂಕ್ಷಿಗಳಲ್ಲ, ಅವರೆಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಆಗಿದ್ದಾರೆ. ಸೇನಾಕಾಂಕ್ಷಿಗಳಲ್ಲಿರುವ ಶಿಸ್ತು, ಬದ್ಧತೆ ಯಾವುದೂ ಅವರಲ್ಲಿ ಕಾಣುತ್ತಿಲ್ಲ. ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸೈನಿಕ ಮನೋಭಾವ ನಿರ್ಮಾಣದ ಯೋಚನೆಯಿಂದ ಅಗ್ನಿಪಥ ಯೋಜನೆ ರೂಪಿಸಲಾಗಿದೆ. ನಾಲ್ಕು ವರ್ಷಗಳ ಕಾಲ ಅಗ್ನಿವೀರರಾಗಿ ಸೇವೆ ಸಲ್ಲಿಸಿದ ಬಳಿಕ ಅವರ ಅರ್ಹತೆಯ ಮೇರೆಗೆ ಸೇನೆಗೆ ನಿಯೋಜಿಸುವುದು ಹಾಗೂ ಉಳಿದವರಿಗೂ ದೇಶದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶವಿದೆ. 70ರ ದಶಕದಲ್ಲಿ ಇದೇ ರೀತಿ 9 ವರ್ಷಗಳಿಗೆ ನೇಮಕ ಮಾಡಿಕೊಳ್ಳಲಾಗುತಿತ್ತು. ಅನಂತರ ಉತ್ತಮ ಸೇವೆ ಸಲ್ಲಿಸಿದರೆ ಮತ್ತೆ ಆರು ವರ್ಷ ವಿಸ್ತರಣೆಯಾಗುತಿತ್ತು. ಇಲ್ಲಿ ಉದ್ಯೋಗ ಅಭದ್ರತೆಯ ಪ್ರಶ್ನೆಯೇ ಹುಟ್ಟುವುದಿಲ್ಲ.
ತಮ್ಮ ರಾಜಕೀಯ ಲಾಭಕ್ಕಾಗಿ ಯುವ ಜನತೆಯ ಬದುಕನ್ನು ಬಲಿಗೊಡಲು ಕಾಂಗ್ರೆಸ್ ಹೇಸುವುದಿಲ್ಲ. ಗೂಂಡಾ ಪ್ರವೃತ್ತಿ ಪ್ರದರ್ಶಿಸಿ ದೇಶದ ಜನರ ಬದುಕನ್ನು ಬೀದಿಗೆಳೆದರು ಕಾಂಗ್ರೆಸ್ ನಾಮಾವಶೇಷವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.