5:34 AM Monday30 - December 2024
ಬ್ರೇಕಿಂಗ್ ನ್ಯೂಸ್
ಕೊಕ್ಕಡ ದೇಗುಲದ ಅಚ್ಚುಮೆಚ್ಚಿನ ಶ್ಯಾಮ ಇನ್ನು ನೆನಪು ಮಾತ್ರ: ಅಲ್ಪಕಾಲದ ಅನಾರೋಗ್ಯದಿಂದ ದೇವರಪಾದ… ಸೂತಕದ ಮನೆಯಂತಿದ್ದ ಮುರುಡೇಶ್ವರ ಕಡಲ ಕಿನಾರೆಗೆ ಮತ್ತೆ ರಂಗು: ಮೋಜು- ಮಸ್ತಿಗೆ ಜಿಲ್ಲಾಡಳಿತ… ನಂಜನಗೂಡು: ಸೂರಹಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಆಗ್ರಹಿಸಿ ರೈತ ಸಂಘ ಮತ್ತು… ಜನಪ್ರತಿನಿಧಿಗಳು ಸದನದ ಹೊರಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು: ಸ್ಪೀಕರ್ ಖಾದರ್ ಮಾಜಿ ಪ್ರಧಾನಿ, ಆರ್ಥಿಕ ಸುಧಾರಣೆಯ ಹರಿಕಾರ ಡಾ. ಮನಮೋಹನ್ ಸಿಂಗ್ ನಿಧನ 16 ದಿನಗಳ ಬೆಂಗಳೂರು ಹಬ್ಬಕ್ಕೆ ಅದ್ಧೂರಿ ತೆರೆ: 500ಕ್ಕೂ ಅಧಿಕ ಕಾರ್ಯಕ್ರಮ; 2… 28ರಂದು ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ‘ಮಂಗಳೂರು ಕಂಬಳ’: 6 ವಿಭಾಗಗಳಲ್ಲಿ ಸ್ಪರ್ಧೆ ಕೂಡ್ಲಿಗಿ ತಲುಪಿದ ಸನ್ನತಿ ಪಂಚಶೀಲ ಬೌದ್ಧ ಪಾದಯಾತ್ರಿಕರು: ಸನ್ನತಿಯಿಂದ ಬೆಂಗಳೂರಿಗೆ 27ನೇ ಬ್ರಹ್ಮೋತ್ಸವ: ನಂಜನಗೂಡು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವತಿಯಿಂದ ಬೃಹತ್ ಪಾದಯಾತ್ರೆ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇಗುಲದಲ್ಲಿ ಈ ಬಾರಿ ಬಿಕಾಂ ಜಾತ್ರೆ!: ಹಾಗಂದ್ರೆ ಏನು…

ಇತ್ತೀಚಿನ ಸುದ್ದಿ

ಸಿಎಂಟಿಎಐ ದಕ್ಷಿಣ ಭಾರತ ವಲಯದ ಅಧ್ಯಕ್ಷೆಯಾಗಿ ಸಚಿತಾ ನಂದಗೋಪಾಲ್ ನೇಮಕ

02/07/2024, 18:51

ಮಂಗಳೂರು(reporterkarnataka.com): ಕ್ರಿಯೇಟಿವ್ ಮೂವ್​​ಮೆಂಟ್ ಥೆರಪಿ ಅಸೋಸಿಯೇಷನ್ ಆಫ್ ಇಂಡಿಯಾದ (ಸಿಎಂಟಿಎಐ) ದಕ್ಷಿಣ ಭಾರತ ವಲಯ ಅಧ್ಯಕ್ಷರಾಗಿ ಮಂಗಳೂರು ಮೂಲದ ಡಾನ್ಸ್ ಮೂವ್ ಮೆಂಟ್ ಥೆರಪಿ ಫ್ಯಾಸಿಲಿಟೇಟರ್ ಮತ್ತು ಸಾಮಾಜಿಕ ಕಾರ್ಯಕರ್ತೆ, ಸಚಿತಾ ನಂದಗೋಪಾಲ್ ಅವರು ನೇಮಕಗೊಂಡಿದ್ದಾರೆ. ಅವರು ದಕ್ಷಿಣದ ರಾಜ್ಯಗಳಲ್ಲಿ ದೆಹಲಿ ಮೂಲದ ಈ ಪ್ಯಾನ್ ಇಂಡಿಯಾ ಸಂಘಟನೆಯ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಲಿದ್ದಾರೆ.
ಸಚಿತಾ ನಂದಗೋಪಾಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಮಹತ್ವದ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಮಕ್ಕಳು ಮತ್ತು ಯುವಕರ ಶಿಕ್ಷಣ, ಜೀವನ ಕೌಶಲ್ಯ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ಪರ್ಯಾಯ ವಿಧಾನಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ (ಸಿಐಎಲ್) ಎಂಬ ಸಂಸ್ಥೆಯ ಸಹ-ಸ್ಥಾಪಕಿಯೂ ಆಗಿದ್ದಾರೆ. ಅದೇ ರೀತಿ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆ ‘ಅನ್ವೇಷಣಂ’ ನ ಸ್ಥಾಪಕರು ಮತ್ತು ನಿರ್ದೇಶಕರಾಗಿದ್ದಾರೆ.
ಸಿಎಂಟಿಎಐ (CMTAI) ಭಾರತದಲ್ಲಿ ಕ್ರಿಯೇಟಿವ್ ಮೂವ್​​ಮೆಂಟ್​ ಥೆರಪಿ ಕ್ಷೇತ್ರವನ್ನು ಬೆಳೆಸುವ ಮತ್ತು ವೃತ್ತಿಪರಗೊಳಿಸುತ್ತಿರುವ ಪ್ರಧಾನ ಸಂಸ್ಥೆಯಾಗಿದೆ. 2014ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯು ಭಾರತದಲ್ಲಿ ಡಾನ್ಸ್ ಮೂವ್ ಮೆಂಟ್ ಥೆರಪಿ ಮತ್ತು ಇತರ ಸೃಜನಶೀಲ ಕಲಾ ಚಿಕಿತ್ಸೆಗಳ ಕ್ಷೇತ್ರದಲ್ಲಿ ತರಬೇತಿ, ವೃತ್ತಿಪರತೆ, ಮಾನ್ಯತೆ, ಜ್ಞಾನ ಹಂಚಿಕೆ, ವಕಾಲತ್ತು ಮತ್ತು ಸಹಯೋಗಕ್ಕಾಗಿ ಇರುವಂಥ ವೃತ್ತಿಪರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಿಎಂಟಿಎಐ ಎನ್ನುವುದು ಕಾನ್ಸೀಲ್ ಇಂಟರ್​ನ್ಯಾಷನಲ್ ಡೆ ಲಾ ಡಾನ್ಸೆ (ಸಿಐಡಿ, ಪ್ಯಾರಿಸ್) ಮತ್ತು ಅಮೆರಿಕನ್ ಡಾನ್ಸ್ ಥೆರಪಿ ಅಸೋಸಿಯೇಷನ್ (ಎಡಿಟಿಎ) ಸದಸ್ಯ ಸಂಸ್ಥೆಯೂ ಆಗಿದೆ.
ಸಚಿತಾ ನಂದಗೋಪಾಲ್ ಅವರು ತಮ್ಮ 25 ವರ್ಷಗಳ ವೃತ್ತಿ ಬದುಕಿನಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮದ ಉಪನ್ಯಾಸಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು, ಅಲ್ಲಿ ಆ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರು ಬೆಂಗಳೂರಿನ ಸಿಎಂಆರ್ ಸ್ನಾತಕೋತ್ತರ ಮಾಧ್ಯಮ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾಗಿಯೂ, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲೇಸ್​ಮೆಂಟ್ ಅಧಿಕಾರಿಯಾಗಿಯೂ ಮತ್ತು ಯೆನೆಪೋಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಥಿಕ್ಸ್​​ನಲ್ಲಿ ಬೋಧಕ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಕಾಲೇಜ್ ಫಾರ್ ಲೀಡರ್​ಶಿಪ್​ ಆ್ಯಂಡ್​ ಹ್ಯೂಮನ್ ರಿಸೋರ್ಸ್ ಡೆವಲಪ್​ಮೆಂಟ್​​ (ಸಿಎಲ್ಎಚ್​​ಆರ್​​ಡಿ) ನಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿಯ ಪ್ರಮಾಣೀಕೃತ ತರಬೇತುದಾರರಾಗಿರುತ್ತಾರೆ.
ಇನ್ನು, ಅವರ ಸಾಮಾಜಿಕ ವಲಯದ ಚಟುವಟಿಕೆಗಳನ್ನು ಪರಿಗಣಿಸುವುದಾದರೆ, ಸಚಿತಾ ಅವರು ಮಂಗಳೂರು ಟೋಸ್ಟ್ ಮಾಸ್ಟರ್ಸ್ ಕ್ಲಬ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಆ್ಯಂಡ್ ಡೆವಲಪ್ ಮೆಂಟ್ (ಐಎಸ್​​ಟಿಡಿ)ನ ಆಜೀವ ಸದಸ್ಯರಾಗಿದ್ದಾರೆ. ಇತ್ತೀಚೆಗಷ್ಟೇ ಲಯನ್ಸ್ ಇಂಟರ್​​ನ್ಯಾಷನಲ್ ಡಿಸ್ಟ್ರಿಕ್ಟ್ 317ಡಿ ವತಿಯಿಂದ “ಫೆಮ್​ಫ್ಲ್ಯೂಯೆನ್ಸರ್” ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವರು.
ಸಮಾಜದ ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಡಾನ್ಸ್ ಮೂವ್ ಮೆಂಟ್ ಥೆರಪಿಯನ್ನು ವಿವಿಧ ಗುಂಪುಗಳ ಜನರಿಗೆ ತಲುಪಿಸಿರುವುದನ್ನು ಪರಿಗಣಿಸಿ ಸಿಎಂಟಿಎಐ ರಾಷ್ಟ್ರೀಯ ಮಟ್ಟದಲ್ಲಿ ಇವರನ್ನು ಗುರುತಿಸಿದೆ.
ಸಿಎಂಟಿಎಐನ ಚಾಪ್ಟರ್ಸ್ ನಿರ್ದೇಶಕಿ, ಕ್ರಿಯೇಟಿವ್ ಆರ್ಟ್ಸ್ ಥೆರಪಿ ಪ್ರಾಕ್ಟೀಷನರ್ ರಶ್ಮಿ ಬಾಲಕೃಷ್ಣನ್ ಅವರು ಈ ಎಲ್ಲ ನೇಮಕಾತಿಗಳನ್ನು ನಡೆಸಿದ ನಂತರ ಹೊಸ ತಂಡ ಅಧಿಕಾರ ವಹಿಸಿಕೊಂಡಿದೆ.
ಬೆಂಗಳೂರಿನ ಆರೆಂಜ್ ಆರ್ಕ್ ಕಮ್ಯುನಿಟಿ ಸ್ಟುಡಿಯೋ ಸಂಸ್ಥಾಪಕಿ ಮೇಘಾ ಛಲ್ಲಾನಿ ಉಪಾಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದರೆ, ಬೆಂಗಳೂರಿನ ಚಲನೆ/ಭಂಗಿ ವಿಶ್ಲೇಷಣೆ ತಂತ್ರಜ್ಞಾನ ಕಂಪನಿ ನೆಕ್ಸ್ಟ್​​ ಕ್ಯೂ ಪ್ರೈವೇಟ್ ಲಿಮಿಟೆಡ್​​ನ ಸಂಸ್ಥಾಪಕರು ಮತ್ತು ಸಿಇಒ ಸುಬ್ರಹ್ಮಣ್ಯಂ ಮುರಮಲ್ಲ ಅವರು ಕಾರ್ಯದರ್ಶಿಯಾಗಿ ನಾಮ
ನಿರ್ದೇಶನಗೊಂಡಿದ್ದಾರೆ.
ತನ್ನ ಸದಸ್ಯತ್ವ ನೆಲೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ನಮ್ಮ ಸಮಾಜದ ಮಾನಸಿಕ ಆರೋಗ್ಯ ಮತ್ತು ಸಾಮಾನ್ಯ ಯೋಗಕ್ಷೇಮದ ಹಿತದೃಷ್ಟಿಯಿಂದ ನೃತ್ಯ/ಚಲನೆ ಚಿಕಿತ್ಸೆಯನ್ನು ಚಿಕಿತ್ಸಕ ವಿಧಾನವಾಗಿ ಪ್ರಚಾರ ಮಾಡುವಂಥ ಸಿಎಂಟಿಎಐನ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಹೆಜ್ಜೆಯಿಡಲಿದ್ದೇವೆ ಎಂದು ಸಚಿತಾ ನಂದಗೋಪಾಲ್ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು